ನವದೆಹಲಿ: ಪರಿಸರ ಸ್ನೇಹಿ ಸಾರಿಗೆ ವ್ಯವಸ್ಥೆಗೆ ಮತ್ತೊಂದು ಮಹತ್ವದ ಹೆಜ್ಜೆಯಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹೈಡ್ರೋಜನ್ ಇಂಧನ ಚಾಲಿತ ‘ನಮೋ ಗ್ರೀನ್ ರೈಲಿಗೆ ಚಾಲನೆ ನೀಡಿದ್ದಾರೆ. ಹಸಿರು ಇಂಧನ ತಂತ್ರಜ್ಞಾನವನ್ನು ಅಳವಡಿಸಿಕೊಂಡಿರುವ ಈ ರೈಲು ಭಾರತದ ರೈಲ್ವೆ ಕ್ಷೇತ್ರದಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡಲಿದೆ.
ಈ ಹೈಡ್ರೋಜನ್ ಚಾಲಿತ ರೈಲು ಹರಿಯಾಣದ ಜಿಂದ್‌ನಿಂದ ಸೋನಿಪತ್‌ವರೆಗೆ ಸಂಚರಿಸಲಿದ್ದು, ಸುಮಾರು 89 ಕಿಲೋಮೀಟರ್ ದೂರವನ್ನು ಒಂದು ಗಂಟೆಯೊಳಗೆ ಕ್ರಮಿಸಲಿದೆ. ರೈಲು ಗರಿಷ್ಠ ಗಂಟೆಗೆ 120 ಕಿಲೋಮೀಟರ್ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.
ಈ ರೈಲಿನ ಪ್ರಮುಖ ವಿಶೇಷತೆ ಎಂದರೆ, ಇದು ಹೈಡ್ರೋಜನ್ ಅನಿಲವನ್ನು ಇಂಧನವಾಗಿ ಬಳಸಿಕೊಂಡು ವಿದ್ಯುತ್ ಉತ್ಪಾದಿಸುತ್ತದೆ. ಅಗತ್ಯ ಸಂದರ್ಭಗಳಲ್ಲಿ ಬಳಸಲು ವಿದ್ಯುತ್ ಬ್ಯಾಕಪ್ ವ್ಯವಸ್ಥೆಯನ್ನೂ ಅಳವಡಿಸಲಾಗಿದೆ. ರೈಲು ಸಂಚಾರದ ವೇಳೆ ಸಾಂಪ್ರದಾಯಿಕ ಡೀಸೆಲ್ ಎಂಜಿನ್‌ಗಳಂತೆ ಹೊಗೆ ಅಥವಾ ಹಾನಿಕಾರಕ ಅನಿಲಗಳನ್ನು ಹೊರಸೂಸದೆ, ನೀರು ಮತ್ತು ಶಾಖವನ್ನು ಮಾತ್ರ ಹೊರಹಾಕುತ್ತದೆ. ಹೀಗಾಗಿ ಇದು ಸಂಪೂರ್ಣ ಪರಿಸರ ಸ್ನೇಹಿ ತಂತ್ರಜ್ಞಾನ ಹೊಂದಿದ ರೈಲಾಗಿ ಗುರುತಿಸಿಕೊಂಡಿದೆ.
ಸುಮಾರು 2,600 ಪ್ರಯಾಣಿಕರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿರುವ ಈ ರೈಲು, ಸಾರ್ವಜನಿಕ ಸಾರಿಗೆಯಲ್ಲಿ ಹಸಿರು ಇಂಧನ ಬಳಕೆಯನ್ನು ಉತ್ತೇಜಿಸುವ ಪ್ರಮುಖ ಹೆಜ್ಜೆಯಾಗಿದೆ. ರೈಲ್ವೆ ಇಲಾಖೆ ಮಾಹಿತಿ ಪ್ರಕಾರ, ಇಂತಹ ಹೈಡ್ರೋಜನ್ ರೈಲುಗಳ ಬಳಕೆಯಿಂದ ಪ್ರತಿ ವರ್ಷ ಸುಮಾರು 11 ಸಾವಿರ ಟನ್ ಕಾರ್ಬನ್ ಮಾಲಿನ್ಯವನ್ನು ತಡೆಗಟ್ಟುವ ಗುರಿ ಹೊಂದಲಾಗಿದೆ.
ಭಾರತದಲ್ಲಿ ಶುದ್ಧ ಇಂಧನ ಮತ್ತು ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡುತ್ತಿರುವ ಕೇಂದ್ರ ಸರ್ಕಾರ, ಹೈಡ್ರೋಜನ್ ಆಧಾರಿತ ಸಾರಿಗೆ ವ್ಯವಸ್ಥೆಯನ್ನು ವಿಸ್ತರಿಸುವತ್ತ ಗಮನ ಹರಿಸಿದೆ. ‘ನಮೋ ಗ್ರೀನ್ ರೈಲು’ ಯೋಜನೆ ದೇಶದಲ್ಲಿ ಪರಿಸರ ಸ್ನೇಹಿ ರೈಲು ಸಂಚಾರಕ್ಕೆ ಹೊಸ ದಿಕ್ಕು ನೀಡಲಿದ್ದು, ಭವಿಷ್ಯದಲ್ಲಿ ಇಂತಹ ರೈಲುಗಳ ಸಂಖ್ಯೆಯನ್ನು ಹೆಚ್ಚಿಸುವ ಯೋಜನೆಯೂ ಇದೆ.
ಈ ತಂತ್ರಜ್ಞಾನಗಳು ಭಾರತ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ ಅಷ್ಟೇ ಅಲ್ಲದೇ ಈ ರೀತಿಯ ಹೊಸ ಹೊಸ ರೀತಿಯ ಆವಿಷ್ಕಾರಗಳಿಂದ ಇಂಧನ ಉಳಿತಾಯ ಸಹ ಆಗುತ್ತದೆ. ಇಷ್ಟೆ ಅಲ್ಲದೆ ಇಂಧನ ಆಮದು ಸಹ ಉಳಿತಾಯವಾಗುತ್ತದೆ.
