‘ಏಕರೂಪ ನಾಗರಿಕ ಸಂಹಿತೆಯೇ ಎಲ್ಲ ಸಮಸ್ಯೆಗಳಿಗೂ ಉತ್ತರ’ : ಸುಪ್ರೀಂ ಕೋರ್ಟ್

Untitled design 2026 03 11T085917.060

ನವದೆಹಲಿ, ಮಾರ್ಚ್ 11: ದೇಶದಲ್ಲಿ ಏಕರೂಪದ ನಾಗರಿಕ ಸಂಹಿತೆ (ಯುಸಿಸಿ) ಜಾರಿಗೆ ಬರುವ ಕಾಲ ಕೂಡಿಬಂದಿದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಮುಸ್ಲಿಂ ಮಹಿಳೆಯರ ವಿರುದ್ಧ ತಾರತಮ್ಯಕ್ಕೆ ಅವಕಾಶ ನೀಡುತ್ತದೆ ಎನ್ನಲಾಗುತ್ತಿರುವ 1937ರ ಶರಿಯತ್ ಕಾನೂನಿನ ಕೆಲವು ವಿಧಿಗಳನ್ನು ರದ್ದುಪಡಿಸುವ ಕುರಿತು ಸಲ್ಲಿಸಲಾದ ಅರ್ಜಿ ವಿಚಾರಣೆ ನಡೆಸುವ ಸಂದರ್ಭದಲ್ಲಿ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತಪಡಿಸಿತು.

ಈ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯ್ಮಲ್ಯ ಬಾಗ್ಚಿ ಮತ್ತು ನ್ಯಾಯಮೂರ್ತಿ ಆರ್. ಮಹಾದೇವನ್ ಅವರಿದ್ದ ಪೀಠ ವಿಚಾರಣೆ ನಡೆಸಿತು. ಶರಿಯತ್ ಕಾನೂನಿನ ಕೆಲವು ನಿಯಮಗಳನ್ನು ತಕ್ಷಣವೇ ರದ್ದುಪಡಿಸುವುದರಿಂದ ಕಾನೂನು ವ್ಯವಸ್ಥೆಯಲ್ಲಿ ನಿರ್ವಾತ ಉಂಟಾಗುವ ಸಾಧ್ಯತೆ ಇದೆ ಎಂಬ ಆತಂಕವನ್ನೂ ಪೀಠ ವ್ಯಕ್ತಪಡಿಸಿದೆ.

ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಮಹತ್ವದ ಪ್ರಶ್ನೆ ಎತ್ತಿತು. “ಒಂದು ವೇಳೆ ಶರಿಯತ್‌ನ ಉತ್ತರದಾಯಿತ್ವಕ್ಕೆ ಸಂಬಂಧಿಸಿದ ವಿಧಿಯನ್ನು ನ್ಯಾಯಾಲಯವೇ ರದ್ದುಪಡಿಸಿದರೆ, ಅದರ ಬದಲಿಗೆ ಮುಸ್ಲಿಮರ ಉತ್ತರಾಧಿಕಾರ ಮತ್ತು ಕುಟುಂಬ ಸಂಬಂಧಿತ ವಿಚಾರಗಳನ್ನು ನಿಯಂತ್ರಿಸುವ ಸ್ಪಷ್ಟ ಕಾನೂನು ಇರುವುದಿಲ್ಲ. ಇದರಿಂದ ಕಾನೂನು ನಿರ್ವಾತ ಉಂಟಾಗುವುದಿಲ್ಲವೇ?” ಎಂದು ಪೀಠ ಪ್ರಶ್ನಿಸಿತು.

ಮುಸ್ಲಿಂ ಮಹಿಳೆಯರಿಗೆ ಸಮಾನ ಹಕ್ಕು ಸಿಗಬೇಕು ಎಂಬ ಉದ್ದೇಶ ಸಕಾರಾತ್ಮಕವಾದದ್ದೇ ಆಗಿದ್ದರೂ, ಕಾನೂನು ಬದಲಾವಣೆ ಮಾಡುವಾಗ ಅದರ ಪರಿಣಾಮಗಳನ್ನೂ ಗಮನಿಸಬೇಕಾಗುತ್ತದೆ ಎಂದು ನ್ಯಾಯಾಲಯ ಹೇಳಿತು.

ಅತಿಯಾದ ಆತುರದಿಂದ ಸಮಸ್ಯೆ ಹೆಚ್ಚಾಗುವ ಸಾಧ್ಯತೆ

ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರಿಗೆ ಪ್ರಶ್ನಿಸಿದ ನ್ಯಾಯಮೂರ್ತಿಗಳು, ಸುಧಾರಣೆಗಳನ್ನು ತ್ವರಿತವಾಗಿ ಮಾಡಲು ಪ್ರಯತ್ನಿಸಿದರೆ ಮುಸ್ಲಿಂ ಮಹಿಳೆಯರಿಗೆ ಅನುಕೂಲವಾಗುವ ಬದಲು ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಸೂಚಿಸಿದರು.

“ಒಂದು ವೇಳೆ 1937ರ ಶರಿಯತ್ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದು ಮಾಡಿದರೆ, ಅದರ ಬದಲಿಗೆ ಯಾವುದೇ ಶಾಸನಬದ್ಧ ವ್ಯವಸ್ಥೆ ಇಲ್ಲದ ಕಾರಣ ಅನಗತ್ಯ ಗೊಂದಲ ಉಂಟಾಗಬಹುದು. ಹೀಗಾಗಿ ನ್ಯಾಯಾಲಯದ ತೀರ್ಪು ಕಾನೂನು ವ್ಯವಸ್ಥೆಯಲ್ಲಿ ಖಾಲಿತನ ಸೃಷ್ಟಿಸಬಹುದೇ ಎಂಬುದನ್ನು ಪರಿಗಣಿಸಬೇಕಾಗಿದೆ,” ಎಂದು ಪೀಠ ಅಭಿಪ್ರಾಯಪಟ್ಟಿತು.

ಶಾಸಕಾಂಗವೇ ನಿರ್ಧಾರ ಕೈಗೊಳ್ಳಬೇಕು

ಈ ವೇಳೆ ನ್ಯಾಯಮೂರ್ತಿ ಜಾಯ್‌ಮಲ್ಯಾ ಬಾಗ್ಚಿ ಅವರು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದರು. “ತಾರತಮ್ಯದ ಪ್ರಶ್ನೆಯಲ್ಲಿ ಅರ್ಜಿದಾರರು ಬಲವಾದ ವಾದಗಳನ್ನು ಮಂಡಿಸಿದ್ದಾರೆ. ಆದರೆ ಈ ರೀತಿಯ ಪ್ರಮುಖ ಸಾಮಾಜಿಕ ಮತ್ತು ಕಾನೂನು ಸುಧಾರಣೆಗಳನ್ನು ನ್ಯಾಯಾಲಯಕ್ಕಿಂತ ಶಾಸನಾಂಗವೇ ನಿರ್ಧರಿಸುವುದು ಸೂಕ್ತ,” ಎಂದು ಅವರು ಹೇಳಿದರು.

ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ಅಧಿಕಾರ ಸಂಸತ್ತಿಗೆ ಇರುವುದರಿಂದ ಈ ವಿಷಯವನ್ನು ಶಾಸನಾಂಗದ ವಿವೇಚನೆಗೆ ಬಿಡುವುದು ಉತ್ತಮ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಬಹುಪತ್ನಿತ್ವದ ಪ್ರಶ್ನೆ

ವಿಚಾರಣೆ ವೇಳೆ ನ್ಯಾಯಾಲಯವು ಬಹುಪತ್ನಿತ್ವದ ವಿಷಯವನ್ನೂ ಉಲ್ಲೇಖಿಸಿತು. “ಒಬ್ಬ ವ್ಯಕ್ತಿಗೆ ಒಬ್ಬಳೇ ಹೆಂಡತಿ ಎಂಬ ನಿಯಮ ಎಲ್ಲ ಸಮುದಾಯಗಳಲ್ಲಿ ಸಮಾನವಾಗಿ ಜಾರಿಯಲ್ಲ. ಹಾಗಾಗಿ ನ್ಯಾಯಾಲಯವೇ ಎಲ್ಲಾ ಬಹುಪತ್ನಿತ್ವ ಪ್ರಕರಣಗಳನ್ನು ಅಸಾಂವಿಧಾನಿಕ ಎಂದು ಘೋಷಿಸಲು ಸಾಧ್ಯವಿಲ್ಲ,” ಎಂದು ನ್ಯಾಯಮೂರ್ತಿಗಳು ಹೇಳಿದರು.

ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರು, ದೇಶದಲ್ಲಿ ವಿವಿಧ ಧರ್ಮಗಳಿಗೆ ವಿಭಿನ್ನ ವೈಯಕ್ತಿಕ ಕಾನೂನುಗಳಿರುವ ಹಿನ್ನೆಲೆಯಲ್ಲಿ ಉಂಟಾಗುವ ಸಮಸ್ಯೆಗಳಿಗೆ ಏಕರೂಪ ನಾಗರಿಕ ಸಂಹಿತೆಯೇ ಸಮಗ್ರ ಪರಿಹಾರವಾಗಬಹುದು ಎಂದು ಅಭಿಪ್ರಾಯಪಟ್ಟರು.

Exit mobile version