ಭಾರತದ ಸಾಮಾಜಿಕ ಜಾಲತಾಣಗಳಲ್ಲಿ ದಿನಕ್ಕೊಂದು ಹೊಸ ಟ್ರೆಂಡ್ ಹುಟ್ಟಿಕೊಳ್ಳುವುದು ಸಾಮಾನ್ಯ. ಕೆಲವೊಮ್ಮೆ ಸಿನಿಮಾ ಡೈಲಾಗ್, ಕೆಲವೊಮ್ಮೆ ರಾಜಕೀಯ ಹೇಳಿಕೆ, ಮತ್ತೊಮ್ಮೆ ವೈರಲ್ ವಿಡಿಯೋಗಳು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗುತ್ತವೆ. ಇದೀಗ ಅಂತಹದ್ದೇ ಹೊಸ ಟ್ರೆಂಡ್ ಒಂದಾಗಿ “ಕಾಕ್ರೋಚ್ ಜನತಾ ಪಾರ್ಟಿ” ಭಾರೀ ಸದ್ದು ಮಾಡುತ್ತಿದೆ.
ಹೆಸರು ಕೇಳುತ್ತಿದ್ದಂತೆಯೇ ಇದು ಹೊಸ ರಾಜಕೀಯ ಪಕ್ಷವೇನೋ ಎಂದು ಅನೇಕರಿಗೆ ಅನಿಸಬಹುದು. ಆದರೆ ಇದು ನಿಜವಾದ ರಾಜಕೀಯ ಪಕ್ಷವಲ್ಲ. ಬದಲಾಗಿ, ದೇಶದ ನಿರುದ್ಯೋಗಿ ಯುವಕರ ಆಕ್ರೋಶ ಮತ್ತು ವ್ಯಂಗ್ಯದಿಂದ ಹುಟ್ಟಿಕೊಂಡಿರುವ ಡಿಜಿಟಲ್ ಚಳವಳಿಯಾಗಿದೆ.
ಈ ಟ್ರೆಂಡ್ ಹುಟ್ಟಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೇಳಿಕೆ ಕಾರಣವಾಗಿದೆ. ಮೇ 16ರಂದು ಹಿರಿಯ ವಕೀಲ ಸ್ಥಾನಕ್ಕೆ ಸಂಬಂಧಿಸಿದ ಅರ್ಜಿಯ ವಿಚಾರಣೆ ವೇಳೆ ಅವರು ಕೆಲ ಯುವಕರ ಬಗ್ಗೆ ಟೀಕಾತ್ಮಕವಾಗಿ ಮಾತನಾಡಿದ್ದರು. “ಕೆಲವರು ಯಾವುದೇ ಉದ್ಯೋಗ ಪಡೆಯದೇ, ಜೀವನದಲ್ಲಿ ಯಶಸ್ಸು ಕಾಣದೇ ಜಿರಳೆಗಳಂತೆ ಸಮಾಜದ ಮೇಲೆ ದಾಳಿ ಮಾಡುತ್ತಾರೆ. ಅವರು ಸಾಮಾಜಿಕ ಜಾಲತಾಣ ಮತ್ತು ಮಾಹಿತಿ ಹಕ್ಕು ಕಾರ್ಯಕರ್ತರ ರೂಪದಲ್ಲಿ ಕಾಣಿಸಿಕೊಳ್ಳುತ್ತಾರೆ” ಎಂದು ಹೇಳಿಕೆ ನೀಡಿದ್ದರು.
ಈ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಯಿತು. ಉದ್ಯೋಗಕ್ಕಾಗಿ ಹೋರಾಡುತ್ತಿರುವ ಯುವಕರು ಈ ಮಾತನ್ನು ಅವಮಾನಕರ ಎಂದು ಕೊಂಡಾಡಿದರು. “ಕೆಲಸ ಸಿಗದಿರುವುದು ಯುವಕರ ತಪ್ಪೇ?” ಎಂಬ ಪ್ರಶ್ನೆಯನ್ನು ಅನೇಕರೂ ಹೇಳಿದರು.
ಈ ವಿವಾದದ ಬೆನ್ನಲ್ಲೇ “ಕಾಕ್ರೋಚ್ ಜನತಾ ಪಾರ್ಟಿ” ಎಂಬ ವ್ಯಂಗ್ಯಾತ್ಮಕ ಡಿಜಿಟಲ್ ಪಕ್ಷ ಹುಟ್ಟಿಕೊಂಡಿತು. ಯುವಕರು ತಮ್ಮನ್ನೇ “ನಿರುದ್ಯೋಗಿಗಳು”, “ಸೋಮಾರಿಗಳು”, “ಎಂದಿಗೂ ಆನ್‌ಲೈನ್‌ನಲ್ಲಿ ಇರುವವರು” ಎಂದು ವ್ಯಂಗ್ಯವಾಗಿ ಬರೆದುಕೊಂಡು ನ್ಯಾಯಮೂರ್ತಿಯ ಹೇಳಿಕೆಯನ್ನು ಟ್ರೋಲ್ ಮಾಡಲು ಆರಂಭಿಸಿದರು.
ಈ ಅಭಿಯಾನಕ್ಕೆ ಚಾಲನೆ ನೀಡಿದವರು 30 ವರ್ಷದ ಅಭಿಜಿತ್ ದಿಪ್ಕೆ. ಅವರು ಅಮೆರಿಕದ ಬೋಸ್ಟನ್ ವಿಶ್ವವಿದ್ಯಾಲಯದಲ್ಲಿ ಪಬ್ಲಿಕ್ ರಿಲೇಶನ್ಸ್ ವಿದ್ಯಾರ್ಥಿಯಾಗಿದ್ದು, ಹಿಂದೆ ಆಮ್ ಆದ್ಮಿ ಪಕ್ಷದ ಸೋಷಿಯಲ್ ಮೀಡಿಯಾ ತಂಡದಲ್ಲೂ ಕೆಲಸ ಮಾಡಿದ್ದರು. ನ್ಯಾಯಮೂರ್ತಿಯ ಹೇಳಿಕೆ ತಮ್ಮನ್ನು ನೋಯಿಸಿದೆ ಎಂದು ಹೇಳಿದ ಅಭಿಜಿತ್, “ಕಾಕ್ರೋಚ್ ಜನತಾ ಪಾರ್ಟಿ” ಸಂಸ್ಥಾಪಕರಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಂಚಿಕೊಂಡರು.
ಆ ಪೋಸ್ಟ್ ಕೆಲವೇ ಗಂಟೆಗಳಲ್ಲಿ ವೈರಲ್ ಆಯಿತು. ನಂತರ ಇನ್‌ಸ್ಟಾಗ್ರಾಮ್, ಎಕ್ಸ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ “Cockroach Janata Party” ಹೆಸರಿನ ಖಾತೆಗಳು ಹುಟ್ಟಿಕೊಂಡವು. ವ್ಯಂಗ್ಯ ಮೀಮ್ಸ್, ರಾಜಕೀಯ ಟೀಕೆಗಳು ಹಾಗೂ ನಿರುದ್ಯೋಗದ ಸಮಸ್ಯೆಗಳ ಬಗ್ಗೆ ಪೋಸ್ಟ್‌ಗಳು ಹರಿದಾಡಲು ಆರಂಭವಾಯಿತು.
ಅಚ್ಚರಿಯ ಸಂಗತಿ ಎಂದರೆ, ಕೇವಲ ನಾಲ್ಕು ದಿನಗಳಲ್ಲೇ ಈ ಪೇಜ್ ಲಕ್ಷಾಂತರ ಜನರನ್ನು ಸೆಳೆದಿದೆ. ಮೇ 20ರ ವೇಳೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸುಮಾರು 4 ಮಿಲಿಯನ್‌ಗಿಂತ ಹೆಚ್ಚು ಹಿಂಬಾಲಕರನ್ನು ಹೊಂದಿದೆ ಎಂದು ವರದಿಯಾಗಿದೆ.
