ಗೋಪಾಲ್ಗಂಜ್ (ಬಿಹಾರ): ಪ್ರೀತಿಗಾಗಿ ಯುವತಿಯೊಬ್ಬಳು 50 ಅಡಿ ಎತ್ತರದ ಮೊಬೈಲ್ ಟವರ್ ಏರಿದ ಘಟನೆ ಬಿಹಾರದ ಗೋಪಾಲ್ಗಂಜ್ ಜಿಲ್ಲೆಯಲ್ಲಿ ನಡೆದಿದೆ. ಪೊಲೀಸ್ ಕಸ್ಟಡಿಯಲ್ಲಿದ್ದ ತನ್ನ ಗೆಳೆಯನನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ 20 ವರ್ಷದ ಯುವತಿಯೊಬ್ಬಳು ಹೈಟೆನ್ಶನ್ ಮೊಬೈಲ್ ಟವರ್ (Mobile Tower) ಹತ್ತಿ ಕುಳಿತು ಪ್ರತಿಭಟನೆ ನಡೆಸಿದ್ದಾಳೆ.
ಗೋಪಾಲ್‌ಗಂಜ್ ಜಿಲ್ಲೆಯ ಭೋರೆ ಪೊಲೀಸ್ ಠಾಣೆ ವ್ಯಾಪ್ತಿಯ ಬಂಕಟ್ ಜಾಗಿರ್ದಾರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ತನ್ನ ಗೆಳೆಯನ ಬಂಧನದ ಸುದ್ದಿ ತಿಳಿದ ಯುವತಿ ತೀವ್ರ ಆಕ್ರೋಶಗೊಂಡು ಹತ್ತಿರದಲ್ಲಿದ್ದ ಮೊಬೈಲ್ ಟವರ್ ಮೇಲೆ ಏರಿದ್ದಾಳೆ. “ನನ್ನ ಪ್ರಿಯಕರನನ್ನು ತಕ್ಷಣ ಬಿಡುಗಡೆ ಮಾಡಬೇಕು. ಇಲ್ಲವಾದರೆ ನಾನು ಕೆಳಗೆ ಇಳಿಯುವುದಿಲ್ಲ” ಎಂದು ಹೇಳಿ ಟವರ್ ಮೇಲೆ ಕುಳಿತು ಹಠ ಹಿಡಿದಿದ್ದಾಳೆ.
ಮೂಲಗಳ ಪ್ರಕಾರ, ಹಿಂದಿನ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಯುವತಿಯ ಗೆಳೆಯನನ್ನು ಪೊಲೀಸರು ಬಂಧಿಸಿದ್ದರು. ಈ ವಿಷಯ ತಿಳಿದ ಯುವತಿ ಕೋಪಗೊಂಡು ನೇರವಾಗಿ ಟವರ್ ಮೇಲೆ ಏರಿ ಪ್ರತಿಭಟನೆ ನಡೆಸಿದ್ದಾಳೆ. ಈ ದೃಶ್ಯವನ್ನು ಕಂಡ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ..
ಘಟನೆ ನಡೆಯುತ್ತಿದ್ದಾಗ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಯುವತಿ ಟವರ್ ಮೇಲಿನಿಂದಲೇ ತನ್ನ ಪ್ರಿಯಕರನನ್ನು ಬಿಡುಗಡೆ ಮಾಡುವಂತೆ ಕೂಗಿ ಹೇಳುತ್ತಿದ್ದಳು. ಆಕೆಯ ಮಾತುಗಳನ್ನು ಕೇಳಿ ಜನರು ಕೂಡ ಅಚ್ಚರಿಗೊಂಡಿದ್ದರು. ಕೆಲವರು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು, ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮಾಹಿತಿ ತಿಳಿದ ಕೂಡಲೇ ಭೋರೆ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಮೊದಲು ಯುವತಿಯನ್ನು ಮನವೊಲಿಸಿ ಕೆಳಗೆ ಇಳಿಸುವ ಪ್ರಯತ್ನ ನಡೆಸಿದರು. ಪೊಲೀಸರು ಹಾಗೂ ಸ್ಥಳೀಯರು ಹಲವಾರು ಬಾರಿ ಆಕೆಗೆ ಮನವಿ ಮಾಡಿದರು. “ದಯವಿಟ್ಟು ಕೆಳಗೆ ಇಳಿ” ಎಂದು ಕೇಳಿಕೊಂಡರೂ ಯುವತಿ ಮಾತು ಕೇಳಲಿಲ್ಲ..
ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಪೊಲೀಸರು ಮತ್ತೊಂದು ಕ್ರಮಕ್ಕೆ ಮುಂದಾದರು. ಯುವತಿಯ ಪ್ರಿಯಕರನನ್ನು ಪೊಲೀಸ್ ಠಾಣೆಯಿಂದ ಸ್ಥಳಕ್ಕೆ ಕರೆತರಲು ನಿರ್ಧರಿಸಿದರು. ಕೆಲವೇ ಸಮಯದಲ್ಲಿ ಬಂಧಿತ ಯುವಕನನ್ನು ಪೊಲೀಸರು ಸ್ಥಳಕ್ಕೆ ಕರೆತಂದರು. ಆ ಬಳಿಕ ಪೊಲೀಸರು ಹಾಗೂ ಸ್ಥಳೀಯರ ಸಹಾಯದಿಂದ ಯುವತಿಯನ್ನು ಸುರಕ್ಷಿತವಾಗಿ ಟವರ್‌ನಿಂದ ಕೆಳಗೆ ಇಳಿಸಲಾಯಿತು. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.





