ಕೆನಡಾದಲ್ಲಿ ನಾಪತ್ತೆಯಾಗಿದ್ದ ಭಾರತೀಯ ವಿದ್ಯಾರ್ಥಿನಿ ಶವವಾಗಿ ಪತ್ತೆ

Untitled design 2025 04 29t121023.157

ಚಂಡೀಗಢ: ಪಂಜಾಬ್ ಮೂಲದ ಎಎಪಿ (ಆಮ್ ಆದ್ಮಿ ಪಕ್ಷ) ನಾಯಕನ ಪುತ್ರಿ ವಂನ್ಶಿಕಾ ಸೈನಿ ಕೆನಡಾದಲ್ಲಿ ನಿಗೂಢ ರೀತಿಯಲ್ಲಿ ಸಾವನ್ನಪ್ಪಿದ ಘಟನೆ ಸಂಚಲನ ಸೃಷ್ಟಿಸಿದೆ. 21 ವರ್ಷದ ವಂನ್ಶಿಕಾ ಏಪ್ರಿಲ್ 22ರಿಂದ ನಾಪತ್ತೆಯಾಗಿದ್ದಳು. ಇತ್ತೀಚೆಗೆ ಕೆನಡಾದ ರಾಜಧಾನಿ ಒಟ್ಟವಾದ ಕಡಲ ತೀರದಲ್ಲಿ ಆಕೆಯ ಶವ ಪತ್ತೆಯಾಗಿದೆ.

ವಂನ್ಶಿಕಾ ಸೈನಿ, ಪಂಜಾಬ್‌ನ ಎಎಪಿ ನಾಯಕ ದವೀಂದರ್ ಸೈನಿಯ ಮಗಳು. ದವೀಂದರ್ ಸೈನಿ, ಎಎಪಿ ಶಾಸಕ ಕುಲ್ಜಿತ್ ಸಿಂಗ್ ರಾಂಧವ್ ಅವರ ಆಪ್ತರಾಗಿದ್ದಾರೆ. ವಂನ್ಶಿಕಾ ಪಿಯುಸಿ ನಂತರ ಉನ್ನತ ಶಿಕ್ಷಣಕ್ಕಾಗಿ ಕೆನಡಾಕ್ಕೆ ತೆರಳಿದ್ದರು. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ವಂನ್ಶಿಕಾ ಉನ್ನತ ಶಿಕ್ಷಣ ಜೊತೆಗೆ ಕಾಲ್ ಸೆಂಟರ್‌ನಲ್ಲಿ ಭಾಗಕಾಲಿಕ ಕೆಲಸ ಕೂಡಾ ಮಾಡುತ್ತಿದ್ದರು. ಏಪ್ರಿಲ್ 18ರಂದು ಅಂತಿಮ ಪರೀಕ್ಷೆಗಳನ್ನು ಮುಗಿಸಿದ್ದ ವಂನ್ಶಿಕಾ, ತನ್ನ ಮುಂದಿನ ಯೋಜನೆಗಳಿಗೆ ತಯಾರಾಗುತ್ತಿದ್ದರು.

ಆಕೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಏಪ್ರಿಲ್ 22ರಂದು ಮನೆಯಿಂದ ಹೊರಟ ಬಳಿಕ ನಾಪತ್ತೆಯಾಗಿದ್ದಳು. ಆ ದಿನದ ನಂತರ ವಂನ್ಶಿಕಾಗೆ ಮನೆಯವರು ಸಂಪರ್ಕಿಸಲು ಪ್ರಯತ್ನಿಸಿದರೂ ಆಕೆಯ ಫೋನ್ ಸ್ವಿಚ್‌ಆಫ್ ಆಗಿತ್ತು. ಈ ಸಂದರ್ಭದಲ್ಲಿ ಕುಟುಂಬವು ತೀವ್ರ ಚಿಂತೆಗೊಳಗಾಗಿದ್ದರು. ಏಪ್ರಿಲ್ 25ರಂದು ಆಕೆ IELTS ಪರೀಕ್ಷೆ ಬರೆಯಬೇಕಿತ್ತು. ಆದರೆ ಆ ದಿನಕ್ಕೂ ಆಕೆ ಮನೆಗೆ ಹಿಂತಿರುಗಲಿಲ್ಲ. ಒಟ್ಟವಾದ ಸಮುದ್ರ ತೀರದ ಬಳಿ ವಂನ್ಶಿಕಾ ಶವವಾಗಿ ಪತ್ತೆಯಾಗಿದ್ದರು. ಅವರ ಸಾವಿನ ಬಗ್ಗೆ ಕುಟುಂಬವು  ಪೂರ್ಣ ಪ್ರಮಾಣದ ತನಿಖೆ ನಡೆಸಬೇಕೆಂದು ಒತ್ತಾಯಿಸಿದೆ.

ಈ ಪ್ರಕರಣದ ಬಗ್ಗೆ ಕೆನಡಾದಲ್ಲಿರುವ ಭಾರತೀಯ ಹೈಕಮಿಷನ್ ಕೂಡ ತಕ್ಷಣ ಸ್ಪಂದಿಸಿದೆ. ಎಕ್ಸ್ (ಹಳೆಯ ಟ್ವಿಟರ್)ನಲ್ಲಿ ಪೋಸ್ಟ್ ಮಾಡಿ, “ಭಾರತೀಯ ವಿದ್ಯಾರ್ಥಿನಿ ವಂನ್ಶಿಕಾ ಸೈನಿ ಅವರ ನಿಧನದ ಸುದ್ದಿ ಕೇಳಿ ನಾವು ಆಘಾತಗೊಂಡಿದ್ದೇವೆ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಂಪರ್ಕ ಸಾಧಿಸಿದ್ದು, ಸ್ಥಳೀಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಮೃತ ವಿದ್ಯಾರ್ಥಿನಿಯ ಕುಟುಂಬಕ್ಕೆ ಎಲ್ಲ ರೀತಿಯ ಸಹಾಯ ಒದಗಿಸಲು ನಾವು ಸ್ಥಳೀಯ ಆಡಳಿತ ಹಾಗೂ ಭಾರತೀಯ ಸಮುದಾಯದೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದೇವೆ,” ಎಂದು ತಿಳಿಸಿದೆ.

ಪಂಜಾಬ್‌ನಲ್ಲಿ ದವೀಂದರ್ ಸೈನಿ ಕುಟುಂಬ ಹಾಗೂ ಅವರ ಆತ್ಮೀಯರು ವಂನ್ಶಿಕಾಗೆ ನ್ಯಾಯ ದೊರಕಿಸಬೇಕು ಎಂದು ಒತ್ತಾಯಿಸುತ್ತಿದ್ದಾರೆ. “ನಮ್ಮ ಮಗಳ ಸಾವಿನ ಹಿಂದಿರುವ ನಿಜಾಸತ್ಯ ಹೊರಬರಬೇಕು. ಎಂಥದ್ದೇ ಒತ್ತಡವಿಲ್ಲದೆ ಮುಕ್ತ ಹಾಗೂ ನ್ಯಾಯಸಮ್ಮತ ತನಿಖೆ ನಡೆಯಬೇಕು,” ಎಂದು ಕುಟುಂಬದವರು ಬೇಡಿಕೆ ಹಾಕಿದ್ದಾರೆ.

Exit mobile version