ಅಯೋಧ್ಯೆ: ಭಗವಂತನ ಮೇಲಿನ ಪ್ರೀತಿ ಮತ್ತು ದೃಢಸಂಕಲ್ಪವಿದ್ದರೆ ಎಂತಹ ಅಸಾಧ್ಯವಾದುದನ್ನೂ ಸಾಧಿಸಬಹುದು ಎಂಬುದನ್ನು ಉತ್ತರ ಪ್ರದೇಶದ ಒಂಬತ್ತು ವರ್ಷದ ಪುಟ್ಟ ಬಾಲಕಿ ಸಾಬೀತುಪಡಿಸಿದ್ದಾಳೆ. ಫಿರೋಜಾಬಾದ್‌ನ ವಂಶಿಕಾ ಯಾದವ್ ಎಂಬ ಪೋರಿ, ಅಯೋಧ್ಯೆಯ ಬಾಲರಾಮನ ದರ್ಶನಕ್ಕಾಗಿ ಬರೋಬ್ಬರಿ 450 ಕಿಲೋಮೀಟರ್ ದೂರವನ್ನು ಸ್ಕೇಟಿಂಗ್ (Skating) ಮೂಲಕ ರಾಮನ ದರ್ಶನ ಪಡೆದಿರುವುದು ಎಲ್ಲರು ಹುಬ್ಬೇರಿಸುವಂತೆ ಮಾಡಿದೆ.
ಐದೇ ದಿನಗಳಲ್ಲಿ 450 ಕಿಲೋಮೀಟರ್ ದೂರ!
ಫಿರೋಜಾಬಾದ್ ಜಿಲ್ಲೆಯ ಶಿವಶಂಕರ್ ಯಾದವ್ ಅವರ ಪುತ್ರಿಯಾದ ವಂಶಿಕಾ, ಶ್ರೀರಾಮನ ಪರಮ ಭಕ್ತೆ. ಅಯೋಧ್ಯೆಯಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠಾಪನೆಯಾದ ನಂತರ ಆಕೆಗೆ ಹೇಗಾದರೂ ಮಾಡಿ ರಾಮನನ್ನು ಭೇಟಿ ಮಾಡಬೇಕೆಂಬ ಹಂಬಲವಿತ್ತು. ಇದಕ್ಕಾಗಿ ಆಕೆ ಜನವರಿ 3ರಂದು ಫಿರೋಜಾಬಾದ್‌ನಿಂದ ತನ್ನ ಸ್ಕೇಟಿಂಗ್ ಪ್ರಯಾಣ ಆರಂಭಿಸಿದ ವಂಶಿಕಾ, ಕೇವಲ ಐದು ದಿನಗಳಲ್ಲಿ ಸುಮಾರು 450 ಕಿಲೋಮೀಟರ್ ದೂರವನ್ನು ಕ್ರಮಿಸಿ ಅಯೋಧ್ಯೆ ತಲುಪಿದ್ದಾಳೆ.
ದಾರಿಯುದ್ದಕ್ಕೂ ಸಮಾಜಮುಖಿ ಕಾರ್ಯ
ವಂಶಿಕಾ ಕೇವಲ ಸ್ಕೇಟಿಂಗ್ ಮಾಡುವುದಕ್ಕಷ್ಟೇ ಅಲ್ಲದೆ ದಾರಿಯುದ್ದಕ್ಕೂ ಸಣ್ಣ ಸಣ್ಣ ವಿರಾಮ ತೆಗೆದುಕೊಳ್ಳುತ್ತಿದ್ದಾಗ, ಆಗ ರಸ್ತೆ ಬದಿಯ ಮೈಲಿಗಲ್ಲುಗಳ ಮೇಲಿದ್ದ ಧೂಳು ಮತ್ತು ಕಳೆಗಳನ್ನು ಸ್ವಚ್ಛಗೊಳಿಸುತ್ತಾ ಸಾಗಿದ್ದಾಳೆ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ಆಕೆಯ ಭಕ್ತಿಯ ಜೊತೆಗೆ ಸಮಾಜದ ಬಗೆಗಿನ ಕಾಳಜಿಯನ್ನು ನೋಡಿ ಆಕೆಯನ್ನ ಶ್ಲಾಘಿಸಿದ್ದಾರೆ. ಸ್ವಚ್ಛತೆಯೇ ಸೇವೆ ಎಂಬ ಸಂದೇಶವನ್ನು ಈ ಪುಟ್ಟ ಬಾಲಕಿ ತನ್ನ ಸಾಹಸದ ಮೂಲಕ ಸಾರಿದ್ದಾಳೆ.
ಕುಟುಂಬದ ಬೆಂಬಲ ಮತ್ತು ದೃಢಸಂಕಲ್ಪ
ಈ ಸಾಹಸದ ಉದ್ದಕ್ಕೂ ವಂಶಿಕಾಳ ಸುರಕ್ಷತೆಯ ದೃಷ್ಟಿಯಿಂದ ಆಕೆಯ ತಂದೆ ಮತ್ತು ಚಿಕ್ಕಪ್ಪ ಕಾರಿನಲ್ಲಿ ಆಕೆಯನ್ನು ಹಿಂಬಾಲಿಸಿದರು. ಕೊರೆಯುವ ಚಳಿ ಮತ್ತು ರಸ್ತೆಯ ಅಡೆತಡೆಗಳ ನಡುವೆಯೂ ಈ ಬಾಲಕಿ ಎದೆಗುಂದದೆ ಸ್ಕೇಟಿಂಗ್ ಮೂಲಕ ಶ್ರೀರಾಮ ದರ್ಶನ ಪಡೆಯಲು ಪೋಷಕರೂ ಸಹ ನೆರವಾಗಿದ್ದಾರೆ. ನನ್ನ ದೃಢಸಂಕಲ್ಪ ಮತ್ತು ರಾಮನ ಮೇಲಿನ ಅಚಲ ಭಕ್ತಿಯೇ ನನ್ನನ್ನು ಇಲ್ಲಿಯವರೆಗೆ ಕರೆತಂದಿದೆ ಎಂದು ಅಯೋಧ್ಯೆ ತಲುಪಿದ ಮೇಲೆ ವಂಶಿಕಾ ಸಂತಸದಿಂದ ಹೇಳಿದ್ದಾಳೆ. ಒಂಬತ್ತು ವರ್ಷದ ಬಾಲಕಿಯ ಈ ಅದ್ಭುತ ಸಾಧನೆ ಮತ್ತು ರಾಮನಿಗಾಗಿ ಆಕೆ ತೋರಿದ ಭಕ್ತಿ ಈಗ ದೇಶಾದ್ಯಂತ ಸುದ್ದಿಯಾಗಿದ್ದು, ನೆಟ್ಟಿಗರು ಆಧುನಿಕ ಶಬರಿ ಎಂದು ಆಕೆಯನ್ನು ಕರೆದಿದ್ದಾರೆ.





