ಬಿಹಾರ: ಕಳೆದ ಆಗಸ್ಟ್‌ನಲ್ಲಿ ಬೆಂಗಳೂರಿನಲ್ಲಿ ನಡೆದಿದ್ದ ಬಾಲಕನ ಕೊಲೆ ಪ್ರಕರಣದ ಮುಂದುವರಿದ ಭಾಗವಾಗಿ, ಬಿಹಾರದ ರಾಜಗೀರ್‌ನಲ್ಲಿ ಇಂದು ಒಂದೇ ಕುಟುಂಬದ ನಾಲ್ವರು ಸದಸ್ಯರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2025ರ ಆಗಸ್ಟ್‌ನಲ್ಲಿ, ಬೆಂಗಳೂರಿನ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ ನಾಗಪ್ರಸಾದ್ ಅವರ ತಂಗಿ ಶಿಲ್ಪಾ ಅವರ ಮಗ ಅಮೋಘಕೀರ್ತಿ, ‘ಫ್ರೀಫೈರ್’ ಎಂಬ ಆನ್‌ಲೈನ್ ಗೇಮ್‌ಗೆ ತೀವ್ರವಾಗಿ ಅಡಿಕ್ಟ್ ಆಗಿದ್ದನು. ಗೇಮ್ ಆಡಲು ಹಣಕ್ಕಾಗಿ ಆತ ಮನೆಯವರನ್ನು ಪದೇ ಪದೇ ಪೀಡಿಸುತ್ತಿದ್ದನು. ಈ ಗೇಮ್ ವ್ಯಸನ ಮತ್ತು ಮಗುವಿನ ವರ್ತನೆಯಿಂದ ಬೇಸತ್ತಿದ್ದ ಸೋದರಮಾವ ನಾಗಪ್ರಸಾದ್, ಕೋಪದಲ್ಲಿ ಅಮೋಘಕೀರ್ತಿಯನ್ನು ಕೊಲೆ ಮಾಡಿದ್ದರು. ಈ ಕೇಸಿನಲ್ಲಿ ನಾಗಪ್ರಸಾದ್ ಜೈಲು ವಾಸವನ್ನೂ ಅನುಭವಿಸಿದ್ದರು.
ನಗುವನ್ನ ಕೊಂದಿದ್ದರೂ, ಒಡಹುಟ್ಟಿದ ಅಣ್ಣನೆಂಬ ಕಾರಣಕ್ಕೆ ಶಿಲ್ಪಾ ನಾಗಪ್ರಸಾದ್ ಅವರಿಗೆ ಬೇಲ್ ಕೊಡಿಸಿ ಜೈಲಿನಿಂದ ಬಿಡಿಸಿಕೊಂಡು ಬಂದಿದ್ದರು. ಜೈಲಿನಿಂದ ಹೊರಬಂದ ಮೇಲೂ ನಾಗಪ್ರಸಾದ್ ಅವರಿಗೆ ತನ್ನ ಅಕ್ಕನ ಮಗನನ್ನು ಕೊಂದ ಪಾಪಪ್ರಜ್ಞೆ ಕಾಡುತ್ತಿತ್ತು. ಈ ಮಾನಸಿಕ ಒತ್ತಡ ಮತ್ತು ಅಪರಾಧ ಪ್ರಜ್ಞೆಯಿಂದ ಮುಕ್ತಿ ಪಡೆಯಲು ನಾಗಪ್ರಸಾಧ್ ದೇಶದ ವಿವಿಧ ಪುಣ್ಯಕ್ಷೇತ್ರಗಳಿಗೆ ಪ್ರವಾಸ ಕೈಗೊಂಡಿದ್ದರು.
ಫೆಬ್ರವರಿ ಮೊದಲ ವಾರದಲ್ಲಿ ಬಿಹಾರದ ಪ್ರಸಿದ್ಧ ಪ್ರವಾಸಿ ತಾಣ ರಾಜಗೀರ್‌ಗೆ ಈ ಕುಟುಂಬ ಭೇಟಿ ನೀಡಿತ್ತು. ಅಲ್ಲಿನ ಧರ್ಮಶಾಲೆಯೊಂದರಲ್ಲಿ ತಂಗಿದ್ದ ಇವರು, ಶನಿವಾರ (ಫೆಬ್ರವರಿ 7, 2026) ಕೊಠಡಿಯಿಂದ ಹೊರಬಂದಿರಲಿಲ್ಲ. ಕೊಠಡಿಯಿಂದ ದುರ್ವಾಸನೆ ಬರುತ್ತಿದ್ದನ್ನು ಗಮನಿಸಿದ ಸಿಬ್ಬಂದಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಾಗಿಲು ಒಡೆದು ನೋಡಿದಾಗ ಕುಟುಂಬದ ನಾಲ್ವರು ಸದಸ್ಯರು ಶವವಾಗಿ ಪತ್ತೆಯಾಗಿದ್ದಾರೆ.
ಮೃತಪಟ್ಟವರು:
-
ಜಿ.ಆರ್. ಸುಮಂಗಲಾ (78) – ತಾಯಿ
-
ನಾಗಪ್ರಸಾದ್ (50) – ಮಗ (ಕೊಲೆ ಪ್ರಕರಣದ ಆರೋಪಿ)
-
ಜಿ.ಆರ್. ಶಿಲ್ಪಾ (48) – ಸಹೋದರಿ (ಮೃತ ಅಮೋಘಕೀರ್ತಿಯ ತಾಯಿ)
-
ಜಿ.ಆರ್. ಶ್ರುತಾ (43) – ಇನ್ನೊಬ್ಬ ಸಹೋದರಿ
ಆರಂಭದಲ್ಲಿ ಇದು ಕೇವಲ ಸಾಲದ ಬಾಧೆ ಅಥವಾ ಗೇಮ್ ಚಟದಿಂದಾದ ಸಾವು ಎಂದು ಭಾವಿಸಲಾಗಿತ್ತು. ಆದರೆ, 2025ರ ಆಗಸ್ಟ್‌ನ ಕೊಲೆ ಪ್ರಕರಣದ ನಂಟು ಬೆಳಕಿಗೆ ಬಂದ ಮೇಲೆ ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ. ತನ್ನ ಮಗನನ್ನು ಕಳೆದುಕೊಂಡ ಶಿಲ್ಪಾ ಮತ್ತು ಮಗುವನ್ನು ಕೊಂದ ನಾಗಪ್ರಸಾದ್ ಇಬ್ಬರೂ ಒಂದೇ ಕುಟುಂಬದಲ್ಲಿ ಪಶ್ಚಾತ್ತಾಪ ಪಡುತ್ತಿದ್ದರು ಎಂದು ತಿಳಿದುಬಂದಿದೆ. ಸ್ಥಳಕ್ಕೆ ಆಗಮಿಸಿದ ವಿಧಿವಿಜ್ಞಾನ ತಂಡ (FSL) ಸಾಕ್ಷ್ಯಗಳನ್ನು ಸಂಗ್ರಹಿಸಿದೆ.




