(ರಾಜಸ್ಥಾನ): ರಾಜಸ್ಥಾನದ ಬಲೋತ್ರಾ ಜಿಲ್ಲೆಯಲ್ಲಿ ಕಾರು, ಟ್ರೇಲರ್ ಗಾಡಿಗೆ ಡಿಕ್ಕಿ ಹೊಡೆದು ಬೆಂಕಿ ಹೊತ್ತಿಕೊಂಡ ಪರಿಣಾಮ ನಾಲ್ವರು ಯುವಕರು ಸಜೀವ ದಹನಗೊಂಡು ಮೃತಪಟ್ಟಿದ್ದಾರೆ. ಗುರುವಾರ ತಡರಾತ್ರಿ ಸುಮಾರು 1:30ಕ್ಕೆ ಬಲೋತ್ರಾ ಜಿಲ್ಲೆಯ ಸಿಂಧರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸದಾ ಗ್ರಾಮದ ಬಳಿ ಈ ಘಟನೆ ಸಂಭವಿಸಿದೆ.
ಪೊಲೀಸರ ಪ್ರಕಾರ, ಮೃತಪಟ್ಟವರು ಬಾರ್ಮರ್ ಜಿಲ್ಲೆಯ ಗುಡಮಲನಿ ತಾಲ್ಲೂಕಿನ ದಾಬರ್ ಗ್ರಾಮದ ನಿವಾಸಿಗಳು. ಐದು ಮಂದಿ ಸ್ನೇಹಿತರು ಉದ್ಯೋಗ ಸಂಬಂಧಿತ ಕೆಲಸಕ್ಕಾಗಿ ಸಿಂಧರಿಗೆ ತೆರಳಿದ್ದರು. ಕೆಲಸ ಮುಗಿಸಿ ಅವರು ಮಧ್ಯರಾತ್ರಿ ಮನೆಯತ್ತ ಹಿಂತಿರುಗುತ್ತಿದ್ದ ವೇಳೆ ಈ ದಾರುಣ ಘಟನೆ ನಡೆದಿದೆ.
ಕಾರು ಸದಾ ಗ್ರಾಮದ ಬಳಿ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುತ್ತಿದ್ದಾಗ, ಎದುರುಗಡೆಯಿಂದ ಬರುತ್ತಿದ್ದ ಟ್ರೇಲರ್ ವಾಹನಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ಪರಿಣಾಮ ಕಾರು ತಕ್ಷಣವೇ ಬೆಂಕಿಗೆ ಆಹುತಿಯಾಯಿತು. ವಾಹನದ ಬಾಗಿಲುಗಳು ಒಳಗಿನಿಂದ ಲಾಕ್ ಆಗಿದ್ದರಿಂದ ಪ್ರಯಾಣಿಕರು ಹೊರಬರಲು ಸಾಧ್ಯವಾಗಲಿಲ್ಲ. ಕೇವಲ ಕೆಲವು ಕ್ಷಣಗಳಲ್ಲಿ ಕಾರು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಅದರೊಳಗಿದ್ದ ನಾಲ್ವರು ಯುವಕರು ಸಾವನ್ನಪ್ಪಿದ್ದಾರೆ.
ಈ ಭೀಕರ ಘಟನೆಯಲ್ಲಿ ಕಾರು ಚಾಲಕ ದಿಲೀಪ್ ಸಿಂಗ್ ಮಾತ್ರ ಜೀವಂತ ಉಳಿದಿದ್ದಾರೆ. ಆದರೆ ಅವರಿಗೂ ತೀವ್ರ ಗಾಯಗಳಾಗಿದ್ದು, ಅವರನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಅವರ ಸ್ಥಿತಿಯನ್ನು ಗಂಭೀರ ಎಂದು ತಿಳಿಸಿದ್ದಾರೆ.
ಅಪಘಾತದ ಬಳಿಕ ಬೆಂಕಿ ವ್ಯಾಪಕವಾಗಿ ಹರಡಿದ್ದರಿಂದ ಹೆದ್ದಾರಿಯಲ್ಲಿ ತಾತ್ಕಾಲಿಕವಾಗಿ ಸಂಚಾರ ಸ್ಥಗಿತಗೊಂಡಿತು. ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಒಂದು ಗಂಟೆಗೂ ಹೆಚ್ಚು ಕಾಲ ಪ್ರಯತ್ನ ನಡೆಸಿತ್ತು. ನಂತರ ಹತೋಟಿಗೆ ಬಂದಿದೆ. ಬೆಂಕಿಯಲ್ಲಿ ದೇಹಗಳು ಸಂಪೂರ್ಣವಾಗಿ ಸುಟ್ಟುಹೋಗಿದ್ದರಿಂದ ಮೃತರ ಗುರುತನ್ನು ಪತ್ತೆಹಚ್ಚುವುದು ಬಹಳ ಕಷ್ಟಕರವಾಗಿದೆ. ಪೊಲೀಸರು ಅವರ ಕುಟುಂಬದವರ ಸಹಕಾರದಿಂದ ಡಿಎನ್‌ಎ ಪರೀಕ್ಷೆ ಮೂಲಕ ಗುರುತಿಸುವ ಕಾರ್ಯ ಆರಂಭಿಸಿದ್ದಾರೆ. ಶವಗಳನ್ನು ಗುರುತಿಸಿದ ನಂತರ ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು ಎಂದು ಬಲೋತ್ರಾ ಪೊಲೀಸ್ ವಲಯದ ಅಧಿಕಾರಿಗಳು ತಿಳಿಸಿದ್ದಾರೆ.