ದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ರಾಜ್ಯಸಭೆಯಲ್ಲಿ ಪಹಲ್ಗಾಮ್ ಭಯೋತ್ಪಾದಕ ದಾಳಿ (Pahalgham Attack) ಮತ್ತು ಆಪರೇಷನ್ ಸಿಂಧೂರ್ (Operation Sindoor) ಕುರಿತು ತೀವ್ರ ಚರ್ಚೆ ನಡೆಸಿದರು. ಕಾಂಗ್ರೆಸ್ ವಿರುದ್ಧ ತೀಕ್ಷ್ಣವಾದ ಟೀಕೆಗಳನ್ನು ಮಾಡಿದ ಅವರು, ರಾಷ್ಟ್ರೀಯ ಭದ್ರತೆಗಿಂತ ಮತಬ್ಯಾಂಕ್ ರಾಜಕೀಯಕ್ಕೆ ಆದ್ಯತೆ ನೀಡುತ್ತಿರುವುದಾಗಿ ಆರೋಪಿಸಿದರು.
ಏಪ್ರಿಲ್ 22ರಂದು ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದಿನ ಮೂವರು ಭಯೋತ್ಪಾದಕರನ್ನು ಭಾರತೀಯ ಭದ್ರತಾ ಪಡೆಗಳು ಆಪರೇಷನ್ ಮಹಾದೇವ್‌ನಡಿಯಲ್ಲಿ ಎನ್‌ಕೌಂಟರ್ ಮಾಡಿ ಕೊಂದಿವೆ. ಈ ಕಾರ್ಯಾಚರಣೆಯಲ್ಲಿ ಸುಲೇಮಾನ್ ಅಲಿಯಾಸ್ ಫೈಜಲ್ ಜಾಟ್, ಅಫ್ಘಾನ್ ಮತ್ತು ಜಿಬ್ರಾನ್ ಎಂಬ ಭಯೋತ್ಪಾದಕರು ಹತರಾಗಿದ್ದಾರೆ ಎಂದು ಅಮಿತ್ ಶಾ ರಾಜ್ಯಸಭೆಗೆ ಖಚಿತವಾಗಿ ತಿಳಿಸಿದರು. ಈ ದಾಳಿಯಲ್ಲಿ ಬಳಸಿದ ರೈಫಲ್‌ಗಳನ್ನು ಭದ್ರತಾ ಪಡೆಗಳು ವಶಪಡಿಸಿಕೊಂಡಿದ್ದು, ವಿಧಿವಿಜ್ಞಾನ ವಿಶ್ಲೇಷಣೆಯಿಂದ ಈ ರೈಫಲ್‌ಗಳು ಪಹಲ್ಗಾಮ್ ದಾಳಿಯಲ್ಲಿ ಬಳಕೆಯಾಗಿದ್ದವು ಎಂದು ದೃಢಪಟ್ಟಿದೆ.
“ನಮ್ಮ ಭದ್ರತಾ ಪಡೆಗಳು ಆಪರೇಷನ್ ಮಹಾದೇವ್ ಅಡಿಯಲ್ಲಿ ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿವೆ. ಈ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಭಯೋತ್ಪಾದಕರನ್ನು ಕೊಲ್ಲಲಾಗಿದೆ,” ಎಂದು ಅಮಿತ್ ಶಾ ಹೇಳಿದರು. ವಿಪಕ್ಷಗಳು ಈ ಕಾರ್ಯಾಚರಣೆಯ ಸಮಯದ ಬಗ್ಗೆ ಪ್ರಶ್ನಿಸಿದಾಗ ಅಮಿತ್ ಶಾ ತಿರುಗೇಟು ನೀಡಿದರು. “ನಿನ್ನೆಯೇ ಭಯೋತ್ಪಾದಕರನ್ನು ಯಾಕೆ ಕೊಂದೆವು ಎಂದು ಕೇಳುತ್ತಿದ್ದೀರಿ? ಅವರನ್ನು ಕೊಲ್ಲದಿದ್ದರೆ ರಾಹುಲ್ ಗಾಂಧಿ ಭರ್ಜರಿ ಭಾಷಣ ಮಾಡುತ್ತಿದ್ದರೇನೋ!” ಎಂದು ಕಾಲೆಳೆದರು, ಈ ಮಾತಿನಿಂದ ಸದನದಲ್ಲಿ ನಗೆಯ ಅಲೆ ಎದ್ದಿತ್ತು.
‘ರಾಷ್ಟ್ರೀಯ ಭದ್ರತೆಗಿಂತ ಕಾಂಗ್ರೆಸ್ ಮತ-ಬ್ಯಾಂಕ್ ರಾಜಕೀಯಕ್ಕೆ ಆದ್ಯತೆ ನೀಡುತ್ತಿದೆ. ಕಾಂಗ್ರೆಸ್‌ನ ಆದ್ಯತೆ ರಾಷ್ಟ್ರೀಯ ಭದ್ರತೆ ಮತ್ತು ಭಯೋತ್ಪಾದನೆಯನ್ನು ಕೊನೆಗೊಳಿಸುವುದು ಅಲ್ಲ, ಬದಲಿಗೆ ಅದು ರಾಜಕೀಯ, ಅವರ ಮತಬ್ಯಾಂಕ್ ಮತ್ತು ಸಮಾಧಾನಗೊಳಿಸುವ ರಾಜಕೀಯ ಎಂದು ಇಡೀ ದೇಶ ನೋಡುತ್ತಿದೆ’ ಅಂತ ಅಮಿತ್ ಶಾ ಆರೋಪಿಸಿದ್ರು.
ಆಪರೇಷನ್ ಸಿಂಧೂರ್ ಕುರಿತ ಚರ್ಚೆಯ ಸಂದರ್ಭದಲ್ಲಿ ವಿಪಕ್ಷಗಳು ಗದ್ದಲ ಸೃಷ್ಟಿಸಿದ್ದವು. ಪ್ರಧಾನಿ ನರೇಂದ್ರ ಮೋದಿ ಸದನವನ್ನು ಉದ್ದೇಶಿಸಿ ಮಾತನಾಡಬೇಕೆಂದು ವಿರೋಧ ಪಕ್ಷಗಳು ಪಟ್ಟುಹಿಡಿದವು. ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ, “ನನ್ನನ್ನೇ ತಡೆದುಕೊಳ್ಳಲು ಆಗುತ್ತಿಲ್ಲ, ಇನ್ನು ಮೋದಿಜೀ ಬಂದರೆ ನಿಮ್ಮ ಕಥೆ ಏನಾಗುತ್ತದೆ?” ಎಂದು ಕಾಲೆಳೆದರು. ಇದರಿಂದ ಕೆರಳಿದ ವಿಪಕ್ಷಗಳು ಸಭಾತ್ಯಾಗ ಮಾಡಿದ್ದವು.
ಆಪರೇಷನ್ ಸಿಂಧೂರ್‌ನ ಗಡಿಯಾಚೆಗಿನ ಕಾರ್ಯಾಚರಣೆಯ ಬಗ್ಗೆ ವಿವರಿಸಿದ ಅಮಿತ್ ಶಾ, ಭಾರತದ ಭದ್ರತಾ ಪಡೆಗಳ ಶೌರ್ಯವನ್ನು ಶ್ಲಾಘಿಸಿದರು. “ನಮ್ಮ ಭದ್ರತಾ ಪಡೆಗಳು ದೇಶದ ಗೌರವವನ್ನು ಎತ್ತಿಹಿಡಿದಿವೆ. ಭಯೋತ್ಪಾದನೆಯ ವಿರುದ್ಧ ಯಾವುದೇ ರಾಜಿಯಿಲ್ಲ,” ಎಂದು ಅವರು ಹೇಳಿದರು.