ಚಿತ್ತೂರು: ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ಪತಿಯನ್ನು ಕೊಲೆ ಮಾಡಲು ಪತ್ನಿಯೇ ಪ್ರಿಯಕರನೊಂದಿಗೆ ಸಂಚು ರೂಪಿಸಿದ್ದಾಳೆ ಎಂಬ ಆರೋಪ ಕೇಳಿಬಂದಿದ್ದು, ಪ್ರಕರಣವು ಸಂಚಲನ ಮೂಡಿಸಿದೆ. ತನಿಖೆ ನಡೆಸಿದ ಪೊಲೀಸರು ಕೊಲೆ ಪ್ರಕರಣದಲ್ಲಿ ಪತ್ನಿ ಹಾಗೂ ಆಕೆಯ ಪ್ರಿಯಕರನ ಕೈವಾಡವಿದೆ ಎಂದು ಆರೋಪಿಸಿ ಬಂಧಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯ ಪ್ರಕಾರ, ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ನಿವಾಸಿಯಾಗಿದ್ದ 32 ವರ್ಷದ ರಮೇಶ್ ಅವರು ಸುಮಾರು ಎರಡು ವರ್ಷಗಳ ಹಿಂದೆ 19 ವರ್ಷದ ಹಾಸಿನಿ ಅವರನ್ನು ವಿವಾಹವಾಗಿದ್ದರು. ದಂಪತಿಗೆ ಒಂದು ವರ್ಷದ ಹೆಣ್ಣು ಮಗು ಇದೆ.
ಅಮಾವಾಸ್ಯೆ ಪೂಜೆ ಸಲ್ಲಿಸಲು ದಂಪತಿ ತಮ್ಮ ಮಗುವಿನೊಂದಿಗೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ತೆರಳಿದ್ದರು. ಇದೇ ವೇಳೆ ಹಾಸಿನಿ ತನ್ನ ಪ್ರಿಯಕರ ಯುಗಂಧರ್ಗೆ ದೇವಸ್ಥಾನದ ಸ್ಥಳ ಮಾಹಿತಿ ಕಳುಹಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯ ಪ್ರಕಾರ, ದಂಪತಿ ಬೆಟ್ಟ ಏರುತ್ತಿದ್ದ ವೇಳೆ ಹಾಸಿನಿ ಉದ್ದೇಶಪೂರ್ವಕವಾಗಿ ತನ್ನ ಬ್ಯಾಗ್ ಕೆಳಗೆ ಬೀಳುವಂತೆ ಮಾಡಿ, ರಮೇಶ್ ಅವರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಿದ್ದಾಳೆ ಎನ್ನಲಾಗಿದೆ. ಇದೇ ಸಮಯದಲ್ಲಿ ಅಲ್ಲೇ ಅಡಗಿದ್ದ ದುಷ್ಕರ್ಮಿಗಳು ರಮೇಶ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಳಿಕ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿದಾಗ, ಹಾಸಿನಿ ಹಾಗೂ ಆಕೆಯ ಪ್ರಿಯಕರ ಯುಗಂಧರ್ ಸೇರಿ ಪೂರ್ವಯೋಜಿತವಾಗಿ ಕೊಲೆ ಸಂಚು ರೂಪಿಸಿದ್ದರೆಂಬ ಆರೋಪ ಹೊರಬಂದಿದೆ. ಇಬ್ಬರನ್ನು ಬಂಧಿಸಿರುವ ಪೊಲೀಸರು ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.
ಇತ್ತೀಚಿಗೆ ನಡೆಯುತ್ತಿರುವ ಕೊಲೆ ಹಾನಿಗಳಿಂದ ಇತ್ತೀಚಿನ ಪೀಳಿಗೆ ಯಾವ ಸಂಬಂಧದಲ್ಲಿ ನಂಬಿಕೆ ಇಡಬೇಕೋ ಗೊತ್ತಿಲ್ಲ. ದಿನಕಳೆದಂತೆ ಇತ್ತೀಚಿನ ಜನಾಂಗ ಎಲ್ಲಾ ಸಂಬಂಧದಲ್ಲೂ ನಂಬಿಕೆಯನ್ನು ದಿನೇ ದಿನೇ ಕಳೆದುಕೊಳ್ಳುತ್ತಿದ್ದಾರೆ. ಹಾಗೇ ಮದುವೆಯಾಗಲೂ ಸಹ ಹಿಂದೆ ಮುಂದೆ ನೋಡುವ ಪರಿಸ್ಥಿತಿ ಎದುರಾಗಿದೆ.
