ನವದೆಹಲಿ: ಭಾರತವು ಇಂದು ತನ್ನ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸುತ್ತಿದೆ. ಇಡೀ ದೇಶದ ಚಿತ್ತ ದೆಹಲಿಯ ಕರ್ತವ್ಯ ಪಥದತ್ತ (Kartavya Path) ನೆಟ್ಟಿದ್ದು, ಈ ಬಾರಿಯ ಪರೇಡ್‌ನಲ್ಲಿ ಭಾರತೀಯ ವಾಯುಪಡೆಯ ಅತ್ಯಂತ ಬಲಿಷ್ಠ ಗೇಮ್ ಚೇಂಜರ್ ಎಂದೇ ಖ್ಯಾತಿಯಾಗಿರುವ ಎಸ್-400 (S-400) ವಾಯು ರಕ್ಷಣಾ ವ್ಯವಸ್ಥೆಯ ಪ್ರದರ್ಶನ ಪ್ರಮುಖ ಆಕರ್ಷಣೆಯಾಗಿದೆ.
ಇಂದು ಪ್ರದರ್ಶನಗೊಂಡ ಎಸ್-400 ವಾಯು ರಕ್ಷಣಾ ವ್ಯವಸ್ಥೆಯು ಕೇವಲ ಒಂದು ಯಂತ್ರವಲ್ಲ, ಇದು ಭಾರತಕ್ಕೆ ಕವಚದಂತಿದೆ. ಇತ್ತೀಚೆಗೆ ನಡೆದ ಆಪರೇಷನ್ ಸಿಂಧೂರ (Operation Sindoor) ಸಮಯದಲ್ಲಿ ಪಾಕಿಸ್ತಾನದ ಕ್ಷಿಪಣಿಗಳು ಮತ್ತು ಡ್ರೋನ್ ದಾಳಿಗಳನ್ನು ಅತ್ಯಂತ ಯಶಸ್ವಿಯಾಗಿ ಧ್ವಂಸಗೊಳಿಸುವ ಮೂಲಕ ಈ ವ್ಯವಸ್ಥೆಯು ತನ್ನ ಶಕ್ತಿಯನ್ನು ಸಾಬೀತುಪಡಿಸಿತ್ತು. ಪಾಕಿಸ್ತಾನದ ಕುತಂತ್ರಕ್ಕೆ ಬ್ರೇಕ್ ಹಾಕಿದ ಈ ಎಸ್-400 ಅನ್ನು ಭಾರತೀಯ ಸೇನೆ ಪ್ರೀತಿಯಿಂದ ‘ಸುದರ್ಶನ ಚಕ್ರ’ ಎಂದು ಕರೆಯುತ್ತದೆ.
ಗೇಮ್ ಚೇಂಜರ್ ಏಕೆ?
S-400 ವಾಯು ರಕ್ಷಣಾ ವ್ಯವಸ್ಥೆಯು ದೀರ್ಘ-ಶ್ರೇಣಿಯ ಮೇಲ್ಮೈಯಿಂದ ಆಕಾಶಕ್ಕೆ (Surface-to-Air) ಚಿಮ್ಮುವ ಕ್ಷಿಪಣಿ ವ್ಯವಸ್ಥೆಯಾಗಿದೆ. ಇದು ಸುಮಾರು 400 ಕಿ.ಮೀ ದೂರದಲ್ಲೇ ಶತ್ರು ವಿಮಾನಗಳು, ಸ್ಟೆಲ್ತ್ ಫೈಟರ್ ಜೆಟ್‌ಗಳು, ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಗುರುತಿಸಿ ಹೊಡೆದುರುಳಿಸುವ ಸಾಮರ್ಥ್ಯ ಹೊಂದಿದೆ. ಇದರ ಯಶಸ್ಸನ್ನು ಕಂಡ ಮೇಲೆ ಈಗ ವಿಶ್ವದ ಹಲವು ರಾಷ್ಟ್ರಗಳು ರಷ್ಯಾದ ಈ ವ್ಯವಸ್ಥೆಯ ಮೇಲೆ ಕಣ್ಣಿಟ್ಟಿವೆ.
ಭಾರತವು 2018 ರಲ್ಲಿ ರಷ್ಯಾದೊಂದಿಗೆ ಸುಮಾರು 5.5 ಶತಕೋಟಿ ಡಾಲರ್ (ಸುಮಾರು ₹40,000 ಕೋಟಿ) ವೆಚ್ಚದಲ್ಲಿ ಐದು ಎಸ್-400 ಘಟಕಗಳಿಗಾಗಿ ಒಪ್ಪಂದ ಮಾಡಿಕೊಂಡಿತ್ತು. ಚೀನಾದ ಬೆಳೆಯುತ್ತಿರುವ ಮಿಲಿಟರಿ ಶಕ್ತಿಯನ್ನು ಸಮತೋಲನಗೊಳಿಸಲು ಈ ಒಪ್ಪಂದ ನಿರ್ಣಾಯಕವಾಗಿತ್ತು. ರಷ್ಯಾ-ಉಕ್ರೇನ್ ಸಂಘರ್ಷದ ಕಾರಣ ಪೂರೈಕೆಯಲ್ಲಿ ತುಸು ವಿಳಂಬವಾಗಿದ್ದರೂ, ಈಗಾಗಲೇ ಮೂರು ಘಟಕಗಳು ಭಾರತದ ಗಡಿಯಲ್ಲಿ ಸನ್ನದ್ಧವಾಗಿವೆ. ಬಾಕಿ ಉಳಿದಿರುವ ಕೊನೆಯ ಎರಡು ಘಟಕಗಳು 2026 ಮತ್ತು 2027ರ ವೇಳೆಗೆ ಭಾರತಕ್ಕೆ ಹಸ್ತಾಂತರವಾಗಲಿವೆ.
ಪರೇಡ್‌ನ ಇತರೆ ಹೈಲೈಟ್ಸ್
77ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕೇವಲ ರಕ್ಷಣಾ ಸಾಮರ್ಥ್ಯ ಮಾತ್ರವಲ್ಲದೆ, ಭಾರತದ ಸಾಂಸ್ಕೃತಿಕ ವೈವಿಧ್ಯತೆಯೂ ಅನಾವರಣಗೊಂಡಿದೆ. ಒಟ್ಟು 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸ್ತಬ್ಧಚಿತ್ರಗಳು (Tableaux) ಕರ್ತವ್ಯ ಪಥದಲ್ಲಿ ಸಾಗಿದವು. ರಕ್ಷಣಾ ಇಲಾಖೆಯ ಸ್ತಬ್ಧಚಿತ್ರ ವಿಭಾಗದಲ್ಲಿ ಎಸ್-400 ಕ್ಷಿಪಣಿ ಸಾಗುವಾಗ ನೆರೆದಿದ್ದ ಜನಸ್ತೋಮ ಹರ್ಷೋದ್ಗಾರದಿಂದ ಕಣ್ತುಂಬಿಕೊಂಡರು.





