ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಸಮಿರವಾಡಿಯಲ್ಲಿ ಬುಧವಾರ ಕಬ್ಬು ರೈತರ ಹೋರಾಟ ತೀವ್ರ ಸ್ವರೂಪ ಪಡೆದಿದ್ದು, ಗೋದಾವರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ನಿಂತಿದ್ದ ನೂರಕ್ಕೂ ಹೆಚ್ಚು ಕಬ್ಬು ತುಂಬಿದ ಟ್ರಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ ಘಟನೆ ನಡೆದಿದೆ.
ಮುಧೋಳದ ಸಮೀರವಾಡೆ ಗೋದಾವರಿ ಕಾರ್ಖಾನೆ ಮಾರ್ಗದಲ್ಲಿ ರೈತರು ಪ್ರತಿಭಟನೆ ಆರಂಭಿಸಿದ್ದರು. ಕಾರ್ಖಾನೆ ಆಡಳಿತ ಹಾಗೂ ಮಾಲೀಕರು ಮಾತುಕತೆಗೆ ಮುಂದಾಗದೇ ಇರುವುದರಿಂದ ಆಕ್ರೋಶಗೊಂಡ ರೈತರು ರಸ್ತೆಯ ಮಧ್ಯೆ ಕಬ್ಬು ತುಂಬಿದ್ದ ಟ್ರ್ಯಾಕ್ಟರ್ ಅನ್ನು ತಡೆದು, ಅದರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ಕ್ಷಣಾರ್ಧದಲ್ಲೇ ಟ್ರ್ಯಾಕ್ಟರ್ ಧಗಧಗನೆ ಹೊತ್ತಿ ಉರಿದವು.
ರೈತರು ಬೈಕ್ ಹಾಗೂ ಲಾರಿ ವಾಹನಗಳಲ್ಲಿ ಕಾರ್ಖಾನೆಯತ್ತ ಮುತ್ತಿಗೆ ಹಾಕಿದರು. ಕಾರ್ಖಾನೆಯ ಆವರಣದಲ್ಲಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದರು. ಸುಮಾರು 100ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾದವು. ಘಟನೆಯ ಮಾಹಿತಿ ದೊರಕುತ್ತಿದ್ದಂತೆಯೇ ಮುಧೋಳ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಕಾರ್ಖಾನೆ ಸುತ್ತಮುತ್ತಲಿನ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿತ್ತು.
ರೈತರು ಕಬ್ಬಿನ ದರದ ವಿಚಾರದಲ್ಲಿ ಸರ್ಕಾರ ಹಾಗೂ ಕಾರ್ಖಾನೆ ಮಾಲೀಕರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. “ಕಬ್ಬು ಬೆಳೆಯಲು ಎಷ್ಟು ಶ್ರಮ, ವೆಚ್ಚ ಬರುತ್ತದೆ ಎಂಬುದನ್ನು ಯಾರು ಅರ್ಥಮಾಡಿಕೊಳ್ಳುತ್ತಿಲ್ಲ. ಟನ್‌ಗೆ ಕನಿಷ್ಠ ರೂ.3500 ಕೊಡದಿದ್ದರೆ ನಾವು ಬಾಳಲು ಸಾಧ್ಯವಿಲ್ಲ,” ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದರು.
ಕಳೆದ ಕೆಲವು ವಾರಗಳಿಂದ ಬಾಗಲಕೋಟೆ ಜಿಲ್ಲೆಯ ಹಲವು ಭಾಗಗಳಲ್ಲಿ ಕಬ್ಬು ಬೆಳೆಗಾರರು ಪ್ರತಿಭಟನೆ ನಡೆಸುತ್ತಿದ್ದರು. ಆದರೆ ಕಾರ್ಖಾನೆಗಳು ಮಾತುಕತೆಗೆ ಬಾರದ ಕಾರಣ ರೈತರ ಹೋರಾಟ ಹಿಂಸಾತ್ಮಕ ತಿರುವು ಪಡೆದಿದೆ. ಮುಧೋಳ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸ್ ಪಡೆಯನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ. ಪರಿಸ್ಥಿತಿ ಇನ್ನೂ ಗಂಭೀರವಾಗಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ.
