ಕಳೆದ ತಿಂಗಳು ಚೀನಾದಲ್ಲಿ ನಡೆದ ಶಾಂಘೈ ಸಹಕಾರ ಸಂಘದ (ಎಸ್‌ಸಿಒ) ಸಮ್ಮೇಳನದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು ಎಂಬ ಸ್ಫೋಟಕ ಮಾಹಿತಿ ಈಗ ಬಹಿರಂಗಗೊಂಡಿದೆ. ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ವಿರುದ್ಧ ಈ ಆರೋಪ ಕೇಳಿಬರುತ್ತಿದ್ದು, ಹಲವು ಮಾಧ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ವರದಿಗಳು ಪ್ರಕಟವಾಗುತ್ತಿವೆ. ಇದು ಕೇವಲ ಊಹಾಪೋಹವಲ್ಲ, ಬದಲಿಗೆ ಭಾರತ-ಅಮೆರಿಕ ಸಂಬಂಧಗಳಲ್ಲಿ ಮೂಡಿರುವ ಬಿರುಕುಗಳ ಹಿನ್ನೆಲೆಯಲ್ಲಿ ಉಂಟಾಗಿರುವ ಗಂಭೀರ ಚರ್ಚೆಯ ವಿಷಯವಾಗಿದೆ.
ಅಮೆರಿಕ ಭಾರತಕ್ಕೆ ರಷ್ಯಾ ತೈಲ ಖರೀದಿಯನ್ನು ನಿಲ್ಲಿಸುವಂತೆ ಒತ್ತಡ ಹೇರುತ್ತಿದೆ. ಅಲ್ಲದೇ, ಭಾರತದ ಕೃಷಿ ಮತ್ತು ಹಾಲಿನ ಮಾರುಕಟ್ಟೆಯನ್ನು ಅಮೆರಿಕಕ್ಕೆ ಮುಕ್ತಗೊಳಿಸುವ ಬೇಡಿಕೆಗೆ ಭಾರತ ಬಗ್ಗದೇ ಇದೆ. ಇದರಿಂದಾಗಿ ಉಭಯ ದೇಶಗಳ ನಡುವೆ ಸಂಬಂಧಗಳು ತೀರಾ ಹದಗೆಟ್ಟಿವೆ. ಅಮೆರಿಕದ ಸುಂಕ ಬೆದರಿಕೆಗಳ ಬೆನ್ನಲ್ಲೇ ಭಾರತ-ಚೀನಾ ಸಂಬಂಧಗಳಲ್ಲಿ ಸುಧಾರಣೆ ಕಂಡುಬಂದಿದೆ. ರಷ್ಯಾ, ಭಾರತ ಮತ್ತು ಚೀನಾ ಒಗ್ಗೂಡಿರುವುದನ್ನು ಸಹಿಸದ ಅಮೆರಿಕ, ಮೋದಿ ಹತ್ಯೆಯ ಮೂಲಕ ಭಾರತ-ಚೀನಾ ಸಂಬಂಧಗಳನ್ನು ಶಾಶ್ವತವಾಗಿ ಹಾಳುಮಾಡುವ ಯೋಜನೆ ರೂಪಿಸಿತ್ತು ಎಂದು ವಿಶ್ಲೇಷಣೆಗಳು ಹೇಳುತ್ತಿವೆ.
ಈ ಎಲ್ಲಾ ರಹಸ್ಯಗಳು ಬಹಿರಂಗಗೊಳ್ಳಲು ಕಾರಣವಾದದ್ದು ಢಾಕಾದಲ್ಲಿ ಅಮೆರಿಕದ ವಿಶೇಷ ಪಡೆಗಳ ಅಧಿಕಾರಿ ಟೆರೆನ್ಸ್ ಅರ್ವೆಲ್ಲೆ ಜಾಕ್ಸನ್‌ನ ನಿಗೂಢ ಸಾವು. ಆಗಸ್ಟ್ 31ರಂದು ಢಾಕಾದ ವೆಸ್ಟಿನ್ ಹೋಟೆಲ್‌ನಲ್ಲಿ ಶವವಾಗಿ ಪತ್ತೆಯಾದ ಜಾಕ್ಸನ್, ಮ್ಯಾನ್ಮಾರ್‌ನಲ್ಲಿ ಅರಾಕನ್ ಆರ್ಮಿಗೆ ಬಾಂಗ್ಲಾದೇಶ ನೆರವು ನೀಡುವ ನೆಪದಲ್ಲಿ ನಿಯೋಜಿತನಾಗಿದ್ದ. ಆದರೆ, ಅವನ ನಿಜವಾದ ಉದ್ದೇಶ ಚೀನಾದಲ್ಲಿ ಮೋದಿ ಹತ್ಯೆಯ ಸಂಚು ನಡೆಸುವುದು ಎಂದು ಆರೋಪಗಳು ಕೇಳಿಬರುತ್ತಿವೆ. ಈ ಸಾವು ಸಿಐಎಯ ಹೆಜ್ಜೆಗುರುತುಗಳನ್ನು ಬಯಲುಮಾಡಿದೆ ಎಂದು ಹೇಳಲಾಗುತ್ತಿದೆ.
ಈ ಘಟನೆಯನ್ನು ‘ತಾಷ್ಕೆಂಟ್ 2.0’ ಎಂದು ಕರೆಯಲಾಗುತ್ತಿದೆ. 1966ರಲ್ಲಿ ಉಜ್ಬೇಕಿಸ್ತಾನದ ತಾಷ್ಕೆಂಟ್‌ನಲ್ಲಿ ನಡೆದ ಶಾಂತಿ ಮಾತುಕತೆಯಲ್ಲಿ ಭಾರತದ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯ ನಿಗೂಢ ಸಾವು ಸಿಐಎಯ ಕೈವಾಡವೆಂದು ಆರೋಪಿಸಲಾಗಿತ್ತು. ಅದೇ ರೀತಿ, ಚೀನಾದ ನೆಲದಲ್ಲಿ ಮೋದಿ ಹತ್ಯೆ ಮಾಡಿದರೆ ಭಾರತ-ಚೀನಾ ನಡುವೆ ಶಾಶ್ವತ ದ್ವೇಷ ಸೃಷ್ಟಿಸಿ, ಭಾರತದಲ್ಲಿ ಅರಾಜಕತೆ ಉಂಟುಮಾಡುವುದು ಸಿಐಎಯ ಲೆಕ್ಕಾಚಾರವಾಗಿತ್ತು. ಇದರಿಂದ ಭಾರತದ ದೃಢ ಸರ್ಕಾರವನ್ನು ತೆಗೆದು, ಅಮೆರಿಕದ ಮಾತು ಕೇಳುವ ಸರ್ಕಾರವನ್ನು ಸ್ಥಾಪಿಸಬಹುದು ಎಂಬುದು ಅವರ ಯೋಜನೆಯ ಮೂಲ ಉದ್ದೇಶ.
ಆದರೆ, ಈ ಸಂಚು ವಿಫಲಗೊಂಡಿದ್ದು ಭಾರತದ ಗುಪ್ತಚರ ಸಂಸ್ಥೆ ರಾ (RAW) ಮತ್ತು ರಷ್ಯಾದ ಜಂಟಿ ಪ್ರಯತ್ನದಿಂದ ಎಂದು ಹೇಳಲಾಗುತ್ತಿದೆ. ಮೋದಿ ಹತ್ಯೆಗೆ ಬಂದಿದ್ದ ಏಜೆಂಟ್ ಜಾಕ್ಸನ್ ಬಾಂಗ್ಲಾದೇಶದ ಹೋಟೆಲ್‌ನಲ್ಲಿ ನಿಗೂಢವಾಗಿ ಸಾವಿಗೀಡಾದನು. ಇದು ಸಿಐಎಯ ಲೆಕ್ಕಾಚಾರವನ್ನು ಸಂಪೂರ್ಣವಾಗಿ ತಲೆಕೆಳಗು ಮಾಡಿತು. ಮೋದಿ ಇದ್ದ ಹೋಟೆಲ್‌ಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ದಿಢೀರ್ ಭೇಟಿ ನೀಡಿದರು. ಯಾರಿಗೂ ಕಾಯದೇ ಇರುವ ಪುಟಿನ್, ಮೋದಿಗಾಗಿ ಕಾದು ಅವರನ್ನು ತಮ್ಮ ಕಾರಿನಲ್ಲಿ ಸಮ್ಮೇಳನದ ಸ್ಥಳಕ್ಕೆ ಕರೆದೊಯ್ದರು.
ಘಟನೆಯ ನಂತರ ಭಾರತಕ್ಕೆ ಹಿಂದಿರುಗಿದ ಮೋದಿ, ಸೆಪ್ಟೆಂಬರ್ 2ರಂದು ನವದೆಹಲಿಯ ಸೆಮಿಕಾನ್ ಶೃಂಗಸಭೆಯಲ್ಲಿ ಮಾತನಾಡುತ್ತಾ ಗೂಢಾರ್ಥದ ಹೇಳಿಕೆ ನೀಡಿದರು. “ನಾನು ಚೀನಾಕ್ಕೆ ಹೋಗಿದ್ದರಿಂದ ನೀವು ಚಪ್ಪಾಳೆ ತಟ್ಟುತ್ತಿದ್ದೀರಾ ಅಥವಾ ನಾನು ಹಿಂತಿರುಗಿದ್ದರಿಂದ ನೀವು ಚಪ್ಪಾಳೆ ತಟ್ಟುತ್ತಿದ್ದೀರಾ?” ಎಂದು ಕೇಳಿದರು. ಇದು ಅವರ ಜೀವಕ್ಕೆ ಇದ್ದ ಬೆದರಿಕೆಯನ್ನು ಸೂಚಿಸುತ್ತದೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ. ಆರ್‌ಎಸ್‌ಎಸ್ ಮುಖವಾಣಿ ‘ಆರ್ಗನೈಸರ್’ ಪತ್ರಿಕೆಯಲ್ಲಿ ಈ ಕುರಿತು ಲೇಖನ ಪ್ರಕಟವಾಗಿದ್ದು, ಭಾರತದ ಭದ್ರತಾ ವ್ಯವಸ್ಥೆಯ ದೃಢತೆಯನ್ನು ಹೊಗಳಿದೆ.





