ಭೋಪಾಲ್/ಕಾಂಚೀಪುರಂ: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಪುಟ್ಟ ಕಂದಮ್ಮಳ ಸಾವಿಗೆ ಕಾರಣವಾದ ಕಲಬೆರಕೆ ಕೆಮ್ಮಿನ ಸಿರಪ್ ತಯಾರಿಸಿದ ಆರೋಪದಲ್ಲಿ ತಮಿಳುನಾಡಿನ ಕಾಂಚೀಪುರಂನ ಪ್ರೆಸನ್ ಫಾರ್ಮಾಸ್ಯುಟಿಕಲ್ಸ್ ಕಂಪನಿಯ ಮಾಲೀಕ ರಂಗನಾಥನನ್ನು ಮಧ್ಯಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಕೋಲ್ಟಿಫ್ ಸಿರಪ್ ಎಂದು ಹೇರಳ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದ್ದ ಈ ಔಷಧಿಯಲ್ಲಿ ಡೈಥಿಲೀನ್ ಗ್ಲಿಕಾಲ್ ಎಂಬ ವಿಷಕಾರಿ ರಾಸಾಯನಿಕವಿದ್ದು, ಇದು ಮಕ್ಕಳ ಸಾವಿಗೆ ಕಾರಣವಾಗಿದೆ.
ಅಪಾಯಕಾರಿ ರಾಸಾಯನಿಕ ಹೊಂದಿದ್ದ ಈ ಕೆಮ್ಮಿನ ಸಿರಪ್ ಸೇವಿಸಿ ಮಧ್ಯಪ್ರದೇಶದಲ್ಲಿ 20 ಮಕ್ಕಳು ಮೃತಪಟ್ಟ ಘಟನೆ ವರದಿಯಾದ ಬೆನ್ನಲ್ಲೇ, ಅದೇ ರಾಜ್ಯದ ಸರ್ಕಾರಿ ಆಸ್ಪತ್ರೆಗೆ ಪೂರೈಕೆಯಾದ ಅಝಿತ್ರೋಮೈಸಿನ್ ಆ್ಯಂಟಿಬಯಾಟಿಕ್ ಔಷಧದ ಬಾಟಲಿಯಲ್ಲಿ ಹುಳು ಪತ್ತೆಯಾಗಿದೆ. ಮಗುವಿನ ತಾಯಿಯೊಬ್ಬರು ಈ ಬಗ್ಗೆ ಆರೋಪ ಮಾಡಿದ ನಂತರ, ಗ್ವಾಲಿಯರ್ನ ಮೊರಾರ್ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿರುವ ಇದೇ ಮಾದರಿಯ ಔಷಧಿಯ ಬಾಟಲಿಗಳನ್ನು ವಶಕ್ಕೆ ಪಡೆದು, ಭೋಪಾಲ್‌ನಲ್ಲಿರುವ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪೊಲೀಸರು ನಡೆಸಿದ ತನಿಖೆಯಲ್ಲಿ ವಿವರಗಳೆಂದರೆ, ಕೋಲ್ಟಿಫ್ ಸಿರಪ್‌ನಲ್ಲಿ ಶೇ. 48.6 ರಷ್ಟು ಡೈಥಿಲೀನ್ ಗ್ಲಿಕಾಲ್ ಇರುವುದು ಪತ್ತೆಯಾಗಿದೆ. ನಿಯಮಗಳ ಪ್ರಕಾರ, ಕೇವಲ ಶೇ. 0.1 ರಷ್ಟು ಮಾತ್ರ ಈ ರಾಸಾಯನಿಕವನ್ನು ಬಳಸಲು ಅನುಮತಿ ಇದೆ. ಆದರೆ ಈ ಕಂಪನಿಯು ಶೇ. 46 ರಿಂದ 48 ರಷ್ಟು ಈ ವಿಷಕಾರಿ ರಾಸಾಯನಿಕವನ್ನು ಕೆಮ್ಮಿನ ಸಿರಪ್‌ನಲ್ಲಿ ಬಳಸಲಾಗಿತ್ತು. ಡೈಥಿಲೀನ್ ಗ್ಲಿಕಾಲ್ ಮತ್ತು ಇಥಿಲೀನ್ ಗ್ಲಿಕಾಲ್ ಎರಡೂ ರಾಸಾಯನಿಕಗಳು ಕೈಗಾರಿಕಾ ದ್ರಾವಕಗಳಾಗಿವೆ ಮತ್ತು ಔಷಧೀಯ ಬಳಕೆಗೆ ನಿಷೇಧಿಸಲಾಗಿದೆ. ಈ ರಾಸಾಯನಿಕಗಳು ಮಾನವ ಶರೀರಕ್ಕೆ ಮಾರಕವಾಗಬಲ್ಲವು.
ಕಾಂಚೀಪುರಂನಲ್ಲಿರುವ ಪ್ರೆಸನ್ ಫಾರ್ಮಾದ ಮೇಲೆ ದಾಳಿ ನಡೆಸಿದ ಪೊಲೀಸರು, ಕಂಪನಿಯಲ್ಲಿ ದಾಖಲೆಗಳಿಲ್ಲದ ಡಿಇಜಿ ಕಂಟೇನರ್‌ಗಳನ್ನು ಪತ್ತೆ ಮಾಡಿದ್ದಾರೆ. ಕಂಪನಿಯ ಒಳಗೆ-ಹೊರಗೆ ಕಂಡಿದ್ದು ಗಬ್ಬೆದ್ದ ಬ್ಯಾರಲ್‌ಗಳು ಮತ್ತು ಡಬ್ಬಗಳಲ್ಲಿ ಶೇಖರಿಸಿಟ್ಟ ರಾಸಾಯನಿಕಗಳು, ಇದರಿಂದಲೇ ಮಕ್ಕಳ ಸಿರಪ್ ಎಷ್ಟು ಸುರಕ್ಷಿತವಾಗಿತ್ತು ಎಂಬುದು ಬಹಿರಂಗವಾಗುತ್ತದೆ.
ಈ ಘಟನೆಯ ನಂತರ, ರಾಜ್ಯ ಆರೋಗ್ಯ ಇಲಾಖೆಯು ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಚಿಕ್ಕಮಕ್ಕಳು ಅಂದರೆ 2 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸಿರಪ್ ನೀಡಬೇಡಿ ಎಂದು ಸಲಹೆ ನೀಡಲಾಗಿದೆ. 2 ರಿಂದ 5 ವರ್ಷದೊಳಗಿನ ಮಕ್ಕಳಿಗೆ ವೈದ್ಯರ ಸಲಹೆ ಮೇರೆಗೆ ಮಾತ್ರ ಔಷಧಿ ನೀಡಬೇಕು. ಕೆಮ್ಮು ಕಾಣಿಸಿಕೊಂಡರೆ ವೈದ್ಯರ ಸಲಹೆ ಮೇರೆಗೆ ಸಿರಪ್ ಬಳಸಬೇಕು ಮತ್ತು ಸಾಧ್ಯವಾದಷ್ಟು ಕಡಿಮೆ ಅವಧಿಗೆ ಕನಿಷ್ಠ ಡೋಸ್ ಬಳಸುವುದು ಉತ್ತಮ. ಹಲವು ಔಷಧಿಗಳ ಸಂಯೋಜನೆಯಾಗಿರುವ ಸಿರಪ್‌ಗಳನ್ನು ಮಗುವಿಗೆ ನೀಡಬಾರದು ಮತ್ತು ವೈದ್ಯರ ಅನುಮತಿ ಇಲ್ಲದೆ ಯಾವುದೇ ಕಾರಣಕ್ಕೂ ಕೆಮ್ಮಿನ ಸಿರಪ್ ಬಳಸಬಾರದು.