ಮಹಾರಾಷ್ಟ್ರದ ಉಪಮುಖ್ಯಮಂತ್ರಿ (ಡಿಸಿಎಂ) ಅಜಿತ್ ಪವಾರ್ ಮತ್ತು ಸೊಲ್ಲಾಪುರದ ಐಪಿಎಸ್ ಅಧಿಕಾರಿ ಅಂಜನಾ ಕೃಷ್ಣ ನಡುವಿನ ವಾಕ್ಸಮರವು ಭಾರೀ ವಿವಾದಕ್ಕೆ ಕಾರಣವಾಗಿದೆ. ಸೊಲ್ಲಾಪುರದ ಕುರ್ದು ಗ್ರಾಮದಲ್ಲಿ ಅಕ್ರಮ ಮಣ್ಣು ತೆಗೆಯುವಿಕೆಯನ್ನು ತಡೆಯಲು ತೆರಳಿದ್ದ ಅಂಜನಾ ಕೃಷ್ಣ ಅವರಿಗೆ, ಅಜಿತ್ ಪವಾರ್ “ನಿಮಗೆಷ್ಟು ಧೈರ್ಯ, ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ” ಎಂದು ಬೆದರಿಕೆ ಹಾಕಿದ ಆರೋಪವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕುರ್ದು ಗ್ರಾಮದಲ್ಲಿ ಅಕ್ರಮ ಮಣ್ಣು ತೆಗೆಯುವಿಕೆಯನ್ನು ತಡೆಯಲು ತೆರಳಿದ್ದ ಸೊಲ್ಲಾಪುರದ ಡಿಎಸ್‌ಪಿ ಅಂಜನಾ ಕೃಷ್ಣ ಅವರಿಗೆ ಸ್ಥಳೀಯ ಎನ್‌ಸಿಪಿ ಕಾರ್ಯಕರ್ತರೊಬ್ಬರು ಡಿಸಿಎಂ ಅಜಿತ್ ಪವಾರ್‌ರಿಂದ ಫೋನ್ ಕರೆಯನ್ನು ಒಡ್ಡಿದ್ದಾರೆ. ಈ ವೇಳೆ, “ನಾನು ಡಿಸಿಎಂ ಆಗಿದ್ದೇನೆ, ಕೂಡಲೇ ಕೆಲಸ ನಿಲ್ಲಿಸಿ ಇಲ್ಲಿಂದ ತೆರಳಿ” ಎಂದು ಅಜಿತ್ ಪವಾರ್ ಆದೇಶಿಸಿದ್ದಾರೆ. ಆದರೆ, ಅಂಜನಾ ಕೃಷ್ಣ ಅವರು ಧ್ವನಿಯನ್ನು ಗುರುತಿಸಲಾಗದೇ, “ನಿಮ್ಮ ಮೊಬೈಲ್‌ನಿಂದ ಕರೆ ಮಾಡಿ ಅಥವಾ ವಾಟ್ಸಾಪ್ ವಿಡಿಯೋ ಕರೆಯ ಮೂಲಕ ಗುರುತಿಸಿ” ಎಂದು ದಿಟ್ಟ ಉತ್ತರ ನೀಡಿದ್ದಾರೆ. ಇದಕ್ಕೆ ಕೋಪಗೊಂಡ ಅಜಿತ್ ಪವಾರ್, “ನಿಮಗೆಷ್ಟು ಧೈರ್ಯ, ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ” ಎಂದು ಬೆದರಿಕೆ ಹಾಕಿದ್ದಾರೆ. ಈ ಸಂಭಾಷಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಚರ್ಚೆಗೆ ಗುರಿಯಾಗಿದೆ.
ಅಂಜನಾ ಕೃಷ್ಣ ಯಾರು?
ಅಂಜನಾ ಕೃಷ್ಣ 2022ರ ಬ್ಯಾಚ್‌ನ ಐಪಿಎಸ್ ಅಧಿಕಾರಿಯಾಗಿದ್ದು, ಸದ್ಯ ಸೊಲ್ಲಾಪುರದಲ್ಲಿ ಡಿಎಸ್‌ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೇರಳದ ತಿರುವನಂತಪುರಂನವರಾದ ಇವರು, 2022ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 355ನೇ ರ‍್ಯಾಂಕ್ ಪಡೆದು ಐಪಿಎಸ್ ಆಗಿ ಆಯ್ಕೆಯಾಗಿದ್ದಾರೆ. ತಂದೆ ಜವಳಿ ವ್ಯಾಪಾರಿಯಾಗಿದ್ದು, ತಾಯಿ ಕೋರ್ಟ್‌ನಲ್ಲಿ ಟೈಪಿಸ್ಟ್ ಆಗಿದ್ದಾರೆ. ದಿಟ್ಟ ಮತ್ತು ಪ್ರಾಮಾಣಿಕ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ಅಂಜನಾ ಕೃಷ್ಣ, ಈ ಘಟನೆಯ ಮೂಲಕ ರಾಷ್ಟ್ರೀಯ ಗಮನ ಸೆಳೆದಿದ್ದಾರೆ.
IPS officer Anjana Krishna from Solapur Rural Police went to take action against illegal sand mining after villagers complained about illegal sand mining.
A local NCP member at the spot called up Ajit Pawar and made the officer to speak to him. Another villager recorded the call… pic.twitter.com/A9On8JZ30J
— Congress Kerala (@INCKerala) September 5, 2025
ಈ ಘಟನೆಗೆ ಪ್ರತಿಕ್ರಿಯಿಸಿದ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯ ಸಂಜಯ್ ರಾವತ್, ಅಜಿತ್ ಪವಾರ್‌ರನ್ನು ತೀವ್ರವಾಗಿ ಟೀಕಿಸಿದ್ದಾರೆ. “ಅಜಿತ್ ಪವಾರ್ ಐಪಿಎಸ್ ಅಧಿಕಾರಿಗೆ ಬೆದರಿಕೆ ಹಾಕಿದ್ದಾರೆ. ತಮ್ಮ ಪಕ್ಷದ ಕಳ್ಳರನ್ನು ರಕ್ಷಿಸುತ್ತಿದ್ದಾರೆ. ರಾಜ್ಯದ ಹಣಕಾಸು ಸಚಿವರಾಗಿದ್ದರೂ, ಅಕ್ರಮ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ. ಈ ಟೀಕೆಯು ರಾಜಕೀಯ ವಲಯದಲ್ಲಿ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ವಿವಾದ ತಾರಕಕ್ಕೇರಿದ ಬಳಿಕ, ಅಜಿತ್ ಪವಾರ್ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ. “ನನ್ನ ಉದ್ದೇಶ ಕಾನೂನು ಜಾರಿಯಲ್ಲಿ ಮಧ್ಯಪ್ರವೇಶ ಮಾಡುವುದಾಗಿರಲಿಲ್ಲ. ಪಾರದರ್ಶಕತೆಗೆ ನಾನು ಬದ್ಧನಾಗಿದ್ದೇನೆ. ಸ್ಥಳದಲ್ಲಿ ಪರಿಸ್ಥಿತಿ ಶಾಂತವಾಗಿರುವಂತೆ ನೋಡಿಕೊಂಡಿದ್ದೇನೆ ಮತ್ತು ಘರ್ಷಣೆ ತಪ್ಪಿಸಿದ್ದೇನೆ. ಅಕ್ರಮ ಚಟುವಟಿಕೆಗೆ ಬೆಂಬಲ ನೀಡುವುದಿಲ್ಲ” ಎಂದು ಸ್ಪಷ್ಟನೆ ನೀಡಿದ್ದಾರೆ.