ನವದೆಹಲಿ: ದೇಶದ ಇತಿಹಾಸದಲ್ಲೇ ಅತಿ ದೊಡ್ಡ ಬ್ಯಾಂಕ್ ವಂಚನೆಗಳಲ್ಲಿ ಒಂದಾದ ಪಿಎನ್‌ಬಿ ಹಗರಣದ ಆರೋಪಿ ವಜ್ರ ವ್ಯಾಪಾರಿ ಮೆಹುಲ್ ಚೋಕ್ಸಿ ಅವರ 8 ವರ್ಷಗಳ ಪಲಾಯನಕ್ಕೆ ಅಂತ್ಯ ಸಿಕ್ಕಿದೆ. ಬೆಲ್ಜಿಯಂನ ಆಂಟ್ವೆರ್ಪ್ ನ್ಯಾಯಾಲಯವು ಚೋಕ್ಸಿಯನ್ನು ಭಾರತಕ್ಕೆ ಹಸ್ತಾಂತರಿಸಲು ಆದೇಶಿಸಿದೆ. ಭಾರತೀಯ ಅಧಿಕಾರಿಗಳು ಮಾಡಿದ ಅವರ ಬಂಧನವು ಮಾನ್ಯವಾಗಿದೆ ಎಂದು ನ್ಯಾಯಾಲಯ ಎತ್ತಿ ಹಿಡಿದಿದೆ.
ಈ ಬೆಲ್ಜಿಯಂ ನ್ಯಾಯಾಲಯದ ತೀರ್ಪಿನ ನಂತರ, ಚೋಕ್ಸಿ ಅವರು ಉನ್ನತ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವ ಹಕ್ಕನ್ನು ಇನ್ನೂ ಉಳಿಸಿಕೊಂಡಿದ್ದಾರೆ. ಭಾರತೀಯ ಅಧಿಕಾರಿ ಒಬ್ಬರು ತಿಳಿಸಿದ್ದಾರೆ, ಆದೇಶ ನಮ್ಮ ಪರವಾಗಿ ಬಂದಿದೆ. ಭಾರತದ ಕೋರಿಕೆಯ ಮೇರೆಗೆ ಬೆಲ್ಜಿಯಂನ ಅಧಿಕಾರಿಗಳು ಅವರ ಬಂಧನವು ಮಾನ್ಯವಾಗಿದೆ ಎಂದು ಹೇಳಿದ್ದಾರೆ.
ಶುಕ್ರವಾರ ನಡೆದ ವಿಚಾರಣೆಯಲ್ಲಿ, ಆಂಟ್ವೆರ್ಪ್ ನ್ಯಾಯಾಲಯವು ಭಾರತವನ್ನು ಪ್ರತಿನಿಧಿಸುವ ಬೆಲ್ಜಿಯಂ ಪ್ರಾಸಿಕ್ಯೂಟರ್ಗಳು ಮತ್ತು ಚೋಕ್ಸಿ ಅವರ ಕಾನೂನು ತಂಡದ ವಾದಗಳನ್ನು ವಿವರವಾಗಿ ಆಲಿಸಿತು. ಎಲ್ಲಾ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನಂತರ, ಭಾರತದ ಹಸ್ತಾಂತರ ವಿನಂತಿಯನ್ನು ಮಾನ್ಯಮಾಡುವ ತೀರ್ಪನ್ನು ನ್ಯಾಯಾಲಯ ನೀಡಿತು. ಕೇಂದ್ರ ತನಿಖಾ ದಳದ (ಸಿಬಿಐ) ಕೋರಿಕೆಯ ಮೇರೆಗೆ ಏಪ್ರಿಲ್ 11ರಂದು 65 ವರ್ಷದ ಚೋಕ್ಸಿಯನ್ನು ಬಂಧಿಸಲಾಗಿತ್ತು. ಅದರ ನಂತರಿಂದಲೂ ಅವರು ಬೆಲ್ಜಿಯಂನಲ್ಲಿ ಬಂಧನದಲ್ಲಿದ್ದಾರೆ. ಈ ನಾಲ್ಕು ತಿಂಗಳ ಅವಧಿಯಲ್ಲಿ, ಬೆಲ್ಜಿಯಂನ ವಿವಿಧ ನ್ಯಾಯಾಲಯಗಳು ಅವರ ಬಹು ಜಾಮೀನು ಅರ್ಜಿಗಳನ್ನು ತಿರಸ್ಕರಿಸಿವೆ.
ಏನಿದು ಪಿಎನ್‌ಬಿ ಹಗರಣ..?
ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಹಗರಣವು ದೇಶದ ಇತಿಹಾಸದಲ್ಲೇ ಅತಿದೊಡ್ಡ ಹಣಕಾಸು ವಂಚನೆಗಳಲ್ಲಿ ಒಂದಾಗಿದೆ. ಈ ಹಗರಣದಲ್ಲಿ ಸುಮಾರು 13,000 ಕೋಟಿ ರೂಪಾಯಿಗಳ ಒಟ್ಟು ವಂಚನೆಯ ವಹಿವಾಟುಗಳು ನಡೆದಿರುವುದಾಗಿ ಆರೋಪವಿದೆ. ಈ ಹಗರಣವು 2018ರ ಆರಂಭದಲ್ಲಿ ಬೆಳಕಿಗೆ ಬಂದಿತು. ಇದರಲ್ಲಿ ಪ್ರಾಥಮಿಕವಾಗಿ ಆಭರಣ ವ್ಯಾಪಾರಿ ನೀರವ್ ಮೋದಿ,ಅವರ ಚಿಕ್ಕಪ್ಪ ಮೆಹುಲ್ ಚೋಕ್ಸಿ ಮತ್ತು ಕೆಲವು ಪಿಎನ್‌ಬಿ ಉದ್ಯೋಗಿಗಳ ಈ ಹಗರನದಲ್ಲಿ ಪಾಲ್ಗೊಂಡಿದ್ದಾರೆ ಎಂದು ಆರೋಪಿಗಳು ಕೇಳಿಬಂದಿವೆ.
ಈ ಆಪಾದಿತ ವಂಚನೆಯನ್ನು ವಿದೇಶಿ ಸಾಲಕ್ಕಾಗಿ ನೀಡಲಾದ ಬ್ಯಾಂಕ್ ಗ್ಯಾರಂಟಿಗಳಾದ ‘ಲೆಟರ್ಸ್ ಆಫ್ ಅಂಡರ್ಟೇಕಿಂಗ್’ (ಎಲ್ಓಯು) ಗಳ ದುರುಪಯೋಗದ ಮೂಲಕ ಕಾರ್ಯಗತಗೊಳಿಸಲಾಗಿತ್ತು. 2011 ಮತ್ತು 2018ರ ನಡುವೆ, ಮುಂಬೈನಲ್ಲಿರುವ ಪಿಎನ್‌ಬಿ ಯ ಬ್ರಾಡಿ ಹೌಸ್ ಶಾಖೆಯ ಇಬ್ಬರು ಉದ್ಯೋಗಿಗಳು SWIFT ವ್ಯವಸ್ಥೆಯ ಮೂಲಕ ಅನಧಿಕೃತ ಎಲ್ಓಯುಗಳನ್ನು ನೀಡಿದ್ದರು. ಈ ವಹಿವಾಟುಗಳನ್ನು ಬ್ಯಾಂಕಿನ ಪ್ರಮುಖ ವ್ಯವಸ್ಥೆಗಳಲ್ಲಿ ದಾಖಲಿಸಲಾಗಿರಲಿಲ್ಲ. ಈ ಕಾರಣದಿಂದಾಗಿ, ನೀರವ್ ಮೋದಿಯವರ ಸಂಸ್ಥೆಗಳಾದ ಡೈಮಂಡ್ ಆರ್ ಯುಎಸ್, ಸೋಲಾರ್ ಎಕ್ಸ್ಪೋರ್ಟ್ಸ್ ಮತ್ತು ಸ್ಟೆಲ್ಲರ್ ಡೈಮಂಡ್ಸ್ ಗಳು ಸರಿಯಾದ ಮೇಲಾಧಾರವಿಲ್ಲದೆ ಇತರ ಭಾರತೀಯ ಬ್ಯಾಂಕುಗಳ ವಿದೇಶಿ ಶಾಖೆಗಳಿಂದ ಸಾಲ ಪಡೆಯಲು ಸಾಧ್ಯವಾಗಿತ್ತು.
ಚೋಕ್ಸಿಯ ಹಸ್ತಾಂತರಣವು ಈ ಪ್ರಕರಣದಲ್ಲಿ ನ್ಯಾಯದ ದೃಷ್ಟಿಯಿಂದ ಒಂದು ಮಹತ್ವದ ತಿರುವಾಗಿದೆ. ಅಂತಿಮವಾಗಿ ಚೋಕ್ಸಿ ಭಾರತಕ್ಕೆ ಹಸ್ತಾಂತರಿತರಾದರೆ, ಪಿಎನ್‌ಬಿ ಹಗರಣದ ತನಿಖೆ ಮತ್ತು ನ್ಯಾಯ ವಿಚಾರಣೆಗೆ ಗಮನಾರ್ಹ ಚಾಲನೆ ಸಿಕ್ಕಂತಾಗುತ್ತದೆ.