ಕತಿಹಾರ್ (ಬಿಹಾರ), ನವೆಂಬರ್ 21: ಮಗು ಕೆಂಪಾಗಿ ಹುಟ್ಟಿದ್ದಕ್ಕೆ ಪತ್ನಿಯ ಚರಿತ್ರೆಯ ಮೇಲೆ ಅನುಮಾನ ಬಂದು ಗಂಡನೊಬ್ಬ ಕ್ರೂರವಾಗಿ ಪತ್ನಿಯ ಕತ್ತು ಸೀಳಿ ಕೊಲೆ ಮಾಡಿರುವ ದಾರುಣ ಘಟನೆ ಬಿಹಾರದ ಕತಿಹಾರ್ ಜಿಲ್ಲೆಯ ನಾರಾಯಣಪುರ ಗ್ರಾಮದಲ್ಲಿ ನಡೆದಿದೆ. ಆರೋಪಿ ಸುಕುಮಾರ್ ದಾಸ್ (32) ತನ್ನ ಪತ್ನಿ ಮೌಸುಮಿ ದಾಸ್ (28) ನ್ನು ಕೊಲೆ ಮಾಡಿ ಪರಾರಿಯಾಗಿದ್ದಾನೆ.
ಮೂರು ತಿಂಗಳ ಹಿಂದೆ ಮೌಸುಮಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಈಗಾಗಲೇ ಇವರಿಗೆ ಒಬ್ಬ ಮಗನಿದ್ದ. ಹೊಸದಾಗಿ ಹುಟ್ಟಿದ ಮಗು ಸ್ವಲ್ಪ ಕೆಂಪು ಛಾಯೆಯಿಂದ ಕಂಡುಬಂದಿದ್ದಕ್ಕೆ ಸುಕುಮಾರ್‌ಗೆ ಪತ್ನಿಯ ಶೀಲದ ಮೇಲೆ ಅನುಮಾನ ಬಂತು. ಸ್ನೇಹಿತರು ಮತ್ತು ನೆರೆಹೊರೆಯವರು ನೀನು ಕಪ್ಪಗಿದ್ದೀಯಾ, ನಿನ್ನ ಮಗು ಹೇಗೆ ಗೋಧಿ ಬಣ್ಣಕ್ಕೆ ಬಂತು? ಎಂದು ಅಪಹಾಸ್ಯ ಮಾಡಿ, ತಮಾಷೆ ಮಾಡತೊಡಗಿದರು. ಇದು ಸುಕುಮಾರ್‌ನ ಮನಸ್ಸಿನಲ್ಲಿ ಬೇರೆಯೇ ರೀತಿಯ ಆಲೋಚನೆಗಳನ್ನು ಮೂಡಿಸಿತು.
ಮೂರು ತಿಂಗಳಿನಿಂದಲೂ ಮಗು ತನ್ನದಲ್ಲ ಎಂಬ ಭಾವನೆಯಿಂದ ಸುಕುಮಾರ್ ಪತ್ನಿಯೊಂದಿಗೆ ದಿನಾ ಜಗಳವಾಡತೊಡಗಿದ್ದ. ಮೌಸುಮಿ ಮಗು ನಿನ್ನದೇ ಎಂದು ಎಷ್ಟೇ ವಿವರಿಸಿದರೂ ಸುಕುಮಾರ್‌ಗೆ ಮನವರಿಕೆಯಾಗಲಿಲ್ಲ. ಜಗಳ ತೀವ್ರವಾದಾಗ ಮೌಸುಮಿ ತನ್ನ ತಾಯಿ ಮನೆಗೆ (ನಾರಾಯಣಪುರ) ಬಂದು ತಂಗಿದ್ದಳು.
ಬುಧವಾರ ರಾತ್ರಿ ಸುಕುಮಾರ್ ತನ್ನ ಮಾವನ ಮನೆಗೆ ಬಂದಿದ್ದ. ಪತ್ನಿ ಮನೆಯವರೆಲ್ಲ ಆ ದಿನ ಸುಕುಮಾರ್‌ಗೆ ಸಲಹೆ ನೀಡಿದ್ದರು ನಂತರ ಎಲ್ಲರೂ ಊಟ ಮಾಡಿ, ಮಲಗಿದ್ದರು. ರಾತ್ರಿ 2 ಗಂಟೆ ಸುಮಾರಿಗೆ ಸುಕುಮಾರ್ ಎದ್ದು, ಪತ್ನಿಯ ಕೋಣೆಗೆ ಹೋಗಿ ಚಾಕುವಿನಿಂದ ಕತ್ತು ಸೀಳಿ ಕೊಲೆ ಮಾಡಿದ್ದಾನೆ. ಹಾಗೂ ಈ ಕೊಲೆ ಮಾಡುವಾಗ ಮಗು ಪಕ್ಕದಲ್ಲೆ ಅಳುತ್ತಿತ್ತು.
ಗುರುವಾರ ಬೆಳಗ್ಗೆ ಕುಟುಂಬಸ್ಥರು ಕೋಣೆ ತೆರೆದಾಗ ಮೌಸುಮಿ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡು ಕೂಗಾಡಿದರು. ಸುಕುಮಾರ್ ಈಗಾಗಲೇ ಪರಾರಿಯಾಗಿದ್ದ. ಮೃತಳ ತಂದೆ ಶಷ್ಟಿ ದಾಸ್ ತಕ್ಷಣ ಅಬಾದ್‌ಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಪೊಲೀಸರು ಸ್ಥಳಕ್ಕೆ ತಲುಪಿ ಶವವನ್ನು ವಶಕ್ಕೆ ಪಡೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆರೋಪಿ ಸುಕುಮಾರ್ ದಾಸ್ ವಿರುದ್ಧ IPC ಸೆಕ್ಷನ್ 302 (ಕೊಲೆ) ಮತ್ತು ಇತರ ಸಂಬಂಧಿತ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಸುಕುಮಾರ್ ಗಾಗಿ ಶೇಷ ತಂಡ ರಚಿಸಿದ್ದು ,ಆತನನ್ನು ಹುಡುಕುತ್ತಿವೆ.
ಈ ಘಟನೆ ಗ್ರಾಮದಲ್ಲಿ ಆಘಾತ ಮೂಡಿಸಿದ್ದು, ಮಹಿಳಾ ಸಂಘಟನೆಗಳು ಖಂಡಣೆ ವ್ಯಕ್ತಪಡಿಸಿವೆ. ಚರ್ಮದ ಬಣ್ಣದ ಕಾರಣಕ್ಕೆ ಮಹಿಳೆಯ ಗೌರವಕ್ಕೆ ಧಕ್ಕೆ ತಂದು ಕೊಲೆ ಮಾಡುವುದು ಅತ್ಯಂತ ಕ್ರೂರ. ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಲಾಗಿದೆ.ಬಿಹಾರದಲ್ಲಿ ಸ್ತ್ರೀ ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹತ್ಯೆಗಳು ಇತ್ತೀಚೆಗೆ ಹೆಚ್ಚಾಗುತ್ತಿರುವುದು ಆತಂಕಕಾರಿಯಾಗಿದೆ.





