ಲಕ್ನೋ: ಉತ್ತರ ಪ್ರದೇಶದ ಆಗ್ರಾ ನಗರದಲ್ಲಿ ಅಚ್ಚರಿ ಹುಟ್ಟಿಸುವಂತಹ ಭ್ರಷ್ಟಾಚಾರದ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದ ಆರೋಪಿಗಳ ಪಟ್ಟಿಯಿಂದ ವ್ಯಾಪಾರಿಯೊಬ್ಬರ ಹೆಸರನ್ನು ತೆಗೆದು ಹಾಕಲು ಪೊಲೀಸರೇ ಲಂಚ ಕೇಳಿದ್ದಾರೆ.. ಹಣವಲ್ಲ, ನಾಲ್ಕು ಜೋಡಿ ಶೂಗಳು ಲಂಚದ ರೂಪದಲ್ಲಿ ಕೇಳಲಾಗಿದೆ ಎಂದು ಹೇಳಲಾಗಿದೆ.
ಘಟನೆಯ ವಿವರ
ಆಗ್ರಾ ನಗರದಲ್ಲಿನ ಪೊಲೀಸರೊಬ್ಬರು ಸ್ಥಳೀಯ ವ್ಯಾಪಾರಿ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ನಡೆಸಿದ್ದಾರೆ. ತನಿಖೆಯ ವೇಳೆ ವ್ಯಾಪಾರಿಯ ಹೇಳಿಕೆಯನ್ನು ದಾಖಲಿಸಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕಾಗಿತ್ತು. ಆದರೆ, ಕೆಲ ಪೊಲೀಸರು ವ್ಯಾಪಾರಿಯನ್ನು ಸಂಪರ್ಕಿಸಿ, “ನಿನ್ನ ಹೆಸರನ್ನು ಆರೋಪಿಗಳ ಪಟ್ಟಿಯಿಂದ ತೆಗೆದುಹಾಕಬೇಕಾದರೆ ನಮ್ಮ ಕೈ ತುಂಬಬೇಕು” ಎಂದು ಹಣ ಬೇಡಿಕೆಯಿಟ್ಟಿದ್ದರು.
ವ್ಯಾಪಾರಿಯು ನೇರ ಹಣ ನೀಡಲು ನಿರಾಕರಿಸಿದಾಗ, ಪೊಲೀಸರು ವಿಭಿನ್ನ ರೀತಿಯ ಲಂಚ ಬೇಡಿಕೆ ಇಟ್ಟಿದ್ದಾರೆ. “ಹಣ ಬೇಡ, ನಮಗೆ ನಾಲ್ಕು ಜೋಡಿ ಶೂ ಕೊಡ್ರಿ” ಎಂದು ಬೇಡಿಕೊಂಡ ಪೊಲೀಸರು ವ್ಯಾಪಾರಿಯಿಂದ ಶೂಗಳನ್ನು ಪಡೆದಿದ್ದಾರೆ. ಆಗಾಗಿ ವ್ಯಾಪಾರಿ ಶೂಗಳನ್ನು ನೀಡಿದ್ದರು ಎನ್ನಲಾಗಿದೆ. ಭ್ರಷ್ಟಾಚಾರ ವಿರೋಧಿ ಸಹಾಯವಾಣಿ ಸಂಖ್ಯೆಗೆ ದೂರು ಸಲ್ಲಿಸಿದ ನಂತರ ಮೂವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.





