ವಿಮಾನ ದುರಂತ: ಪವಾಡದಂತೆ ಬದುಕುಳಿದ ರಮೇಶ್ ವಿಶ್ವಾಸ್, “ನಾನು ಹೇಗೆ ಜೀವಂತ ಬಂದೆ ಗೊತ್ತಿಲ್ಲ”

Untitled design (47)

ಅಹಮದಾಬಾದ್: ನಿನ್ನೆ (ಜೂನ್ 12) ಅಹಮದಾಬಾದ್‌ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ 171ರ ಭೀಕರ ಅಪಘಾತದಲ್ಲಿ 241 ಪ್ರಯಾಣಿಕರಲ್ಲಿ ಕೇವಲ ಒಬ್ಬರಾದ ರಮೇಶ್ ವಿಶ್ವಾಸ್ (38) ಪವಾಡದಂತೆ ಬದುಕುಳಿದಿದ್ದಾರೆ. ಲಂಡನ್‌ಗೆ ತೆರಳುತ್ತಿದ್ದ ಈ ವಿಮಾನವು ಟೇಕಾಫ್ ಆದ ಕೆಲವೇ ಸೆಕೆಂಡ್‌ಗಳಲ್ಲಿ ತಾಂತ್ರಿಕ ದೋಷದಿಂದ ಹಾಸ್ಟೆಲ್ ಕಟ್ಟಡಕ್ಕೆ ಡಿಕ್ಕಿಯಾಗಿ ಪತನಗೊಂಡಿತು. ಈ ದುರಂತದಿಂದ ಬದುಕುಳಿದ ಏಕೈಕ ವ್ಯಕ್ತಿ ರಮೇಶ್ ವಿಶ್ವಾಸ್, ತಮ್ಮ ಆಘಾತಕಾರಿ ಅನುಭವವನ್ನು ಹಂಚಿಕೊಂಡಿದ್ದಾರೆ.

ಹೌದು, ರಮೇಶ್‌ರವರು ಗಾಂಧೀನಗರದ ಸಾಫ್ಟ್‌ವೇರ್ ಎಂಜಿನಿಯರ್, ವಿಮಾನದ 12C ಸೀಟಿನಲ್ಲಿ ಕುಳಿತಿದ್ದರು. “ಟೇಕಾಫ್ ಆಗುತ್ತಿದ್ದಂತೆ ಏನೋ ತೊಂದರೆಯಾಯಿತು ಎಂದು ಗೊತ್ತಾಯಿತು. 5-10 ಸೆಕೆಂಡ್‌ಗಳಲ್ಲಿ ವಿಮಾನವು ಒಂದು ಕಟ್ಟಡಕ್ಕೆ ಡಿಕ್ಕಿಯಾಯಿತು. ಒಳಗೆ ಹಸಿರು-ಬಿಳಿ ಲೈಟ್‌ಗಳು ಮಿನುಗತೊಡಗಿದವು. ಕಟ್ಟಡದ ಮೇಲಿಂದ ಕೆಳಗೆ ಬಿದ್ದಾಗ ನಾನು ಸೀಟ್‌ಬೆಲ್ಟ್ ತೆಗೆದು ತುರ್ತು ಬಾಗಿಲಿನಿಂದ ಒಂದು ಸಣ್ಣ ಜಾಗವನ್ನು ಕಂಡು ಜಿಗಿದೆ. ಕಟ್ಟಡದ ಗೋಡೆಯಿಂದಾಗಿ ಬೇರೆ ಯಾರಿಗೂ ಹೊರಗೆ ಬರಲು ಸಾಧ್ಯವಾಗಲಿಲ್ಲ,” ಎಂದು ರಮೇಶ್ ವಿವರಿಸಿದ್ದಾರೆ.

ವಿಮಾನದ ಇಂಧನ ಟ್ಯಾಂಕ್‌ನಿಂದ ಬೆಂಕಿ ಹೊತ್ತಿಕೊಂಡಾಗ ನನ್ನ ಎಡಗೈ ಸುಟ್ಟಿತು. “ನಾನು ಓಡಿ ದೂರಹೋದೆ. ನಾನು ಸತ್ತಿದ್ದೇನೆ ಎಂದು ಭಾವಿಸಿದ್ದೆ, ಆದರೆ ಕಣ್ಣು ತೆರೆದಾಗ ಜೀವಂತ ಇದ್ದೇನೆ ಎಂದು ಗೊತ್ತಾಯಿತು. ನಾನು ಹೇಗೆ ಬದುಕಿದೆ ಎಂದು ಇನ್ನೂ ನಂಬಲಾಗುತ್ತಿಲ್ಲ,” ಎಂದು ಭಾವುಕರಾದರು. ಅಹಮದಾಬಾದ್‌ನ ಸಿವಿಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಮೇಶ್‌ಗೆ ವೈದ್ಯರು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.

ರಮೇಶ್‌ರ ಬದುಕುಳಿಯುವಿಕೆಯನ್ನು ವೈದ್ಯಕೀಯ ತಜ್ಞರು “ಅದ್ಭುತ” ಎಂದು ಕರೆದಿದ್ದಾರೆ. “ತುರ್ತು ಬಾಗಿಲಿನ ಸಮೀಪದ ಸೀಟ್ ಮತ್ತು ರಮೇಶ್‌ರ ತ್ವರಿತ ನಿರ್ಧಾರವು ಅವರ ಜೀವ ಉಳಿಸಿತು,” ಎಂದು ಆಸ್ಪತ್ರೆಯ ವೈದ್ಯ ಡಾ. ವಿಜಯ್ ಶಾಹ್ ತಿಳಿಸಿದ್ದಾರೆ. ರಮೇಶ್‌ರ ಕಥೆಯನ್ನು ಕೇಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಆಸ್ಪತ್ರೆಗೆ ಕರೆ ಮಾಡಿ ರಮೇಶ್‌ರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. “ಪಿಎಂ ಮೋದಿ ಕರೆ ಮಾಡಿ ನನ್ನ ಆರೋಗ್ಯದ ಬಗ್ಗೆ ಕೇಳಿದರು. ನಾನು ಎಲ್ಲವನ್ನೂ ವಿವರಿಸಿದೆ. ಅವರ ಮಾತುಗಳು ನನಗೆ ಧೈರ್ಯ ತುಂಬಿದವು,” ಎಂದು ರಮೇಶ್ ಹೇಳಿದ್ದಾರೆ.

 “ನನ್ನ ಕಣ್ಣು ಮುಂದೆ ಎಲ್ಲವೂ ನಡೆಯಿತು. ಜೀವನದ ಮೌಲ್ಯ ಈಗ ಗೊತ್ತಾಯಿತು,” ಎಂದು ರಮೇಶ್ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

Exit mobile version