ನವದೆಹಲಿ, ಜುಲೈ 16: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಅಮೃತ್ ಭಾರತ್ ನಿಲ್ದಾಣ ಯೋಜನೆ ಅಡಿಯಲ್ಲಿ ನವೀಕರಿಸಲಾದ ಕರ್ನಾಟಕದ ನಾಲ್ಕು ರೈಲ್ವೆ ನಿಲ್ದಾಣಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ಜುಲೈ 17ರಂದು ವರ್ಚುವಲ್ ಆಗಿ ಚಾಲನೆ ನೀಡುವ ಮೂಲಕ ದೇಶಕ್ಕೆ ಸಮರ್ಪಿಸಲಿದ್ದಾರೆ. ಈ ಯೋಜನೆಯಡಿ ದೇಶಾದ್ಯಂತ ಪುನರ್‌ಅಭಿವೃದ್ಧಿಗೊಂಡ 75 ರೈಲು ನಿಲ್ದಾಣಗಳನ್ನು ಒಂದೇ ವೇಳೆ ಉದ್ಘಾಟಿಸಲಾಗುತ್ತಿದ್ದು, ಕರ್ನಾಟಕದ ಅಳ್ನಾವರ, ಬಾದಾಮಿ, ಬಂಟ್ವಾಳ ಮತ್ತು ಕೊಪ್ಪಳ ನಿಲ್ದಾಣಗಳು ಇದರಲ್ಲಿ ಸ್ಥಾನ ಪಡೆದಿವೆ.
ಕರ್ನಾಟಕದ ನಿಲ್ಧಾಣಗಳಲ್ಲಿ ಯಾವುದಕ್ಕೆ ಎಷ್ಟು ವೆಚ್ಚ?
ಕರ್ನಾಟಕದ ನಾಲ್ಕು ನಿಲ್ದಾಣಗಳನ್ನು ಒಟ್ಟು ₹79 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗಿದೆ. ಅಳ್ನಾವರವನ್ನು ₹17.2 ಕೋಟಿ, ಬಾದಾಮಿಯನ್ನು ₹15.10 ಕೋಟಿ, ಬಂಟ್ವಾಳವನ್ನು ₹26.18 ಕೋಟಿ ಮತ್ತು ಕೊಪ್ಪಳವನ್ನು ₹21.14 ಕೋಟಿ ವೆಚ್ಚದಲ್ಲಿ ನವೀಕರಿಸಲಾಗಿದೆ ಎಂದು ನೈಋತ್ಯ ರೈಲ್ವೆ (SWR) ತಿಳಿಸಿದೆ.
ಅಮೃತ್ ಭಾರತ್ ನಿಲ್ದಾಣ ಯೋಜನೆಯ ಉದ್ದೇಶವೇನು?
#WATCH | Prime Minister Narendra Modi to inaugurate 75 redeveloped railway stations from all over India from Jalandhar, Punjab tomorrow. The railway stations will be dedicated to the nation under the Amrit Bharat Station Scheme. pic.twitter.com/W1lUCqdFlH
— ANI (@ANI) July 16, 2026
ಅಮೃತ್ ಭಾರತ್ ನಿಲ್ದಾಣ ಯೋಜನೆಯ ಉದ್ದೇಶ ದೇಶದ ರೈಲು ನಿಲ್ದಾಣಗಳನ್ನು ಆಧುನಿಕ ಸೌಲಭ್ಯಗಳೊಂದಿಗೆ ಅಭಿವೃದ್ಧಿಪಡಿಸಿ ಪ್ರಯಾಣಿಕರಿಗೆ ಸುಗಮ, ಸುರಕ್ಷಿತ ಹಾಗೂ ವಿಶ್ವಮಟ್ಟದ ಅನುಭವ ಒದಗಿಸುವುದಾಗಿದೆ. ಈ ನಾಲ್ಕು ನಿಲ್ದಾಣಗಳಲ್ಲೂ ಸ್ಥಳೀಯ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವ ವಿನ್ಯಾಸದೊಂದಿಗೆ ಆಧುನಿಕ ಕಟ್ಟಡಗಳನ್ನು ನಿರ್ಮಿಸಲಾಗಿದೆ.
ನವೀಕರಣದ ಭಾಗವಾಗಿ ವಿಶಾಲ ಪ್ಲಾಟ್‌ಫಾರ್ಮ್ ಶೆಲ್ಟರ್‌ಗಳು, ಸುಧಾರಿತ ಪ್ರವೇಶ ಮಾರ್ಗಗಳು ಹಾಗೂ 12 ಮೀಟರ್ ಅಗಲದ ಪಾದಚಾರಿ ಮೇಲ್ಸೇತುವೆ ನಿರ್ಮಿಸಲಾಗಿದೆ. ಎಲ್ಲಾ ನಿಲ್ದಾಣಗಳಲ್ಲಿ ಲಿಫ್ಟ್‌ಗಳನ್ನು ಅಳವಡಿಸಲಾಗಿದ್ದು, ಕೊಪ್ಪಳ ರೈಲು ನಿಲ್ದಾಣದಲ್ಲಿ ಹೆಚ್ಚುವರಿಯಾಗಿ ಎರಡು ಎಸ್ಕಲೇಟರ್‌ಗಳನ್ನೂ ಸ್ಥಾಪಿಸಲಾಗಿದೆ.
ರೈಲು ನಿಲ್ದಾಣಗಳಲ್ಲಿ ಯಾವುದೆಲ್ಲಾ ವ್ಯವಸ್ಥೆ ಇದೆ
ಪ್ರಯಾಣಿಕರ ಅನುಕೂಲಕ್ಕಾಗಿ ಹವಾನಿಯಂತ್ರಿತ ಕಾಯುವ ಕೊಠಡಿಗಳು, ಸುಧಾರಿತ ಶೌಚಾಲಯಗಳು, ಮಹಿಳೆಯರಿಗಾಗಿ ಪ್ರತ್ಯೇಕ ನಿರೀಕ್ಷಣಾ ಕೊಠಡಿ, ಶಿಶುಗಳಿಗೆ ಆಹಾರ ನೀಡುವ ಕೊಠಡಿ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ಆಟೋ ನಿಲ್ದಾಣ, ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆಯೂ ನಿರ್ಮಿಸಲಾಗಿದೆ.
ಗೋಡೆಗಳಲ್ಲಿ ಸ್ಥಳೀಯ ಸಂಸ್ಕೃತಿಯನ್ನು ಬಿಂಬಿಸುವ ಭಿತ್ತಿಚಿತ್ರ
ಡಿಜಿಟಲ್ ಸೌಲಭ್ಯಗಳಲ್ಲಿಯೂ ಈ ನಿಲ್ದಾಣಗಳು ಹೊಸ ರೂಪ ಪಡೆದುಕೊಂಡಿವೆ. ಎಲ್‌ಇಡಿ ರೈಲು ಮಾಹಿತಿ ಫಲಕಗಳು, ಡಿಜಿಟಲ್ ಗಡಿಯಾರಗಳು, ಸಿಸಿಟಿವಿ ಕ್ಯಾಮೆರಾಗಳು, ಸುಧಾರಿತ ಸಾರ್ವಜನಿಕ ಘೋಷಣೆ ವ್ಯವಸ್ಥೆ, ಉಚಿತ ವೈ-ಫೈ ಹಾಗೂ ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಅಳವಡಿಸಲಾಗಿದೆ. ನಿಲ್ದಾಣಗಳ ಗೋಡೆಗಳಲ್ಲಿ ಸ್ಥಳೀಯ ಸಂಸ್ಕೃತಿಯನ್ನು ಬಿಂಬಿಸುವ ಭಿತ್ತಿಚಿತ್ರಗಳು ಮತ್ತು ಕಲಾಕೃತಿಗಳ ಮೂಲಕ ಸೌಂದರ್ಯವರ್ಧನೆ ಮಾಡಲಾಗಿದೆ.
ಈ ಹಿಂದೆ 2023–24ರಲ್ಲಿ ಪ್ರಧಾನಿ ಮೋದಿ ದೇಶದಾದ್ಯಂತ 1,000ಕ್ಕೂ ಹೆಚ್ಚು ರೈಲು ನಿಲ್ದಾಣಗಳ ಪುನರ್‌ಅಭಿವೃದ್ಧಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಅದರ ಭಾಗವಾಗಿ ಕರ್ನಾಟಕದ ಗದಗ, ಧಾರವಾಡ, ಗೋಕಾಕ್ ರೋಡ್, ಮುನಿರಾಬಾದ್ ಹಾಗೂ ಬಾಗಲಕೋಟೆ ರೈಲು ನಿಲ್ದಾಣಗಳನ್ನು 2025ರಲ್ಲಿ ಉದ್ಘಾಟಿಸಲಾಗಿತ್ತು.
