ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾ ಈಗ ಗುಜರಾತ್‌ನ ಸಚಿವೆ..!

ಗುಜರಾತ್ ರಾಜ್ಯದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ರಿವಾಬಾ ಜಡೇಜಾ

Untitled design 2025 10 17t204455.665

ಭಾರತೀಯ ಕ್ರಿಕೆಟ್ ತಂಡದ ಪ್ರಖ್ಯಾತ ಆಟಗಾರ ರವೀಂದ್ರ ಜಡೇಜಾ ಅವರಿಗೆ ಇತ್ತೀಚೆಗೆ ಎರಡು ದಿಕ್ಕಿನಲ್ಲಿ ಯಶಸ್ಸು ಸಿಕ್ಕಿದೆ. ಒಂದೆಡೆ, ಅವರು ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಂಡದ ಉಪನಾಯಕನಾಗಿ ನೇಮಕಗೊಂಡು ತಮ್ಮ ನಾಯಕತ್ವದ ಗುಣಮಟ್ಟವನ್ನು ಪ್ರದರ್ಶಿಸಿದರೆ, ಮತ್ತೊಂದೆಡೆ ಅವರ ಪತ್ನಿ ರಿವಾಬಾ ಜಡೇಜಾ ಗುಜರಾತ್ ರಾಜ್ಯದ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಗುಜರಾತ್ ರಾಜ್ಯದಲ್ಲಿ ನಡೆದ ಸಂಪುಟ ಪುನರ್ರಚನೆಯ ಭಾಗವಾಗಿ ರಿವಾಬಾ ಜಡೇಜಾ ಅವರಿಗೆ ಸಚಿವ ಪದವಿ ಸಿಕ್ಕಿದೆ. ಅಕ್ಟೋಬರ್ 17ರಂದು, ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಅವರನ್ನು ಹೊರತುಪಡಿಸಿ ಉಳಿದ ಎಲ್ಲಾ ಸಚಿವರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದರು. ಇದರ ನಂತರ ಹೊಸ ಸಂಪುಟ ರಚನೆಯಾಗುವ ಸಂದರ್ಭದಲ್ಲಿ, ರಿವಾಬಾ ಜಡೇಜಾ ಅವರನ್ನು ಸಚಿವ ಸಂಪುಟದ ಸದಸ್ಯೆಯಾಗಿ ಆಯ್ಕೆಮಾಡಲಾಗಿದೆ..

ರಿವಾಬಾ ಅವರ ರಾಜಕೀಯ ಪ್ರಯಾಣವು 2019ರ ಲೋಕಸಭಾ ಚುನಾವಣೆಗಳ ಸಮಯದಲ್ಲಿ ಭಾರತೀಯ ಜನತಾ ಪಾರ್ಟಿ (ಬಿಜೆಪಿ)ಗೆ ಸೇರಿದಾಗ ಆರಂಭವಾಯಿತು. ಅದಕ್ಕೂ ಮುನ್ನ, ಅವರು ರಜಪೂತ ಕರ್ಣಿ ಸೇನೆಯ ಮಹಿಳಾ ವಿಭಾಗದ ಅಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. 2022ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಅವರು ಬಿಜೆಪಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಬಯಸುವಲ್ಲಿ ಯಶಸ್ವಿಯಾದರು. ರಿವಾಬಾ ಅವರು ‘ಮಾತೃಶಕ್ತಿ’ ಎಂಬ ಚಾರಿಟಬಲ್ ಟ್ರಸ್ಟ್ ಮೂಲಕ ಮಹಿಳಾ ಸಬಲೀಕರಣ ಮತ್ತು ಕಲ್ಯಾಣ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ.

ರವೀಂದ್ರ ಜಡೇಜಾ ಮತ್ತು ರಿವಾಬಾ ಅವರ ಪ್ರೇಮ ಕಥೆ ಕೂಡ ಬಹಳಷ್ಟು ರೋಚಕವಾಗಿದೆ. ನವೆಂಬರ್ 2, 1990ರಂದು ಜನಿಸಿದ ರಿವಾಬಾ, ಅವರ ತಂದೆ ಹರ್ದೇವ್ ಸಿಂಗ್ ಸೋಲಂಕಿ ಒಬ್ಬ ಉದ್ಯಮಿ ಮತ್ತು ತಾಯಿ ಪ್ರಫುಲ್ಲಾ ಸೋಲಂಕಿ ಭಾರತೀಯ ರೈಲ್ವೆಯ ಉದ್ಯೋಗಿಯಾಗಿದ್ದರು. ರಾಜ್ಕೋಟ್ನಲ್ಲಿ ಉನ್ನತ ಶಿಕ್ಷಣ ಪೂರೈಸಿದ ರಿವಾಬಾ ಮೆಕ್ಯಾನಿಕಲ್ ಎಂಜಿನಿಯರಿಂಗ್ನಲ್ಲಿ ಪದವಿ ಪಡೆದಿದ್ದಾರೆ.

ರಿವಾಬಾ ಮತ್ತು ರವೀಂದ್ರ ಜಡೇಜಾ ಅವರ ಪರಿಚಯ ಜಡೇಜಾ ಅವರ ಸಹೋದರಿ ನೈನಾ ಮೂಲಕ ಒಂದು ಪಾರ್ಟಿಯಲ್ಲಿ ಆಯಿತು. ನೈನಾ ತಮ್ಮ ಸ್ನೇಹಿತೆ ರಿವಾಬಾರನ್ನು ತಮ್ಮ ಸಹೋದರ ರವೀಂದ್ರ ಜಡೇಜಾಗೆ ಪರಿಚಯಿಸಿದ ನಂತರ, ಇಬ್ಬರ ನಡುವಿನ ಸ್ನೇಹ, ಪ್ರೇಮದ ಬಂಧನಕ್ಕೆ ತಿರುಗಿತು. ಎರಡೂ ಕುಟುಂಬಗಳ ಒಪ್ಪಿಗೆಯ ನಂತರ, ಈ ಜೋಡಿ 2016ರಲ್ಲಿ ವಿವಾಹವಾದರು.

Exit mobile version