ಚಂಡೀಗಢ, ಜುಲೈ 16: ಭಾರತೀಯ ರೈಲ್ವೆ ಇತಿಹಾಸದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲು ನಿರ್ಮಿಸುವತ್ತಾ ದಾಪುಗಾಲು ಇಡುತ್ತಿದೆ. ಸಂಪೂರ್ಣ ಸ್ವದೇಶಿ ತಂತ್ರಜ್ಞಾನದಲ್ಲಿ ನಿರ್ಮಿಸಲಾದ ಭಾರತದ ಮೊದಲ ಹೈಡ್ರೋಜನ್ ಚಾಲಿತ ರೈಲಿಗೆ ನಾಳೆ ಜುಲೈ 17ರಂದು ಹರಿಯಾಣದ ಜಿಂದ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಸಿರು ನಿಶಾನೆ ತೋರಿಸಲಿದ್ದಾರೆ. ಈ ಮೂಲಕ ಪರಿಸರ ಸ್ನೇಹಿ ರೈಲು ಸಾರಿಗೆ ಕ್ಷೇತ್ರದಲ್ಲಿ ಭಾರತವು ಜರ್ಮನಿ, ಜಪಾನ್, ಚೀನಾ ಹಾಗೂ ಅಮೆರಿಕದಂತಹ ರಾಷ್ಟ್ರಗಳ ಸಾಲಿಗೆ ಸೇರ್ಪಡೆಯಾಗಲಿದೆ.
ಚೆನ್ನೈನ ಇಂಟಿಗ್ರೇಟೆಡ್ ಕೋಚ್ ಫ್ಯಾಕ್ಟರಿ (ICF)ಯಲ್ಲಿ ವಿನ್ಯಾಸಗೊಳಿಸಲಾದ ಈ ರೈಲು ಸಂಪೂರ್ಣ ಸ್ವದೇಶಿ ತಂತ್ರಜ್ಞಾನವನ್ನು ಒಳಗೊಂಡಿದೆ. ಪ್ರತಿ ರೈಲಿನ ನಿರ್ಮಾಣಕ್ಕೆ ಸುಮಾರು ₹80 ಕೋಟಿ ವೆಚ್ಚವಾಗಿದೆ. ಡೀಸೆಲ್ ರೈಲುಗಳಿಗೆ ಪರ್ಯಾಯವಾಗಿ ಶಬ್ದರಹಿತ ಹಾಗೂ ಮಾಲಿನ್ಯರಹಿತ ಸಂಚಾರವನ್ನು ಒದಗಿಸುವ ಉದ್ದೇಶ ಈ ರೈಲು ಹೊಂದಿದೆ.
ರೈಲಿನ ವಿಶೇಷತೆಯೇನು?
ಹೈಡ್ರೋಜನ್ ಇಂಧನ ಬಳಕೆಯ ಕಾರಣ ಈ ರೈಲಿನಲ್ಲಿ ಕಾರ್ಬನ್ ಹೊರಸೂಸುವಿಕೆ ಅತಿ ಕಡಿಮೆಯಾಗಲಿದ್ದು, ಪರಿಸರ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಲಿದೆ. ಸುರಕ್ಷತೆಯ ದೃಷ್ಟಿಯಿಂದ ಹೈಡ್ರೋಜನ್ ಸೋರಿಕೆ ಪತ್ತೆ ಸಾಧನಗಳು, ಜ್ವಾಲೆ ಪತ್ತೆ ಸೆನ್ಸರ್‌ಗಳು ಹಾಗೂ ಸುಧಾರಿತ ಸುರಕ್ಷತಾ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ. , ಧೂಳು ಕುಳಿತುಕೊಳ್ಳದಂತೆ ಇವುಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸಲಾಗುತ್ತದೆ. ರೈಲು ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಸಿಬ್ಬಂದಿಗೆ ವಿಶೇಷ ತರಬೇತಿ ನೀಡಲಾಗಿದೆ.
ವಿಶ್ವದ ಬಹುತೇಕ ಹೈಡ್ರೋಜನ್ ರೈಲುಗಳು 2 ರಿಂದ 4 ಬೋಗಿಗಳನ್ನು ಮಾತ್ರ ಹೊಂದಿದ್ದರೆ, ಭಾರತದ ಈ ರೈಲು 10 ಬೋಗಿಗಳ ವಿನ್ಯಾಸದೊಂದಿಗೆ ವಿಶ್ವದ ಅತಿದೊಡ್ಡ ಹೈಡ್ರೋಜನ್ ಚಾಲಿತ ಪ್ರಯಾಣಿಕ ರೈಲುಗಳಲ್ಲಿ ಒಂದಾಗಿದೆ. ಇದರಲ್ಲಿ 2 ಹೈಡ್ರೋಜನ್ ಡ್ರೈವಿಂಗ್ ಪವರ್ ಕಾರ್‌ಗಳು ಹಾಗೂ 8 ಟ್ರೈಲರ್ ಕೋಚ್‌ಗಳು ಇರಲಿದ್ದು, ಒಂದೇ ಬಾರಿ ಸುಮಾರು 2,600 ಪ್ರಯಾಣಿಕರು ಪ್ರಯಾಣಿಸಬಹುದು.
ಈ ರೈಲಿನ ವೇಗ ಸಾಮರ್ಥ್ಯ ಎಷ್ಟು?
ಈ ರೈಲು ಹರಿಯಾಣದ ಜಿಂದ್–ಸೋನಿಪತ್ ನಡುವಿನ 89 ಕಿಲೋಮೀಟರ್ ಉದ್ದದ ಮಾರ್ಗದಲ್ಲಿ ಸಂಚರಿಸಲಿದೆ. ಸಾಮಾನ್ಯವಾಗಿ ಗಂಟೆಗೆ 75 ಕಿ.ಮೀ. ವೇಗದಲ್ಲಿ ಓಡಲಿದ್ದು, ಗರಿಷ್ಠ 110 ಕಿ.ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ.
ರೈಲಿನ ವೇಳಾಪಟ್ಟಿ
ರೈಲು ಬೆಳಿಗ್ಗೆ 7:40ಕ್ಕೆ ಜಿಂದ್‌ನಿಂದ ಹೊರಟು 9:40ಕ್ಕೆ ಸೋನಿಪತ್ ತಲುಪಲಿದೆ. ಮಧ್ಯದಲ್ಲಿ ಜಿಂದ್ ಸಿಟಿ, ಪಾಂಡು ಪಿಂಡಾರಾ, ಲಲಿತ್ ಖೇರಾ, ಭಾಂಬೇವಾ, ಬುಟಾನಾ, ಖಾಂದ್ರೈ, ಗೋಹಾನಾ ಸೇರಿದಂತೆ ಒಟ್ಟು 12 ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿರಲಿದೆ.
ಭಾರತೀಯ ರೈಲ್ವೆಯ ಈ ಪ್ರಾಯೋಗಿಕ ಯೋಜನೆ ಹಸಿರು ಇಂಧನ ಬಳಕೆಯನ್ನು ಉತ್ತೇಜಿಸುವುದರ ಜೊತೆಗೆ, ಭವಿಷ್ಯದ ಸುಸ್ಥಿರ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಹೊಸ ದಿಕ್ಕು ತೋರಿಸುವ ಮಹತ್ವದ ಹೆಜ್ಜೆಯಾಗಿದೆ.
