7ನೇ ಮದುವೆಗೆ ಸಜ್ಜಾದ ತಂದೆ: ದೂರು ನೀಡಲು ಪೊಲೀಸ್ ಠಾಣೆ ಮೆಟ್ಟಿಲೇರಿದ ಮಗ

Untitled design 2026 03 11T080446.130

ಇತ್ತೀಚಿನ ದಿನಗಳಲ್ಲಿ ಅನೈತಿಕ ಸಂಬಂಧಗಳು ಹಾಗೂ ಬಹುಪತ್ನಿತ್ವದಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಅಂತಹದ್ದೇ ಒಂದು ವಿಚಿತ್ರ ಘಟನೆ ಉತ್ತರ ಪ್ರದೇಶದ ಅಜಂಗಢ ಜಿಲ್ಲೆಯ ಅಹೌಲಾ ಪ್ರದೇಶದಲ್ಲಿ ನಡೆದಿದೆ. ತನ್ನ ತಂದೆ ಏಳನೇ ಮದುವೆಗೆ ಸಜ್ಜಾಗಿರುವುದನ್ನು ತಡೆಯುವಂತೆ ಮಗನೇ ಪೊಲೀಸರ ಬಳಿ ದೂರು ನೀಡಿರುವ ಘಟನೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ..

ಈ ಪ್ರಕರಣದಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ವಿರುದ್ಧ ಪೊಲೀಸ್ ಠಾಣೆಗೆ ತೆರಳಿ ಮನವಿ ಸಲ್ಲಿಸಿದ್ದಾನೆ. ತನ್ನ ತಂದೆ ಈಗಾಗಲೇ ಆರು ಮದುವೆ ಮಾಡಿಕೊಂಡಿದ್ದು, ಈಗ ಮತ್ತೊಮ್ಮೆ ಏಳನೇ ಮದುವೆಯಾಗಲು ಸಿದ್ಧತೆ ನಡೆಸುತ್ತಿದ್ದಾರೆ ಎಂದು ಆತ ಆರೋಪಿಸಿದ್ದಾನೆ. ಈ ಮದುವೆಯನ್ನು ತಡೆಯಲು ಹಲವು ಬಾರಿ ತಂದೆಯನ್ನು ಮನವೊಲಿಸಲು ಪ್ರಯತ್ನಿಸಿದ್ದರೂ, ಅವರು ಯಾರ ಮಾತನ್ನೂ ಕೇಳದೆ ತಮ್ಮ ನಿರ್ಧಾರದಲ್ಲಿ ಹಠ ಹಿಡಿದಿದ್ದಾರೆ ಎಂದು ವಿದ್ಯಾರ್ಥಿ ಹೇಳಿದ್ದಾನೆ.

ದೂರು ನೀಡಿದ ವಿದ್ಯಾರ್ಥಿ, ತನ್ನ ತಂದೆ ಈಗಾಗಲೇ ಕುಟುಂಬದ ಆಸ್ತಿಗಳನ್ನು ಅಡ ಇಟ್ಟಿದ್ದು, ದುಶ್ಚಟಗಳಿಗೆ ಒಳಗಾಗಿ ಕುಟುಂಬವನ್ನು ಸಂಕಷ್ಟಕ್ಕೆ ತಳ್ಳಿದ್ದಾರೆ ಎಂದು ಆರೋಪಿಸಿದ್ದಾನೆ. ತಂದೆಯ ಈ ವರ್ತನೆಯಿಂದ ಕುಟುಂಬದ ಸದಸ್ಯರು ಈಗಾಗಲೇ ಆರ್ಥಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಆತ ಪೊಲೀಸರಿಗೆ ತಿಳಿಸಿದ್ದಾನೆ.

ಈ ವಿದ್ಯಾರ್ಥಿ ಆ ವ್ಯಕ್ತಿಯ ಮೂರನೇ ಹೆಂಡತಿಯ ಮಗ ಎಂದು ತಿಳಿದುಬಂದಿದೆ. ಕುಟುಂಬದಲ್ಲಿ ಆಗಾಗ ಜಗಳಗಳು ಉಂಟಾಗುತ್ತಿದ್ದು, ಈಗ ಮತ್ತೆ ಮತ್ತೊಂದು ಮದುವೆ ಮಾಡಿದರೆ ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ಆತ ಆತಂಕ ವ್ಯಕ್ತಪಡಿಸಿದ್ದಾನೆ.

ತಂದೆಯ ಮದುವೆ ಸಿದ್ಧತೆಗಳ ಬಗ್ಗೆ ಮಾಹಿತಿ ತಿಳಿದ ಬಳಿಕ ವಿದ್ಯಾರ್ಥಿ ತಕ್ಷಣವೇ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾನೆ. “ನಾನು ಎಷ್ಟೇ ಮನವಿ ಮಾಡಿದರೂ ಅಪ್ಪ ಮಾತು ಕೇಳುತ್ತಿಲ್ಲ. ಮತ್ತೆ ಮದುವೆ ಮಾಡಿಕೊಳ್ಳುತ್ತೇನೆ ಎಂದು ಹೇಳುತ್ತಿದ್ದಾರೆ. ನಮ್ಮ ಕುಟುಂಬ ಈಗಾಗಲೇ ಸಂಕಷ್ಟದಲ್ಲಿದೆ. ದಯವಿಟ್ಟು ಈ ಮದುವೆಯನ್ನು ತಡೆಯಿರಿ” ಎಂದು ಆತ ಪೊಲೀಸರ ಮುಂದೆ ಮನವಿ ಮಾಡಿಕೊಂಡಿದ್ದಾನೆ.

ಪೊಲೀಸರು ದೂರು ಸ್ವೀಕರಿಸಿದ್ದು, ಸಂಬಂಧಪಟ್ಟ ವ್ಯಕ್ತಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

Exit mobile version