ಟೆಹ್ರಾನ್ (ಮಾ. 3): ಅಮೆರಿಕ ಮತ್ತು ಇಸ್ರೇಲ್ ಪಡೆಗಳ ಜಂಟಿ ವಾಯುದಾಳಿಯಲ್ಲಿ ಇರಾನ್‌ನ ಬುಶೆಹರ್ ವಿಮಾನ ನಿಲ್ದಾಣದಲ್ಲಿ ನಿಲ್ಲಿಸಲಾಗಿದ್ದ ಪ್ರಯಾಣಿಕ ವಿಮಾನವೊಂದು ನಾಶವಾಗಿದೆ. ಈ ದಾಳಿಯಲ್ಲಿ ಇರಾನ್ ಏರ್ ವಿಮಾನವು ತುಂಡಾಗಿ, ಅದರಿಂದ ಹೊಗೆ ಮೇಲೇರುತ್ತಿರುವ ದೃಶ್ಯವನ್ನು ಇರಾನ್‌ನ ಸರ್ಕಾರಿ ಮಾಧ್ಯಮ ಪ್ರೆಸ್ ಟಿವಿ ಹಂಚಿಕೊಂಡಿದೆ..
ವಿಮಾನ ನಿಲ್ದಾಣಗಳ ಮೇಲೆ ಸರಣಿ ದಾಳಿ
ಬುಶೆಹರ್ ವಿಮಾನ ನಿಲ್ದಾಣದ ಮೇಲಿನ ದಾಳಿ ಜೊತೆಗೆ, ಟೆಹ್ರಾನ್‌ನ ದೇಶೀಯ ವಿಮಾನಗಳನ್ನು ನಿರ್ವಹಿಸುವ ಮೆಹ್ರಾಬಾದ್ ವಿಮಾನ ನಿಲ್ದಾಣದ ಮೇಲೂ ದಾಳಿ ನಡೆಸಲಾಗಿದೆ ಎಂದು ಮೆಹ್ರ್ ಸುದ್ದಿ ಸಂಸ್ಥೆ ವರದಿ ಮಾಡಿದೆ . ಈ ದಾಳಿಗಳಲ್ಲಿ ಸಂಭವಿಸಿರಬಹುದಾದ ಸಾವುನೋವುಗಳ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಲಭ್ಯವಿಲ್ಲ.
ಬುಶೆಹರ್ ಪರಮಾಣು ಕೇಂದ್ರದತ್ತ ಆತಂಕ
ಇರಾನ್‌ನಲ್ಲಿ ಕಾರ್ಯಾಚರಣೆ ನಡೆಸುತ್ತಿರುವ ಏಕೈಕ ಪರಮಾಣು ವಿದ್ಯುತ್ ಸ್ಥಾವರ ಬುಶೆಹರ್‌ನಲ್ಲಿದೆ. ಪರ್ಷಿಯನ್ ಕೊಲ್ಲಿಯ ಉದ್ದಕ್ಕೂ ದಕ್ಷಿಣ ಬಂದರು ನಗರದಲ್ಲಿ ನೆಲೆಗೊಂಡಿರುವ ಈ ಸೌಲಭ್ಯವನ್ನು ರಷ್ಯಾದ ನೆರವಿನೊಂದಿಗೆ ನಿರ್ಮಿಸಲಾಗಿದೆ. ಇಲ್ಲಿ ಹೆಚ್ಚುವರಿ ರಿಯಾಕ್ಟರ್ ಘಟಕಗಳೊಂದಿಗೆ ವಿಸ್ತರಿಸುವ ಕೆಲಸ ನಡೆಯುತ್ತಿತ್ತು
ಸ್ಥಾವರವನ್ನು ನೇರವಾಗಿ ಗುರಿಯಾಗಿ ದಾಳಿ ನಡೆಯದೇ ಇದ್ದರೂ, ಈ ಸೌಲಭ್ಯದ ಕೆಲವೇ ಕಿಲೋಮೀಟರ್ ದೂರದಲ್ಲಿ ಸ್ಫೋಟಗಳ ಶಬ್ದ ಕೇಳಿಬರುತ್ತಿದೆ ಎಂದು ರಷ್ಯಾದ ರಾಜ್ಯ ಪರಮಾಣು ನಿಗಮ ರೋಸಾಟಮ್ ಮುಖ್ಯಸ್ಥ ಅಲೆಕ್ಸಿ ಲಿಖಾಚೆವ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಾವರದ ಎರಡನೇ ಮತ್ತು ಮೂರನೇ ಘಟಕಗಳ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ .
ರಷ್ಯಾ ಸಿಬ್ಬಂದಿ ಸ್ಥಳಾಂತರ
ಸುಮಾರು 639 ರಷ್ಯಾದ ಸಿಬ್ಬಂದಿ ಇರಾನ್‌ನಲ್ಲಿದ್ದು, ಅವರನ್ನು ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ. ದಾಳಿಗಳು ನಡೆದ ಬಳಿಕ ಸುಮಾರು 100 ಕಾರ್ಮಿಕರು ಮತ್ತು ಅವರ ಕುಟುಂಬಗಳನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ. ಏರ್ಸ್ಟ್ರೈಕ್ ವಿರಾಮದ ಸಮಯದಲ್ಲಿ ಮತ್ತಷ್ಟು ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ..
ಪರಮಾಣು ಕೇಂದ್ರಗಳ ಮೇಲೆ ಹಿಂದಿನ ದಾಳಿ
ಇರಾನ್ ಫೋರ್ಡೋ, ನತಾಂಜ್ ಮತ್ತು ಎಸ್ಪಹಾನ್‌ನಲ್ಲಿ ಅಣುಸ್ಥಾವರಗಳನ್ನು ಸ್ಥಾಪಿಸಿದೆ. ಈ ಪೈಕಿ ಫೋರ್ಡೋದ್ದು ಭೂಗತ ಅಣುಸ್ಥಾವರವಾಗಿದ್ದರೆ, ನತಾಂಜ್ ನಲ್ಲಿ ಯುರೇನಿಯಂ ಸಂವರ್ಧನ ಘಟಕ ಮತ್ತು ಎಸ್ಸಹಾನ್ ನಲ್ಲಿ ಅತಿ ದೊಡ್ಡ ಪರಮಾಣು ಸಂಶೋಧನಾ ಕೇಂದ್ರವಿದೆ. ಕಳೆದ ವರ್ಷ ಈ ಕೇಂದ್ರಗಳನ್ನು ಗುರಿಯಾಗಿಸಿ ಇಸ್ರೇಲ್ ಮತ್ತು ಅಮೆರಿಕ ದಾಳಿ ನಡೆಸಿದ್ದವು. ಈ ಬಾರಿ ನತಾಂಜ್ ಮೇಲೂ ದಾಳಿ ನಡೆಸಲಾಗಿದೆ ಎಂದು ವರದಿಯಾಗಿದೆ .




