ಮುಂಬೈ: ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಸ್ಥಾಪನೆಯಾಗಿ ನೂರು ವರ್ಷಗಳು ತುಂಬುತ್ತಿರುವ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಆಯೋಜಿಸಲಾಗಿರುವ ‘100 ವರ್ಷಗಳ ಸಂಘ ಪಯಣ: ಹೊಸ ದಿಗಂತಗಳು’ ಎಂಬ ವಿಶೇಷ ಉಪನ್ಯಾಸ ಸರಣಿಯು ಶನಿವಾರ ಅದ್ದೂರಿಯಾಗಿ ಚಾಲನೆಗೊಂಡಿದೆ. ಈ ಕಾರ್ಯಕ್ರಮದ ಮೊದಲ ದಿನ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅತಿಥಿಯಾಗಿ ಪಾಲ್ಗೊಂಡು ಎಲ್ಲರ ಗಮನ ಸೆಳೆದಿದ್ದಾರೆ.
ಮುಂಬೈನ ವರ್ಲಿ ಪ್ರದೇಶದ ನೆಹರೂ ಕೇಂದ್ರದಲ್ಲಿ ಫೆಬ್ರವರಿ 7 ಮತ್ತು 8ರಂದು ಈ ‘ವ್ಯಾಖ್ಯಾನಮಾಲಾ’ (ಉಪನ್ಯಾಸ ಸರಣಿ) ಆಯೋಜಿಸಲಾಗಿದೆ. ಶನಿವಾರ ಸಂಜೆ ನಡೆದ ಉದ್ಘಾಟನಾ ಅಧಿವೇಶನದಲ್ಲಿ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್ ಅವರು ಮುಖ್ಯ ಭಾಷಣ ಮಾಡಿದರು. ಸಭೆಯಲ್ಲಿ ನಟ ಸಲ್ಮಾನ್ ಖಾನ್ ಅವರಲ್ಲದೆ, ಖ್ಯಾತ ಚಲನಚಿತ್ರ ನಿರ್ಮಾಪಕ ಸುಭಾಷ್ ಘಾಯ್ ಮತ್ತು ಗೀತರಚನೆಕಾರ ಪ್ರಸೂನ್ ಜೋಶಿ ಸೇರಿದಂತೆ ಹಲವು ಗಣ್ಯರು ಭಾಗವತ್ ಅವರ ವಿಚಾರಗಳನ್ನು ಆಲಿಸಿದರು. ಸಲ್ಮಾನ್ ಖಾನ್ ಕಾರ್ಯಕ್ರಮಕ್ಕೆ ಆಗಮಿಸುತ್ತಿದ್ದಂತೆ ಸಾರ್ವಜನಿಕರು ಫೋಟೋಗಳನ್ನು ತೆಗೆಯಲು ಮುಗಿಬಿದ್ದರು.
ತಮ್ಮ ಭಾಷಣದಲ್ಲಿ ಸಂಘದ ಶತಮಾನದ ಹಾದಿಯನ್ನು ಮೆಲುಕು ಹಾಕಿದ ಮೋಹನ್ ಭಾಗವತ್ ಅವರು, ಸಂಘದ ಕಾರ್ಯವೈಖರಿಯು ಜಗತ್ತಿನಲ್ಲಿಯೇ ವಿಶಿಷ್ಟವಾಗಿದೆ. ಇಂದು ಐದು ಖಂಡಗಳ ಜನರು ಸಂಘದ ಚಟುವಟಿಕೆಗಳನ್ನು ಅಧ್ಯಯನ ಮಾಡಲು ಬರುತ್ತಿದ್ದಾರೆ. ಸಂಘವು ಯಾವುದೇ ಸಂಘಟನೆಯೊಂದಿಗೆ ಸ್ಪರ್ಧಿಸಲು ಅಥವಾ ಯಾವುದೇ ಪರಿಸ್ಥಿತಿಗೆ ಪ್ರತಿಕ್ರಿಯೆಯಾಗಿ ಹುಟ್ಟಿಕೊಂಡಿದ್ದಲ್ಲ. ಇದು ಯಾರಿಗೂ ವಿರುದ್ಧವಾಗಿ ಕಾರ್ಯನಿರ್ವಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬಳಿಕ, ಸಂಘಕ್ಕೆ ಅಧಿಕಾರದ ಹಸಿವಿಲ್ಲ ಅಥವಾ ಜನಪ್ರಿಯತೆಯ ಆಸೆಯಿಲ್ಲ, ಸಂಘದ ಕೆಲಸವು ತನಗಾಗಿ ಅಲ್ಲ, ಬದಲಾಗಿ ಇಡೀ ದೇಶಕ್ಕಾಗಿ ಮತ್ತು ಭಾರತದ ಏಳಿಗೆಗಾಗಿ ನಡೆಯುತ್ತಿದೆ. ಯಾವುದೇ ವಿರೋಧವಿಲ್ಲದೆ ನಮ್ಮ ಕೆಲಸವನ್ನು ನಾವು ಮುಂದುವರಿಸುತ್ತೇವೆ. ಇಂದಿನ ಯುವ ಪೀಳಿಗೆಗೆ ಸಂಘದ ತತ್ವಗಳು ಹೆಚ್ಚು ಪ್ರಸ್ತುತವಾಗಿವೆ ಎಂದು ವಿದೇಶಿ ಸಂಶೋಧಕರು ಕೂಡ ಅಭಿಪ್ರಾಯಪಡುತ್ತಿದ್ದಾರೆ ಎಂದರು.
ಆಸಕ್ತಿಯಿಂದ ಭಾಷಣ ಆಲಿಸಿದ ಸಲ್ಮಾನ್ ಖಾನ್
ಸಲ್ಮಾನ್ ಖಾನ್ ಅವರು ಇಡೀ ಅಧಿವೇಶನದಲ್ಲಿ ಅತ್ಯಂತ ಆಸಕ್ತಿಯಿಂದ ಭಾಗವಹಿಸಿದ್ದರು. ಸಂಘದ ಶತಮಾನೋತ್ಸವದ ಹಿನ್ನೆಲೆಯಲ್ಲಿ ಸಾರ್ವಜನಿಕರೊಂದಿಗೆ ಚರ್ಚೆ ನಡೆಸಲು ಮತ್ತು ಸಂಘದ ನೈಜ ಉದ್ದೇಶಗಳನ್ನು ಜನರಿಗೆ ತಲುಪಿಸಲು ಈ ಎರಡು ದಿನಗಳ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಬಾಲಿವುಡ್‌ನ ಖ್ಯಾತ ನಟರು ಮತ್ತು ಗಣ್ಯರು ಇಂತಹ ಸೈದ್ಧಾಂತಿಕ ಕಾರ್ಯಕ್ರಮದಲ್ಲಿ ಭಾಗವಹಿಸಿರುವುದು ಸದ್ಯ ಸೋಷಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.





