ಅಮರಾವತಿ: ಭಾರತೀಯ ನೌಕಾಪಡೆಯ ಸಂವಹನ ವ್ಯವಸ್ಥೆಯನ್ನು ಅತ್ಯಾಧುನಿಕ ಮಟ್ಟಕ್ಕೆ ಏರಿಸುವ ಭಾರೀ ತೂಕದ ಉಪಗ್ರಹವೊಂದನ್ನು ಉಡಾವಣೆ ಮಾಡಲು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಸಂಪೂರ್ಣ ಸಜ್ಜಾಗಿದೆ. ಈ ಉಪಗ್ರಹವನ್ನು CMS-03 ಎಂದು ಕರೆಯಲಾಗುತ್ತದೆ, ಇದನ್ನು GSAT-7R ಎಂದೂ ಗುರುತಿಸಲಾಗುತ್ತದೆ. ಭಾನುವಾರ ಸಂಜೆ 5:26ಕ್ಕೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇದು ನಭಕ್ಕೆ ಚಿಮ್ಮಲಿದೆ. ನೌಕಾಪಡೆಯ ಕಾರ್ಯಾಚರಣೆಗಳಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಲಿದೆ.
ಈ ಉಡಾವಣೆಗೆ ಇಸ್ರೋದ ಅತ್ಯಂತ ಶಕ್ತಿಶಾಲಿ ರಾಕೆಟ್ LVM-3 (ಲಾಂಚ್ ವೆಹಿಕಲ್ ಮಾರ್ಕ್-3) ಅನ್ನು ಬಳಸಿಕೊಳ್ಳಲಾಗುತ್ತಿದೆ. ಈ ರಾಕೆಟ್‌ನ್ನು ಜನಪ್ರಿಯವಾಗಿ ‘ಬಾಹುಬಲಿ ರಾಕೆಟ್’ ಎಂದು ಕರೆಯಲಾಗುತ್ತದೆ. ಏಕೆಂದರೆ, ಇದು 43.5 ಮೀಟರ್ ಎತ್ತರವಿದ್ದು, 15 ಮಹಡಿ ಕಟ್ಟಡದಷ್ಟು ದೊಡ್ಡದು. ಇದರ ಸಾಮರ್ಥ್ಯವೆಂದರೆ 4,000 ಕೆಜಿಗೂ ಹೆಚ್ಚು ಭಾರದ ಸಾಧನಗಳನ್ನು ಭೂಮಿಯಿಂದ ನಭಕ್ಕೆ ಒಯ್ಯುವ ಶಕ್ತಿ ಇದೆ. CMS-03 ಉಪಗ್ರಹದ ತೂಕ 4,410 ಕೆಜಿ ಇದ್ದು, ಇದು ಶ್ರೀಹರಿಕೋಟಾ ಕೇಂದ್ರದಿಂದ ಉಡಾವಣೆಯಾಗುತ್ತಿರುವ ಇದುವರೆಗಿನ ಅತ್ಯಂತ ಭಾರೀ ಉಪಗ್ರಹ ಎಂಬ ಹೆಗ್ಗುರುತಿಯನ್ನು ಪಡೆಯಲಿದೆ.
ಈ ಉಪಗ್ರಹವನ್ನು ಭಾರತೀಯ ನೌಕಾಪಡೆಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಇದು ಯುದ್ಧನೌಕೆಗಳು, ಸಬ್‌ಮರೀನ್‌ಗಳು, ಯುದ್ಧ ವಿಮಾನಗಳು ಮತ್ತು ಭೂಮಿಯಲ್ಲಿರುವ ಕಮಾಂಡ್ ಕೇಂದ್ರಗಳ ನಡುವಿನ ತ್ವರಿತ, ಸುರಕ್ಷಿತ ಸಂವಹನವನ್ನು ಖಾತ್ರಿಪಡಿಸಲಿದೆ. ಮಿಲಿಟರಿ ಕಮ್ಯುನಿಕೇಶನ್ ಮಿಷನ್‌ನಡಿ ಕಾರ್ಯನಿರ್ವಹಿಸುವ ಈ ಉಪಗ್ರಹವು ನೌಕಾಪಡೆಯ ಕಾರ್ಯತಂತ್ರದಲ್ಲಿ ಕ್ರಾಂತಿಯನ್ನೇ ತರಲಿದೆ. ಬಳಕೆಯಲ್ಲಿರುವ GSAT-7 ರುಕ್ಮಿಣಿ ಉಪಗ್ರಹವು 2013ರಲ್ಲಿ ಉಡಾವಣೆಯಾಗಿ ಇಲ್ಲಿಯತನಕ ನೌಕಾಪಡೆಯ ಮುಖ್ಯ ಸಂವಹನ ಮಾಧ್ಯಮವಾಗಿತ್ತು. ಆದರೆ ಇದೀಗ CMS-03 ಅದರ ಉನ್ನತ ಆವೃತ್ತಿಯಾಗಿ ಬದಲಾಗಿ ಕಾರ್ಯನಿರ್ವಹಿಸಲಿದೆ.
ಈ ಯೋಜನೆಯ ವೆಚ್ಚ 1,589 ಕೋಟಿ ರೂಪಾಯಿಗಳು. 2019ರಲ್ಲಿ ಇಸ್ರೋ ಮತ್ತು ಭಾರತೀಯ ನೌಕಾಪಡೆಯ ನಡುವೆ ಈ ಕುರಿತು ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು. ಈ ಉಡಾವಣೆಯು ಕೇವಲ ತಾಂತ್ರಿಕ ಯಶಸ್ಸಲ್ಲ, ಬದಲಿಗೆ ಭಾರತದ ಸ್ವದೇಶಿ ತಂತ್ರಜ್ಞಾನದ ಸಾಮರ್ಥ್ಯದ ಸಂಕೇತ. LVM-3 ರಾಕೆಟ್ ಈ ಹಿಂದೆ ಚಂದ್ರಯಾನ-3, ಗಗನಯಾನದ ಪ್ರಯೋಗಗಳು ಮತ್ತು ಇತರ ಉಪಗ್ರಹ ಉಡಾವಣೆಗಳಲ್ಲಿ ಯಶಸ್ವಿಯಾಗಿದೆ.
