NEET UG 2026 ಮರುಪರೀಕ್ಷೆ ಫಲಿತಾಂಶ ಪ್ರಕಟ: 11.21 ಲಕ್ಷ ವಿದ್ಯಾರ್ಥಿಗಳು ಪಾಸ್‌

01

ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) NEET UG 2026 ಮರುಪರೀಕ್ಷೆಯ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಿದೆ. ವೈದ್ಯಕೀಯ ಶಿಕ್ಷಣದ ಕನಸು ಹೊತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳ ನಿರೀಕ್ಷೆಗೆ ತೆರೆ ಬಿದ್ದಿದ್ದು, ಈ ಬಾರಿ ಒಟ್ಟು 11.21 ಲಕ್ಷ ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಫಲಿತಾಂಶವನ್ನು NTAಯ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದ್ದು, ವಿದ್ಯಾರ್ಥಿಗಳು ತಮ್ಮ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸುವ ಮೂಲಕ ಸ್ಕೋರ್‌ಕಾರ್ಡ್‌ ಅನ್ನು ಪರಿಶೀಲಿಸಬಹುದು.

ಈ ವರ್ಷದ ಫಲಿತಾಂಶದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳ ಸಂಖ್ಯೆಯೂ ಗಮನ ಸೆಳೆದಿದೆ. ಒಟ್ಟು 720 ಅಂಕಗಳಲ್ಲಿ 690ಕ್ಕೂ ಹೆಚ್ಚು ಅಂಕಗಳನ್ನು 138 ಅಭ್ಯರ್ಥಿಗಳು ಗಳಿಸಿದ್ದಾರೆ. ಇವರಲ್ಲಿ ಶೇ.93ಕ್ಕೂ ಹೆಚ್ಚು ಮಂದಿ ಮೊದಲ ಬಾರಿಗೆ NEET ಪರೀಕ್ಷೆ ಬರೆದ ಅಭ್ಯರ್ಥಿಗಳಾಗಿದ್ದಾರೆ ಎಂಬುದು ವಿಶೇಷ. ಅಲ್ಲದೆ, 690ಕ್ಕೂ ಹೆಚ್ಚು ಅಂಕ ಪಡೆದವರಲ್ಲಿ ಶೇ.99 ಅಭ್ಯರ್ಥಿಗಳು 17 ರಿಂದ 19 ವರ್ಷದೊಳಗಿನವರಾಗಿದ್ದಾರೆ, ಇದು ಯುವ ವಿದ್ಯಾರ್ಥಿಗಳ ಅದ್ಭುತ ಸಾಧನೆಯನ್ನು ಪ್ರತಿಬಿಂಬಿಸುತ್ತದೆ.

NEET UG ದೇಶದ ವೈದ್ಯಕೀಯ, ದಂತ ವೈದ್ಯಕೀಯ, ಆಯುಷ್ ಹಾಗೂ ಇತರೆ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅತ್ಯಂತ ಪ್ರಮುಖ ರಾಷ್ಟ್ರೀಯ ಪ್ರವೇಶ ಪರೀಕ್ಷೆಯಾಗಿದೆ. ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು ಈಗ ಕೌನ್ಸೆಲಿಂಗ್ ಪ್ರಕ್ರಿಯೆಗೆ ಸಿದ್ಧತೆ ನಡೆಸಬೇಕಿದ್ದು, ಶೀಘ್ರದಲ್ಲೇ Medical Counselling Committee (MCC) ಮತ್ತು ವಿವಿಧ ರಾಜ್ಯಗಳ ಕೌನ್ಸೆಲಿಂಗ್ ವೇಳಾಪಟ್ಟಿಯನ್ನು ಪ್ರಕಟಿಸಲಾಗುತ್ತದೆ.

ಅಭ್ಯರ್ಥಿಗಳು ತಮ್ಮ ಫಲಿತಾಂಶದ ಜೊತೆಗೆ ಸ್ಕೋರ್ಕಾರ್ಡ್‌, ಆಲ್ ಇಂಡಿಯಾ ರ್ಯಾಂಕ್ (AIR), ಪರ್ಸೆಂಟೈಲ್ ಹಾಗೂ ಅರ್ಹತಾ ಸ್ಥಿತಿಯನ್ನು ಪರಿಶೀಲಿಸಬಹುದು. ಮುಂದಿನ ಹಂತದಲ್ಲಿ ಕೌನ್ಸೆಲಿಂಗ್ ನೋಂದಣಿ, ಆಯ್ಕೆ ಪ್ರಕ್ರಿಯೆ ಹಾಗೂ ದಾಖಲೆ ಪರಿಶೀಲನೆ ನಡೆಯಲಿದ್ದು, ಅಭ್ಯರ್ಥಿಗಳು ಅಧಿಕೃತ ಪ್ರಕಟಣೆಗಳನ್ನು ಗಮನಿಸುವಂತೆ ಸೂಚಿಸಲಾಗಿದೆ.

ಈ ಬಾರಿಯ ಫಲಿತಾಂಶದಲ್ಲಿ ಮೊದಲ ಪ್ರಯತ್ನದಲ್ಲೇ ಅತ್ಯುತ್ತಮ ಅಂಕ ಗಳಿಸಿರುವ ವಿದ್ಯಾರ್ಥಿಗಳ ಸಾಧನೆ ದೇಶಾದ್ಯಂತ ಚರ್ಚೆಗೆ ಗ್ರಾಸವಾಗಿದ್ದು, ವೈದ್ಯಕೀಯ ಕ್ಷೇತ್ರಕ್ಕೆ ಹೊಸ ಪ್ರತಿಭೆಗಳ ಆಗಮನಕ್ಕೆ ಇದು ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ.

ನೀಟ್‌ ಪರೀಕ್ಷೆ ವಿದ್ಯಾರ್ಥಿಗಳ ಕನಸನ್ನು ಹೊತ್ತು ನಿಲ್ಲಬೇಕಿದ್ದ ಪರೀಕ್ಷೆ ಎರೆಡು ಬಾರಿ ಸಹ ಪ್ರಶ್ನೆ ಪತ್ರಿಕೆ ಸೋರಿಕೆಯಿಂದ ವಿಫಲವಾಗಿತ್ತು. ಆದರೆ ಈ ಬಾರಿ ಮರು ಪರೀಕ್ಷೆಯನ್ನು ಸಹ ಯಶಸ್ವಿಯಾಗಿ ನಡೆಸಿ ತನ್ನ ಫಲಿತಾಂಶ ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದೆ.

 

Exit mobile version