ಫಾಸ್ಟ್ ಫುಡ್ ಸೇವನೆಯಿಂದ ದೆಹಲಿ ಏಮ್ಸ್‌ನಲ್ಲಿ ಬಾಲಕಿ ಸಾ*ವು!

Untitled design 2025 12 24T094027.085

ನವದೆಹಲಿ: ಆಧುನಿಕ ಜೀವನಶೈಲಿಯಲ್ಲಿ ‘ಫಾಸ್ಟ್ ಫುಡ್’ ಎನ್ನುವುದು ಅನಿವಾರ್ಯದಂತಾಗಿದೆ. ಆದರೆ ಈ ಆಹಾರ ಪದ್ಧತಿಯು ನಮ್ಮ ಜೀವವನ್ನೇ ಬಲಿಪಡೆಯಬಲ್ಲದು ಎಂಬುದಕ್ಕೆ ದೆಹಲಿಯ ಏಮ್ಸ್‌ನಲ್ಲಿ ನಡೆದ ಒಂದು ಘಟನೆ ಸಾಕ್ಷಿಯಾಗಿದೆ. ಜಂಕ್ ಫುಡ್ ಸೇವನೆಯಿಂದ ಜೀರ್ಣಾಂಗ ವ್ಯವಸ್ಥೆ ಸಂಪೂರ್ಣ ಹಾನಿಗೊಳಗಾಗಿ 11ನೇ ತರಗತಿಯ ವಿದ್ಯಾರ್ಥಿನಿಯೊಬ್ಬಳು ಸಾವನ್ನಪ್ಪಿರುವ ಘಟನೆ ದೇಶಾದ್ಯಂತ ಆತಂಕ ಮೂಡಿಸಿದೆ.

ಅಹಾನಾ ಎಂಬ 16 ವರ್ಷದ ವಿದ್ಯಾರ್ಥಿನಿ ಕಳೆದ ಸೋಮವಾರ ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ (AIIMS) ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಳು. ಕರುಳಿನ ತೀವ್ರತರವಾದ ಸೋಂಕಿನಿಂದ ಆಕೆ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಕೇವಲ 16ನೇ ವಯಸ್ಸಿನಲ್ಲಿಯೇ ಆಕೆಯ ಜೀರ್ಣಾಂಗ ವ್ಯವಸ್ಥೆಯು ಸಂಪೂರ್ಣವಾಗಿ ಹದಗೆಟ್ಟಿತ್ತು ಎಂದರೆ ಜಂಕ್ ಫುಡ್ ಎಷ್ಟು ಅಪಾಯಕಾರಿ ಎಂಬುದನ್ನು ಊಹಿಸಬಹುದು.

ಅಹಾನಾಳ ಕುಟುಂಬದವರು ನೀಡಿರುವ ಮಾಹಿತಿ ಪ್ರಕಾರ, ಆಕೆ ಬಾಲ್ಯದಿಂದಲೂ ಮನೆಯಲ್ಲಿ ತಯಾರಿಸಿದ ಆಹಾರಕ್ಕಿಂತ ಮಾರುಕಟ್ಟೆಯಲ್ಲಿ ಸಿಗುವ ಚೌಮಿನ್, ಮ್ಯಾಗಿ, ಪಿಜ್ಜಾ ಮತ್ತು ಬರ್ಗರ್‌ಗಳನ್ನೇ ಅತಿಯಾಗಿ ಇಷ್ಟಪಡುತ್ತಿದ್ದಳು. ಪೋಷಕರು ಎಚ್ಚರಿಕೆ ನೀಡಿದರೂ, ಮನೆಯವರ ಕಣ್ಣು ತಪ್ಪಿಸಿ ಪ್ಯಾಕ್ ಮಾಡಿದ ಆಹಾರ ಪದಾರ್ಥಗಳನ್ನು (Chips & Snacks) ತಿನ್ನುತ್ತಿದ್ದಳು. ದೀರ್ಘಕಾಲದ ಈ ಆಹಾರ ಪದ್ಧತಿಯಿಂದಾಗಿ ಆಕೆಯ ಕರುಳುಗಳು ಪರಸ್ಪರ ಅಂಟಿಕೊಂಡಿದ್ದವು ಎಂದು ಶಸ್ತ್ರಚಿಕಿತ್ಸೆಯ ಸಮಯದಲ್ಲಿ ವೈದ್ಯರು ಪತ್ತೆಹಚ್ಚಿದ್ದಾರೆ.

ನವೆಂಬರ್ 28 ರಂದು ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಾಗ ಅಹಾನಾಳನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ನಡೆದ ಪರೀಕ್ಷೆಯಲ್ಲಿ ಆಕೆಯ ಹೊಟ್ಟೆಯಲ್ಲಿ ದ್ರವ ಸಂಗ್ರಹವಾಗಿರುವುದು ಪತ್ತೆಯಾಯಿತು. ಶಸ್ತ್ರಚಿಕಿತ್ಸೆಯ ಮೂಲಕ ಆಕೆಯ ಹೊಟ್ಟೆಯಿಂದ ಬರೋಬ್ಬರಿ ಏಳು ಲೀಟರ್ ದ್ರವವನ್ನು ಹೊರತೆಗೆಯಲಾಗಿತ್ತು. ಅಷ್ಟರ ಮಟ್ಟಿಗೆ ಸೋಂಕು ಆಕೆಯ ದೇಹವನ್ನು ಆವರಿಸಿತ್ತು.

ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿ ಏಮ್ಸ್‌ಗೆ ದಾಖಲಾದಾಗ ಅಹಾನಾ ಚೇತರಿಸಿಕೊಳ್ಳುವ ಭರವಸೆ ಇತ್ತು. ಆದರೆ ಭಾನುವಾರ ತಡರಾತ್ರಿ ಆಕೆಯ ಸ್ಥಿತಿ ಹಠಾತ್ತನೆ ಹದಗೆಟ್ಟಿತು. ಕರುಳಿನಲ್ಲಿ ಪ್ರಾರಂಭವಾದ ಸೋಂಕು ಶ್ವಾಸಕೋಶಗಳಿಗೆ ಹರಡಿತ್ತು. ಇದರಿಂದ ದೇಹದಲ್ಲಿ ರಕ್ತ ಪರಿಚಲನೆ ಕಡಿಮೆಯಾಗಿ, ಹೃದಯಕ್ಕೆ ರಕ್ತ ಸಾಗಿಸುವ ರಕ್ತನಾಳಗಳು ಮುಚ್ಚಿಹೋಗಿದ್ದವು. ಕೊನೆಗೆ ಹೃದಯಾಘಾತದಿಂದ ಆಕೆ ಸಾವನ್ನಪ್ಪಿದ್ದಾಲೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಘಟನೆಯ ಬೆನ್ನಲ್ಲೇ ಅಮ್ರೋಹಾದ ಮುಖ್ಯ ವೈದ್ಯಾಧಿಕಾರಿ ಡಾ. ಎಸ್.ಪಿ. ಸಿಂಗ್ ಪೋಷಕರಿಗೆ ಕಟ್ಟುನಿಟ್ಟಾದ ಎಚ್ಚರಿಕೆ ನೀಡಿದ್ದಾರೆ. ಫಾಸ್ಟ್ ಫುಡ್‌ಗಳಲ್ಲಿ ಮಸಾಲೆ, ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳು ಅಧಿಕವಾಗಿರುತ್ತವೆ. ಇವು ಮಕ್ಕಳ ನೈಸರ್ಗಿಕ ಹಸಿವನ್ನು ಕೊಲ್ಲುತ್ತವೆ. ತಂಪು ಪಾನೀಯಗಳು, ಫ್ರೆಂಚ್ ಫ್ರೈಗಳು ಮಕ್ಕಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ ಎಂದು ತಿಳಿಸಿದ್ದಾರೆ.

ಅಹಾನಾಳ ಸಾವು ಕೇವಲ ಒಂದು ಅಪಘಾತವಲ್ಲ, ಬದಲಿಗೆ ಅದು ಅನಾರೋಗ್ಯಕರ ಆಹಾರ ಪದ್ಧತಿಯ ಪರಿಣಾಮ. ಮಕ್ಕಳನ್ನು ಜಂಕ್ ಫುಡ್‌ನಿಂದ ದೂರವಿಟ್ಟು, ನೈಸರ್ಗಿಕ ಮತ್ತು ಮನೆಯಲ್ಲಿ ತಯಾರಿಸಿದ ಪೌಷ್ಟಿಕ ಆಹಾರದ ಕಡೆಗೆ ಪ್ರೇರೇಪಿಸುವುದು ಇಂದಿನ ತುರ್ತು ಅಗತ್ಯವಾಗಿದೆ.

Exit mobile version