ಬಾಗಲಕೋಟೆ (ನ.13): ಕರ್ನಾಟಕದ ಉತ್ತರ ಭಾಗದಲ್ಲಿ ರೈತರ ಹೋರಾಟ ಇಂದು ಉಗ್ರ ಸ್ವರೂಪ ಪಡೆದುಕೊಂಡಿದೆ. ಬೆಳಗಾವಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪ್ರತಿಭಟನೆಗಳು ಶಾಂತವಾಗಿ ನಡೆದಿದ್ದರೆ, ಬಾಗಲಕೋಟೆಯಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಕೈಮೀರಿದೆ. ಕಬ್ಬು ಬೆಳೆಗಾರರು ತಮ್ಮ ಉತ್ಪನ್ನಕ್ಕೆ ಟನ್‌ಗೆ ₹3,300 ನ್ಯಾಯ ಬೆಲೆ ನೀಡಬೇಕೆಂದು ಪಟ್ಟು ಹಿಡಿದು ಹೋರಾಟ ನಡೆಸುತ್ತಿದ್ದಾರೆ.
ಈ ಹೋರಾಟದಲ್ಲಿ ಸೈದಾಪುರ ಗೋದಾವರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಪ್ರತಿಭಟನಕಾರರು 50ಕ್ಕೂ ಹೆಚ್ಚು ಕಬ್ಬು ತುಂಬಿದ ಟ್ರಾಕ್ಟರ್‌ಗಳಿಗೆ ಬೆಂಕಿ ಹಚ್ಚಿ, ಕೋಟ್ಯಂತರ ರೂಪಾಯಿ ಮೌಲ್ಯದ ಕಬ್ಬನ್ನು ಭಸ್ಮ ಮಾಡಿದ್ದಾರೆ. ಈ ಘಟನೆಯಿಂದಾಗಿ ಪೊಲೀಸರು ಮಧ್ಯಪ್ರವೇಶಿಸಿ ನಿಯಂತ್ರಣಕ್ಕೆ ಯತ್ನಿಸಿದಾಗ ಕಲ್ಲು ತೂರಾಟ ಆರಂಭವಾಯಿತು. ಈ ಗಲಭೆಯಲ್ಲಿ ಬಾಗಲಕೋಟೆ ಅಡಿಷನಲ್ ಎಸ್‌ಪಿ ಮಹಾಂತೇಶ್ವರ ಜಿದ್ದಿ ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಾರ್ಖಾನೆ ಮಾಲೀಕರು ಕಬ್ಬಿಗೆ ಕೇವಲ ₹2,250 ಮಾತ್ರ ನೀಡುವುದಾಗಿ ಘೋಷಿಸಿದ್ದು, ಉಳಿದ ₹50 ಅನ್ನು ನಂತರ ನೀಡುವ ಭರವಸೆ ನೀಡಿದ್ದಾರೆ. ಆದರೆ ರೈತರು ಇದನ್ನು ಸ್ವೀಕರಿಸದೆ ₹3,300 ಪೂರ್ಣ ಬೆಲೆಗೆ ಪಟ್ಟು ಹಿಡಿದಿದ್ದಾರೆ. ಈ ಬೇಡಿಕೆಯನ್ನು ಒತ್ತಾಯಿಸಲು ರೈತರು ಕಾರ್ಖಾನೆ ಆವರಣಕ್ಕೆ ಆಗಮಿಸಿ ಪ್ರತಿಭಟನೆ ಆರಂಭಿಸಿದರು. ಹೋರಾಟದಲ್ಲಿ ಒಟ್ಟು 50ಕ್ಕೂ ಹೆಚ್ಚು ಟ್ರಾಕ್ಟರ್‌ಗಳಿಗೆ ಬೆಂಕಿ ಹೊತ್ತಿ ಸಂಪೂರ್ಣ ನಾಶವಾದವು.
ಪ್ರತಿಭಟನೆಯನ್ನು ಹತ್ತಿಕ್ಕಲು ಪೊಲೀಸ್ ತಂಡ ಮುಂದಾಗಿದ್ದಾಗ ರೈತರು ಕಲ್ಲು ತೂರಾಟಕ್ಕೆ ಮುಂದಾದರು. ಈ ಸಂದರ್ಭದಲ್ಲಿ ದೊಡ್ಡ ಗಾತ್ರದ ಕಲ್ಲೊಂದು ನೇರವಾಗಿ ಅಡಿಷನಲ್ ಎಸ್‌ಪಿ ಮಹಾಂತೇಶ್ವರ ಜಿದ್ದಿ ಅವರ ಕಾಲಿಗೆ ಬಿದ್ದಿದೆ. ತೀವ್ರ ನೋವಿನಿಂದ ನರಳಾಡಿದ ಅವರನ್ನು ತಕ್ಷಣವೇ ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ವೈದ್ಯಕೀಯ ತಪಾಸಣೆಯಲ್ಲಿ ಕಾಲಿನಲ್ಲಿ ಬಲವಾದ ಗಾಯವಾಗಿದ್ದು, ಚಿಕಿತ್ಸೆ ಮುಂದುವರೆದಿದೆ.
