ಹೈದರಾಬಾದ್: ಇಂದಿನ ಡಿಜಿಟಲ್ ಯುಗದಲ್ಲಿ ಮಕ್ಕಳು ಸಾಮಾಜಿಕ ಜಾಲತಾಣಗಳ ದಾಸರಾಗುತ್ತಿರುವುದು ಜಾಗತಿಕ ಮಟ್ಟದಲ್ಲಿ ಕಳವಳಕ್ಕೆ ಕಾರಣವಾಗಿದೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಆಂಧ್ರಪ್ರದೇಶ ಸರ್ಕಾರವು, 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಸೋಶಿಯಲ್ ಮೀಡಿಯಾ ಬಳಕೆಯನ್ನು ನಿಷೇಧಿಸುವ ಬಗ್ಗೆ ಗಂಭೀರವಾಗಿ ಆಲೋಚಿಸುತ್ತಿದೆ.
ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ವೇದಿಕೆಯ (WEF) ಶೃಂಗಸಭೆಯಲ್ಲಿ ಭಾಗವಹಿಸಿರುವ ಆಂಧ್ರಪ್ರದೇಶದ ಐಟಿ ಸಚಿವ ನಾರಾ ಲೋಕೇಶ್ ಈ ಕುರಿತು ಮಹತ್ವದ ಸುಳಿವು ನೀಡಿದ್ದಾರೆ. ಸಣ್ಣ ವಯಸ್ಸಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದುಬರುವ ಅತಿಸೂಕ್ಷ್ಮ ಮತ್ತು ಹಾನಿಕಾರಕ ವಿಷಯಗಳ ಪರಿಣಾಮವನ್ನು ಅರ್ಥಮಾಡಿಕೊಳ್ಳುವ ಪಕ್ವತೆ ಇರುವುದಿಲ್ಲ. ಅಂತಹ ವೇದಿಕೆಗಳಲ್ಲಿ ಮಕ್ಕಳು ಇರಬಾರದು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವೂ ಹೌದು. ಈ ನಿಟ್ಟಿನಲ್ಲಿ ಕಾನೂನು ಚೌಕಟ್ಟಿನ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಡಿಸೆಂಬರ್‌ನಲ್ಲಿ ಆಸ್ಟ್ರೇಲಿಯಾ ಸರ್ಕಾರವು ಇಡೀ ವಿಶ್ವವೇ ಮೆಚ್ಚುವಂತಹ ಕಾನೂನನ್ನು ಜಾರಿಗೆ ತಂದಿತ್ತು. ಅಲ್ಲಿ 16 ವರ್ಷದೊಳಗಿನ ಮಕ್ಕಳಿಗೆ ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಟಿಕ್‌ಟಾಕ್ ಮತ್ತು ಎಕ್ಸ್ ಸೇರಿದಂತೆ ಪ್ರಮುಖ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಆಸ್ಟ್ರೇಲಿಯಾದ ಇದೇ ಮಾದರಿಯನ್ನು ಆಂಧ್ರಪ್ರದೇಶದಲ್ಲಿ ಅಳವಡಿಸಿಕೊಳ್ಳುವ ಬಗ್ಗೆ ಈಗ ಚರ್ಚೆಗಳು ನಡೆಯುತ್ತಿವೆ. ಒಂದು ವೇಳೆ ಇದು ಜಾರಿಗೆ ಬಂದರೆ, ಭಾರತದಲ್ಲಿ ಇಂತಹ ನಿರ್ಬಂಧ ಹೇರಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಆಂಧ್ರಪ್ರದೇಶ ಪಾತ್ರವಾಗಲಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಟಿಡಿಪಿ ರಾಷ್ಟ್ರೀಯ ವಕ್ತಾರ ದೀಪಕ್ ರೆಡ್ಡಿ, ಇದು ಮಕ್ಕಳ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಪ್ರಯತ್ನವಲ್ಲ, ಬದಲಿಗೆ ಅವರನ್ನು ಆನ್‌ಲೈನ್ ದಾಳಿಗಳು ಮತ್ತು ಕೆಟ್ಟ ವಿಷಯಗಳಿಂದ ರಕ್ಷಿಸುವ ಮುನ್ನೆಚ್ಚರಿಕೆ ಕ್ರಮವಾಗಿದೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಸಾಮಾಜಿಕ ಜಾಲತಾಣಗಳು ದುರ್ಬಳಕೆಯಾಗಿದ್ದನ್ನು ನಾವು ಕಂಡಿದ್ದೇವೆ. ಮಕ್ಕಳು ಭಾವನಾತ್ಮಕವಾಗಿ ಗಟ್ಟಿಯಾಗುವವರೆಗೆ ಇಂತಹ ವೇದಿಕೆಗಳಿಂದ ದೂರವಿರುವುದು ಅವರ ಭವಿಷ್ಯದ ದೃಷ್ಟಿಯಿಂದ ಒಳ್ಳೆಯದು ಎಂದು ಬೆಂಬಲ ಸೂಚಿಸಿದ್ದಾರೆ.
ಈ ಕಾನೂನು ಜಾರಿಯಾದಲ್ಲಿ, ಮಕ್ಕಳು ಹೊಸ ಖಾತೆಗಳನ್ನು ತೆರೆಯುವಂತಿಲ್ಲ ಮತ್ತು ಈಗಾಗಲೇ ಇರುವ ಖಾತೆಗಳನ್ನು ಪೋಷಕರ ನೆರವಿನೊಂದಿಗೆ ನಿಷ್ಕ್ರಿಯಗೊಳಿಸಬೇಕಾಗುತ್ತದೆ. ಆನ್‌ಲೈನ್ ಗೇಮಿಂಗ್ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ವೇದಿಕೆಗಳನ್ನು ಹೊರತುಪಡಿಸಿ, ಕೇವಲ ಮನೋರಂಜನಾತ್ಮಕ ಸೋಶಿಯಲ್ ಮೀಡಿಯಾ ಆ್ಯಪ್‌ಗಳ ಮೇಲೆ ಮಾತ್ರ ನಿರ್ಬಂಧ ಹೇರುವ ಸಾಧ್ಯತೆಯಿದೆ.





