ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ ವಿಚ್ಛೇದನ ಪ್ರಕರಣಗಳ ಪ್ರಮಾಣ ಗಣನೀಯವಾಗಿ ಹೆಚ್ಚುತ್ತಿದೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳು ದಾಂಪತ್ಯ ಜೀವನವನ್ನು ಹಾಳುಮಾಡುತ್ತಿವೆ. ಅಂತಹದ್ದೇ ಒಂದು ಅಪರೂಪದ ಪ್ರಕರಣ ಗುಜರಾತ್‌ನಲ್ಲಿ ನಡೆದಿದ್ದು, ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಹಿಳೆಯೊಬ್ಬರು ಬೀದಿ ನಾಯಿಗಳ ಮೇಲೆ ಅತಿಯಾದ ಪ್ರೀತಿ ತೋರಿಸುತ್ತಾ, ಅವುಗಳನ್ನು ಮನೆಗೆ ಕರೆತಂದು ಪತಿಯ ಜೊತೆಗೆ ಮಲಗುವಂತೆ ಒತ್ತಾಯಿಸಿದ್ದಕ್ಕೆ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ಅಹಮದಾಬಾದ್‌ನ ದಂಪತಿಗಳು 2006ರಲ್ಲಿ ವಿವಾಹವಾಗಿದ್ದು, ಸುಮಾರು 20 ವರ್ಷಗಳ ದಾಂಪತ್ಯ ಜೀವನದ ನಂತರ ವಿಚ್ಛೇದನ ನೀಡಲು ಮುಂದಾಗಿದ್ದಾರೆ. ಪತಿಯು ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ತನ್ನ ಪತ್ನಿಯು ಬೀದಿ ನಾಯಿಗಳ ಮೇಲಿನ ಅತಿಯಾದ ಪ್ರೀತಿ ಮತ್ತು ಅತಿರೇಕದ ವರ್ತನೆಯೇ ದಾಂಪತ್ಯ ಜೀವನದ ವೈಮನಸ್ಯಕ್ಕೆ ಕಾರಣವಾಗಿದೆ ಎಂದು ದೂರಿದ್ದಾರೆ.
ಪತಿಯ ಪ್ರಕಾರ, ಪತ್ನಿ ನಿರಂತರವಾಗಿ ಬೀದಿ ನಾಯಿಗಳನ್ನು ಮನೆಗೆ ಕರೆತಂದು ಅವುಗಳನ್ನು ಮನೆ ಒಳಗೆ ಬಿಡುತ್ತಿದ್ದಳು. “ಅವಳು ನಾಯಿಗಳನ್ನು ನಮ್ಮ ಹಾಸಿಗೆಯಲ್ಲಿಯೇ ಮಲಗಲು ಬಿಡುತ್ತಿದ್ದಳು. ನಾನು ಅದನ್ನು ವಿರೋಧಿಸಿದರೆ ಸಿಟ್ಟಿನಿಂದ ಮಾತನಾಡುತ್ತಿದ್ದಳು. ನಾಯಿಗಳು ಮನೆಯೆಲ್ಲಾ ಗಲೀಜು ಮಾಡುತ್ತಿದ್ದವು, ಅಕ್ಕಪಕ್ಕ ಮನೆಯವರು ದೂರು ನೀಡುತ್ತಿದ್ದರು. ನಾಯಿಗಳು ನನ್ನ ಮೇಲೆಯೇ ಕಚ್ಚಿದ ಘಟನೆಗಳೂ ನಡೆದಿವೆ,” ಎಂದು ಪತಿಯು ಅರ್ಜಿಯಲ್ಲಿ ವಿವರಿಸಿದ್ದಾರೆ.
“ಅಪಾರ್ಟ್‌ಮೆಂಟ್ ವಸತಿ ಸಂಘ ನಾಯಿಗಳನ್ನು ಮನೆಗೆ ತರಬೇಡ ಎಂದು ಸ್ಪಷ್ಟ ಸೂಚನೆ ನೀಡಿತ್ತು. ಆದರೂ ಪತ್ನಿ ಅದನ್ನು ಉಲ್ಲಂಘಿಸಿ ಮನೆಗೆ ತಂದಿದ್ದಳು. ಇದರಿಂದ ನಾವಿಬ್ಬರ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿತ್ತು. ನಾಯಿಗಳನ್ನು ಸಾಕಲು ಆಗುವ ಖರ್ಚು, ವಾಸನೆ ಮತ್ತು ರಾತ್ರಿಯ ನಿದ್ರೆಯ ಕೊರತೆ ಇವೆಲ್ಲವು ನನ್ನ ಮಾನಸಿಕ ನೆಮ್ಮದಿಯನ್ನು ಹಾಳು ಮಾಡಿತ್ತು. ನಾನು ಈಗಾಗಲೇ ಮಧುಮೇಹದಿಂದ ಬಳಲುತ್ತಿದ್ದೇನೆ. ಅವಳ ವರ್ತನೆಯಿಂದ ಆರೋಗ್ಯ ಸಮಸ್ಯೆಗಳು ಮತ್ತಷ್ಟು ಗಂಭೀರವಾಗಿವೆ,” ಎಂದು ಪತಿಯು ಕೋರ್ಟ್‌ನಲ್ಲಿ ಹೇಳಿದ್ದಾರೆ.
ಪತಿಯು ಪತ್ನಿಯ ವಿರುದ್ಧ ಮತ್ತೊಂದು ಗಂಭೀರ ಆರೋಪವನ್ನೂ ಮಾಡಿದ್ದಾರೆ. “ಅವಳು ನನ್ನ ಮೇಲೆ ವಿವಾಹೇತರ ಸಂಬಂಧದ ಸುಳ್ಳು ಆರೋಪಗಳನ್ನು ಹೊರಹಾಕಿದ್ದಾಳೆ. ಮಾನಸಿಕ ಒತ್ತಡದಿಂದ ಕಛೇರಿಯಲ್ಲೂ ಕೆಲಸದ ಮೇಲೆ ಗಮನ ಗಮನ ಹರಿಸಲು ಸಾಧ್ಯವಾಗಲಿಲ್ಲ,” ಎಂದು ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.
ಆದರೆ ಪತ್ನಿ ಈ ಎಲ್ಲ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾಳೆ. “ನಾನು ಬೀದಿ ನಾಯಿಗಳನ್ನು ಮನೆಗೆ ಕರೆತಂದಿಲ್ಲ. ನನ್ನ ಪತಿ ಪ್ರಾಣಿಹಿತ ಟ್ರಸ್ಟ್‌ನಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ಸಹ ಪ್ರಾಣಿಗಳ ಮೇಲಿನ ಪ್ರೀತಿ ಇದೆ. ನಾಯಿ ಸಾಕುವುದರಿಂದ ಅವರಿಗೆ ಯಾವುದೇ ಆರೋಗ್ಯ ಸಮಸ್ಯೆ ಬಂದಿಲ್ಲ. ಪತಿಯೇ ಕೃತಕ ಆರೋಪಗಳನ್ನು ಮಾಡುತ್ತಿದ್ದಾರೆ,” ಎಂದು ಪತ್ನಿ ಪ್ರತಿಕ್ರಿಯಿಸಿದ್ದಾಳೆ.
2001ರಲ್ಲಿ ಪರಿಚಯವಾದ ಈ ದಂಪತಿಗಳು 2006ರಲ್ಲಿ ವಿವಾಹವಾದರು. 2012ರಲ್ಲಿ ಪತಿಯು ಬೆಂಗಳೂರಿನಲ್ಲಿ ವಿಚ್ಛೇದನ ಅರ್ಜಿ ಸಲ್ಲಿಸಿದರೂ ಅದು ವಜಾ ಆಗಿತ್ತು. ಬಳಿಕ 2016ರಲ್ಲಿ ಮತ್ತೊಮ್ಮೆ ಅರ್ಜಿ ಸಲ್ಲಿಸಿದರೂ ನ್ಯಾಯಾಲಯವು ಮಧ್ಯಸ್ಥಿಕೆಗಾಗಿ ಸಲಹೆ ನೀಡಿತ್ತು. ಫೆಬ್ರವರಿ 2024ರಲ್ಲಿ ಅಹಮದಾಬಾದ್‌ನ ಕೌಟುಂಬಿಕ ನ್ಯಾಯಾಲಯ ಪತಿಯ ಅರ್ಜಿಯನ್ನು ತಿರಸ್ಕರಿಸಿತ್ತು. ಆದರೆ ಈ ಬಾರಿ ಪತಿಯು ನೇರವಾಗಿ ಹೈಕೋರ್ಟ್‌ನ ಬಾಗಿಲು ತಟ್ಟಿದ್ದಾರೆ.
ಗುಜರಾತ್ ಹೈಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 1 ರಂದು ನಡೆಸಲಿದೆ. ಈಗಾಗಲೇ ಈ ವಿಚಿತ್ರ ವಿಚ್ಛೇದನ ಪ್ರಕರಣ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
