ಭೋಪಾಲ್: ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಹಾರಾಡಲು ಸಿದ್ಧತೆ ನಡೆಸಿದ್ದ ಏರ್ ಬಲೂನ್‌ನಲ್ಲಿ ಬೆಂಕಿ ಕಾಣೀಸಿಕೊಂಡಿದ್ದು, ಸ್ವಲ್ಪದಲ್ಲೇ ಈ ದುರಂತದಿಂದ ಪಾರಾಗಿದ್ದಾರೆ. ಭೋಪಾಲ್‌ನ ಮಂದಸೋರ್‌ನ ಗಾಂಧಿ ಸಾಗರ್ ಅರಣ್ಯ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಹಾಟ್ ಏರ್ ಬಲೂನ್‌ನ ಎಂಜಿನ್ ಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭದ್ರತಾ ಸಿಬ್ಬಂದಿಯ ತಕ್ಷಣದ ಕ್ರಮದಿಂದಾಗಿ ಮುಖ್ಯಮಂತ್ರಿಗಳು ಸುರಕ್ಷಿತವಾಗಿ ಕೆಳಗಿಳಿದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಂಧಿ ಸಾಗರ್ ಅರಣ್ಯ ಪ್ರದೇಶವು ಮಧ್ಯಪ್ರದೇಶದ ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿದ್ದು, ಇಲ್ಲಿ ಹಾಟ್ ಏರ್ ಬಲೂನ್‌ನಲ್ಲಿ ಹಾರಾಟವು ಪ್ರವಾಸಿಗರಿಗೆ ಒಂದು ಆಕರ್ಷಣೀಯ ಚಟುವಟಿಕೆಯಾಗಿದೆ. ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಈ ಚಟುವಟಿಕೆಯಲ್ಲಿ ಭಾಗವಹಿಸಲು ತೀರ್ಮಾನಿಸಿದ್ದರು. ಇದಕ್ಕಾಗಿ ಎಲ್ಲಾ ಸಿದ್ಧತೆಗಳನ್ನು ಸಂಪೂರ್ಣವಾಗಿ ಮಾಡಲಾಗಿತ್ತು. ಬಲೂನ್‌ನ ತಾಂತ್ರಿಕ ತಪಾಸಣೆಯನ್ನು ಕೂಡ ನಡೆಸಲಾಗಿತ್ತು. ಆದರೆ, ಹಾರಾಟಕ್ಕೆ ಸಿದ್ಧವಾಗುವ ಸಂದರ್ಭದಲ್ಲಿ, ಏಕಾಏಕಿ ಎಂಜಿನ್ ಭಾಗದಲ್ಲಿ ಬೆಂಕಿಯ ಕಿಡಿಯೊಂದು ಕಾಣಿಸಿಕೊಂಡಿತ್ತು. ಕೆಲವೇ ಕ್ಷಣಗಳಲ್ಲಿ ಬೆಂಕಿಯ ಜ್ವಾಲೆಗಳು ಧಗಧಗನೆ ಉರಿಯತೊಡಗಿದ್ದವು.
ಬೆಂಕಿಯನ್ನು ಗಮನಿಸಿದ ತಕ್ಷಣ, ಸಿಬ್ಬಂದಿಯು ಮುಖ್ಯಮಂತ್ರಿಗಳನ್ನು ತಕ್ಷಣವೇ ಬಲೂನ್‌ನಿಂದ ಕೆಳಗಿಳಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ದರು. ಅಗ್ನಿಶಾಮಕ ದಳದ ಸಿಬ್ಬಂದಿಯು ತಕ್ಷಣ ಬೆಂಕಿಯನ್ನು ನಿಯಂತ್ರಣಕ್ಕೆ ತಂದರು. ಈ ತ್ವರಿತ ಕ್ರಮದಿಂದಾಗಿ ಯಾವುದೇ ದೊಡ್ಡ ಅನಾಹುತವಾಗಲಿಲ್ಲ. ಯಾರಿಗೂ ಯಾವುದೇ ಗಾಯವಾಗಲಿಲ್ಲ ಎಂದು ತಿಳಿದುಬಂದಿದೆ.