ಯಾವುದೇ ದಾಂಪತ್ಯದ ಅಡಿಪಾಯ ನಿಂತಿರುವುದು ನಂಬಿಕೆ ಮತ್ತು ಪಾರದರ್ಶಕತೆಯ ಮೇಲೆ. ಆದರೆ, ಇಲ್ಲೊಬ್ಬ ಪತಿ ತನಗಿದ್ದ ಹಳೆಯ ಅಫೇರ್ ಮತ್ತು ಗರ್ಭಪಾತದ ಸತ್ಯವನ್ನೇನೋ ಹೇಳಿದ್ದ, ಆದರೆ ಅದಕ್ಕೂ ಮಿಗಿಲಾದ ಒಂದು ‘ಡೇಂಜರಸ್’ ರಹಸ್ಯವನ್ನು ಮುಚ್ಚಿಟ್ಟಿದ್ದ. ಆ ಒಂದು ಸುಳ್ಳು ಈಗ 38 ವರ್ಷದ ಮಹಿಳೆಯ ಜೀವನವನ್ನೇ ಅಲ್ಲೋಲಕಲ್ಲೋಲ ಮಾಡಿದೆ.
38 ವರ್ಷದ ಮಹಿಳೆಯೊಬ್ಬರು ಇತ್ತೀಚೆಗೆ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್ ರೆಡ್ಡಿಟ್‌ನಲ್ಲಿ (Reddit) ತನ್ನ ನೋವಿನ ಕಥೆಯನ್ನು ಹಂಚಿಕೊಂಡಿದ್ದಾರೆ. ಇವರ ಪತಿಗೆ ಮದುವೆಗೂ ಮುನ್ನ ಅಂದರೆ 2018 ರಿಂದ 2020ರ ಅವಧಿಯಲ್ಲಿ ಒಬ್ಬಾಕೆಯ ಜೊತೆ ಅಕ್ರಮ ಸಂಬಂಧವಿತ್ತು. ಆ ಸಂಬಂಧದ ಫಲವಾಗಿ ಆಕೆ ಗರ್ಭಿಣಿಯಾಗಿದ್ದಳು ಮತ್ತು ನಂತರ ಗರ್ಭಪಾತ (Abortion) ಮಾಡಿಸಿಕೊಳ್ಳಲಾಗಿತ್ತು ಎಂಬ ಸತ್ಯವನ್ನು ಪತಿ ಮದುವೆಗೆ ಮುನ್ನವೇ ಒಪ್ಪಿಕೊಂಡಿದ್ದ. ಪತಿ ಸತ್ಯ ಹೇಳುತ್ತಿದ್ದಾನೆ ಎಂದು ನಂಬಿದ ಮಹಿಳೆ ಆತನನ್ನು ಮದುವೆಯಾಗಿದ್ದರು.
ಮದುವೆಯಾಗಿ ಸಂಸಾರ ಸುಗಮವಾಗಿ ಸಾಗುತ್ತಿತ್ತು. ದಂಪತಿಗೆ ಒಂದು ಹೆಣ್ಣು ಮಗುವೂ ಜನ್ಮ ತಾಳಿತು. ಆದರೆ, ಮಗುವಿಗೆ ಐದು ತಿಂಗಳಾಗಿದ್ದಾಗ ಪತ್ನಿಯ ಕೈಗೆ ಒಂದು ಫೋಟೋ ಸಿಕ್ಕಿದೆ. 2020ರ ಆ ಫೋಟೋದಲ್ಲಿ ಪತಿ ತನ್ನ ಆಫೀಸ್ ಸಹೋದ್ಯೋಗಿ (Colleague) ಜೊತೆ ಬೆಡ್ ಮೇಲೆ ಇರುವುದು ಕಂಡುಬಂದಿದೆ.
ಆಗಲೇ ಅಸಲಿ ಸತ್ಯ ಪತ್ನಿಗೆ ಗೊತ್ತಾಗಿದ್ದು, ಪತಿ ಮದುವೆಗೆ ಮುನ್ನ ಹೇಳಿದ್ದ ‘ಅಫೇರ್’ ಮತ್ತು ‘ಅಬಾರ್ಷನ್’ ಕಥೆಯ ನಾಯಕಿ ಬೇರೆ ಯಾರೂ ಅಲ್ಲ, ಇಂದಿಗೂ ಆತನ ಜೊತೆ ಆಫೀಸ್‌ನಲ್ಲಿ ಕೆಲಸ ಮಾಡುತ್ತಿರುವ ಅದೇ ಸಹೋದ್ಯೋಗಿ ಎಂಬುದು ಬಯಲಾಗಿತ್ತು. ಅಂದರೆ, ಪತಿ ಅಫೇರ್ ಬಗ್ಗೆ ಹೇಳಿದ್ದರೂ, ಆ ಮಹಿಳೆ ಈಗಲೂ ತನ್ನ ಕಣ್ಣೆದುರೇ ಇದ್ದಾಳೆ ಎಂಬ ಸತ್ಯವನ್ನು ಜಾಣ್ಮೆಯಿಂದ ಮುಚ್ಚಿಟ್ಟಿದ್ದ.
ಆತ ಸತ್ಯ ಹೇಳಿದ್ದರೂ ಅರ್ಧ ಸುಳ್ಳು ಹೇಳಿದ್ದ. ಆ ಮಹಿಳೆ ಇಂದಿಗೂ ಆತನ ವೃತ್ತಿಜೀವನದ ಭಾಗವಾಗಿದ್ದಾಳೆ ಎಂಬುದು ಗೊತ್ತಿದ್ದರೆ ನಾನು ಖಂಡಿತ ಆತನನ್ನು ಮದುವೆಯಾಗುತ್ತಿರಲಿಲ್ಲ. ನನ್ನಿಂದ ತಿಳುವಳಿಕೆಯ ಒಪ್ಪಿಗೆಯನ್ನು (Informed Consent) ಕಸಿದುಕೊಳ್ಳಲಾಗಿದೆ ಎಂದು ಪತ್ನಿ ಕಣ್ಣೀರಿಟ್ಟಿದ್ದಾರೆ. ಪ್ರಸ್ತುತ ಪತ್ನಿ ತೀವ್ರ ಖಿನ್ನತೆಗೆ ಒಳಗಾಗಿದ್ದು, ಖಿನ್ನತೆ-ಶಮನಕಾರಿ (Antidepressant) ಮಾತ್ರೆಗಳನ್ನು ಪಡೆಯುತ್ತಿದ್ದಾರೆ.
ಈ ಬಗ್ಗೆ ಪತಿ, ನಾನು ಅಫೇರ್ ಬಗ್ಗೆ ಹೇಳಿದ್ದೆ, ಕೇವಲ ಆಕೆಯ ಗುರುತನ್ನು ಮಾತ್ರ ಮುಚ್ಚಿಟ್ಟಿದ್ದೆ ಎಂದು ಸಮರ್ಥಿಸಿಕೊಳ್ಳುತ್ತಿದ್ದಾನೆ. ಆದರೆ ಪತ್ನಿಯ ಇದು ಕೂಡ ದೊಡ್ಡ ಸುಳ್ಳೇ ಎಂದು ತನ್ನ ಅಳಲು ತೋಡಿಕೊಂಡಿದ್ದಾಳೆ
ಸದ್ಯ ಈ ಮಹಿಳೆ ಗೊಂದಲದಲ್ಲಿದ್ದು, ಆ ಮಹಿಳೆ ಆಗಾಗ ಭಾರತಕ್ಕೆ ಬಂದು ಹೋಗುತ್ತಿರುತ್ತಾಳೆ ಮತ್ತು ಅವರಿಬ್ಬರೂ ಪ್ರತಿದಿನ ಸಂಪರ್ಕದಲ್ಲಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ನಂಬಿಕೆ ಮರುಸ್ಥಾಪಿಸಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ. ನೆಟ್ಟಿಗರು ಕೂಡ ಈ ಮಹಿಳೆಗೆ ಬೆಂಬಲ ವ್ಯಕ್ತಪಡಿಸಿದ್ದು, ಒಮ್ಮೆ ನಂಬಿಕೆ ಮುರಿದರೆ ಅದನ್ನು ಸರಿಪಡಿಸುವುದು ಕಷ್ಟ. ಮೋಸ ಮಾಡುವವರು ಅದನ್ನು ಮುಂದುವರಿಸುತ್ತಾರೆ ಎಂದು ಎಚ್ಚರಿಸಿದ್ದಾರೆ.
