ಇಂಡಿಗೋ ವಿಮಾನಯಾನ ಬಿಕ್ಕಟ್ಟು: ನಾಳೆಯೊಳಗೆ ಬಾಕಿ ಹಣ ಮರುಪಾವತಿಸುವಂತೆ ಕೇಂದ್ರ ಆದೇಶ

Untitled design 2025 12 06T185411.950

ನವದೆಹಲಿ, ಡಿಸೆಂಬರ್ 6: ಇಂಡಿಗೋ (Indigo flight) ವಿಮಾನಯಾನ ಸಂಸ್ಥೆಯು ಕಳೆದ ಐದು ದಿನಗಳಿಂದ ಎದುರಿಸುತ್ತಿರುವ ವಿಮಾನಗಳ ವಿಳಂಬ ಮತ್ತು ವ್ಯಾಪಕ ರದ್ದತಿಯ ಬಿಕ್ಕಟ್ಟಿನಿಂದಾಗಿ ಪ್ರಯಾಣಿಕರು ತೀವ್ರ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಹಣ ನೀಡಿ ಟಿಕೆಟ್ ಖರೀದಿಸಿದ್ದರೂ ವಿಮಾನಗಳ ರದ್ದಾದ ಕಾರಣ ಪ್ರಯಾಣಿಕರು ನಿಲ್ದಾಣಗಳಲ್ಲಿ ಪರದಾಡಿದರು ಮತ್ತು ರದ್ದಾದ ಟಿಕೆಟ್‌ಗಳ ಹಣ ವಾಪಸ್ ಆಗದೆ ಗೊಂದಲ ಉಂಟಾಗಿತ್ತು. ಈ ಗಂಭೀರ ಪರಿಸ್ಥಿತಿಗೆ ಕೇಂದ್ರ ಸರ್ಕಾರವು ಕೊನೆಗೂ ಹಸ್ತಕ್ಷೇಪ ಮಾಡಿದ್ದು, ಇಂದು ಹಲವು ಮಹತ್ವದ ಮತ್ತು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದೆ.

ಇಂಡಿಗೋ ಸಂಸ್ಥೆಗೆ ಕೇಂದ್ರದ ಖಡಕ್ ಸಂದೇಶ

ಕೇಂದ್ರ ವಿಮಾನಯಾನ ಸಚಿವಾಲಯವು ಇಂಡಿಗೋ ಏರ್‌ಲೈನ್ಸ್‌ಗೆ ತನ್ನ ಎಡವಟ್ಟಿನಿಂದ ಸಂಕಷ್ಟಕ್ಕೆ ಒಳಗಾದ ಪ್ರಯಾಣಿಕರ ಬಾಕಿ ಹಣವನ್ನು ಮರುಪಾವತಿ ಮಾಡುವಂತೆ ಖಡಕ್ ಸಂದೇಶ ರವಾನಿಸಿದೆ.

  1. ಬಾಕಿ ಹಣ ಮರುಪಾವತಿಗೆ ಗಡುವು: ವಿಮಾನ ರದ್ದಾದ ಕಾರಣ ಟಿಕೆಟ್‌ಗಳನ್ನು ರದ್ದುಪಡಿಸಿಕೊಂಡ ಪ್ರಯಾಣಿಕರಿಗೆ, ಬಾಕಿ ಇರುವ ಸಂಪೂರ್ಣ ಹಣವನ್ನು ನಾಳೆ ರಾತ್ರಿ 8 ಗಂಟೆಯೊಳಗೆ (ಡಿಸೆಂಬರ್ 7) ಮರುಪಾವತಿ ಮಾಡುವಂತೆ ಸಚಿವಾಲಯವು ಸೂಚನೆ ನೀಡಿದೆ. ಈ ಗಡುವಿನೊಳಗೆ ಮರುಪಾವತಿ ಮಾಡದಿದ್ದರೆ, ಸಂಸ್ಥೆಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.

  2. ಶುಲ್ಕ ರಹಿತ ಮರು-ಬುಕಿಂಗ್: ಟಿಕೆಟ್ ರದ್ದುಪಡಿಸಿಕೊಂಡು ಹಣ ವಾಪಸ್ ಪಡೆಯುವ ಬದಲು ಮರು-ಬುಕಿಂಗ್ (Re-booking) ಮಾಡಿಸಲು ಬಯಸುವ ಪ್ರಯಾಣಿಕರಿಗೆ ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ಟಿಕೆಟ್ ಬುಕ್ ಮಾಡಿಕೊಡುವಂತೆ ಆದೇಶ ನೀಡಲಾಗಿದೆ.

  3. ಲಗೇಜ್‌ ಸುರಕ್ಷತೆ: ರದ್ದಾದ ವಿಮಾನಗಳಲ್ಲಿ ಪ್ರಯಾಣಿಕರ ಲಗೇಜ್ (Luggage) ಮತ್ತು ವಸ್ತುಗಳನ್ನು ಸುರಕ್ಷಿತವಾಗಿ ಪತ್ತೆಹಚ್ಚಿ, ಅದನ್ನು ಪ್ರಯಾಣಿಕರಿಗೆ 48 ಗಂಟೆಯೊಳಗೆ ತಲುಪಿಸುವಂತೆ ಸ್ಪಷ್ಟ ಸೂಚನೆಯನ್ನು ನೀಡಲಾಗಿದೆ.

ಟಿಕೆಟ್ ದರಗಳ ಮೇಲೆ ಏಕರೂಪದ ಮಿತಿ ನಿಗದಿ (Fare Cap)

ಇಂಡಿಗೋ ವಿಮಾನಗಳ ಹಾರಾಟ ರದ್ದಾಗಿರುವ ಹಿನ್ನೆಲೆಯಲ್ಲಿ, ಕೆಲವು ಇತರೆ ವಿಮಾನಯಾನ ಸಂಸ್ಥೆಗಳು ಈ ಬಿಕ್ಕಟ್ಟನ್ನು ದುರುಪಯೋಗಪಡಿಸಿಕೊಂಡು ಟಿಕೆಟ್‌ ದರಗಳನ್ನು ಅತಿಯಾಗಿ ಹೆಚ್ಚಿಸಿರುವುದು ಕಂಡುಬಂದಿದೆ. ಪ್ರಯಾಣಿಕರ ಶೋಷಣೆಯನ್ನು ತಡೆಯಲು, ಈ ಬಿಕ್ಕಟ್ಟು ಪರಿಹಾರವಾಗುವವರೆಗೆ ವಿಮಾನಯಾನ ಸಚಿವಾಲಯವು ಎಲ್ಲಾ ಏರ್‌ಲೈನ್ಸ್‌ಗಳಿಗೆ ಅನ್ವಯವಾಗುವಂತೆ ಏಕರೂಪ ದರ ಮಿತಿಯನ್ನು  ತಕ್ಷಣದಿಂದಲೇ ಜಾರಿಗೆ ತಂದಿದೆ.

ಈ ನಿಗದಿಪಡಿಸಿದ ಟಿಕೆಟ್‌ ದರಕ್ಕಿಂತ ಹೆಚ್ಚಿನ ಹಣವನ್ನು ಪ್ರಯಾಣಿಕರಿಂದ ಪಡೆಯದಂತೆ ಎಲ್ಲಾ ವಿಮಾನಯಾನ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಒಂದು ವೇಳೆ ಈ ಆದೇಶವನ್ನು ಉಲ್ಲಂಘಿಸಿದರೆ, ಕಠಿಣ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಸಚಿವಾಲಯ ಎಚ್ಚರಿಕೆ ನೀಡಿದೆ.

ಹಾರಾಟ ರದ್ದಾಗಿರುವುದಕ್ಕೆ ನಿಖರ ಕಾರಣವೇನು ಎಂಬುದನ್ನು ತಿಳಿಸುವಂತೆ ಕೋರಿ ಕೇಂದ್ರ ವಿಮಾನಯಾನ ಸಚಿವಾಲಯವು ಇಂಡಿಗೋ ಏರ್‌ಲೈನ್ಸ್‌ನ ಹಿರಿಯ ಅಧಿಕಾರಿಗಳಿಗೆ ಸಮನ್ಸ್ ನೀಡಿತ್ತು. ಸಂಜೆ 6 ಗಂಟೆಗೆ ಸಚಿವಾಲಯಕ್ಕೆ ಆಗಮಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿತ್ತು.

ಸಮನ್ಸ್‌ನ ಮೇರೆಗೆ ಇಂಡಿಗೋ ವಿಮಾನ ಸಂಸ್ಥೆಯ ಅಧಿಕಾರಿಗಳು ಸಚಿವಾಲಯಕ್ಕೆ ಭೇಟಿ ನೀಡಿದ್ದು, ವಿಮಾನಯಾನ ಸಚಿವಾಲಯದ ಅಧಿಕಾರಿಗಳ ಜತೆಗೆ ಮಹತ್ವದ ಸಭೆ ನಡೆಯಿತು. ಈ ಸಭೆಯಲ್ಲಿ, ಬಿಕ್ಕಟ್ಟಿನ ಮೂಲ ಕಾರಣಗಳು, ಕಾರ್ಯಾಚರಣೆಯನ್ನು ಸಾಮಾನ್ಯ ಸ್ಥಿತಿಗೆ ತರಲು ಕೈಗೊಂಡಿರುವ ಕ್ರಮಗಳು ಮತ್ತು ಪ್ರಯಾಣಿಕರಿಗೆ ಪರಿಹಾರ ಒದಗಿಸುವ ಕಾರ್ಯವಿಧಾನಗಳ ಕುರಿತು ಇಂಡಿಗೋ ಅಧಿಕಾರಿಗಳಿಂದ ಸಚಿವಾಲಯವು ವಿಸ್ತೃತ ಮಾಹಿತಿಯನ್ನು ಪಡೆದುಕೊಂಡಿದೆ.

ಈ ಕೇಂದ್ರದ ಹಸ್ತಕ್ಷೇಪವು ಲಕ್ಷಾಂತರ ಪ್ರಯಾಣಿಕರಿಗೆ ತಾತ್ಕಾಲಿಕ ಪರಿಹಾರ ಒದಗಿಸಿದೆ ಮತ್ತು ಇಂತಹ ಬಿಕ್ಕಟ್ಟಿನ ಸಮಯದಲ್ಲಿ ವಿಮಾನಯಾನ ಸಂಸ್ಥೆಗಳು ಗ್ರಾಹಕರ ಹಿತಾಸಕ್ತಿಗಳಿಗೆ ಬದ್ಧವಾಗಿರಬೇಕು ಎಂಬ ಸ್ಪಷ್ಟ ಸಂದೇಶವನ್ನು ನೀಡಿದೆ.

Exit mobile version