ನವದೆಹಲಿ: ಭಾರತವು ಇಂದು ತನ್ನ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಡಗರದಿಂದ ಆಚರಿಸುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯ ಪಥದಲ್ಲಿ (Kartavya Path) ನಡೆಯುತ್ತಿರುವ ಪಥಸಂಚಲನವು ಭಾರತದ ಹೆಚ್ಚುತ್ತಿರುವ ಸೇನಾ ಬಲ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಜಗತ್ತಿಗೆ ಸಾರಿದೆ.
ಬೆಳಿಗ್ಗೆ 10:30ಕ್ಕೆ ಸರಿಯಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ಸ್ವದೇಶಿ ನಿರ್ಮಿತ 105 MM ಲೈಟ್ ಫೀಲ್ಡ್ ಗನ್‌ಗಳ ಮೂಲಕ 21 ಕುಶಾಲತೋಪುಗಳ ಗೌರವ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದು ವಿಶೇಷವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಇದಕ್ಕೂ ಮುನ್ನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ವೀರ ಯೋಧರಿಗೆ ನಮನ ಸಲ್ಲಿಸಿದರು.
‘ವಂದೇ ಮಾತರಂ’ ರಚನೆಯಾಗಿ 150 ವರ್ಷಗಳು ಪೂರೈಸಿದ ಸವಿ ನೆನಪಿಗಾಗಿ ಇಡೀ ಪರೇಡ್ ಅನ್ನು ವಿನ್ಯಾಸಗೊಳಿಸಲಾಗಿತ್ತು. ‘ಸ್ವಾತಂತ್ರ್ಯದ ಮಂತ್ರ: ವಂದೇ ಮಾತರಂ’ ಮತ್ತು ‘ಸಮೃದ್ಧಿಯ ಮಂತ್ರ: ಆತ್ಮನಿರ್ಭರ ಭಾರತ’ ಎಂಬ ಪರಿಕಲ್ಪನೆಗಳ ಅಡಿಯಲ್ಲಿ ಸ್ತಬ್ಧಚಿತ್ರಗಳು ಸಾಗಿದವು. ಒಟ್ಟು 30 ಸ್ತಬ್ಧಚಿತ್ರಗಳ ಪೈಕಿ 17 ರಾಜ್ಯಗಳಿಂದ ಹಾಗೂ 13 ಕೇಂದ್ರ ಸಚಿವಾಲಯಗಳಿಂದ ಪ್ರದರ್ಶನಗೊಳ್ಳುತ್ತಿವೆ.
ವಾಯುಪಡೆಯ ಶಕ್ತಿ ಪ್ರದರ್ಶನವು ಪ್ರೇಕ್ಷಕರ ಮೈ ರೋಮಾಂಚನಗೊಳಿಸಿತು. ‘ಆಪರೇಷನ್ ಸಿಂಧೂರ್’ ಸಮಯದಲ್ಲಿ ಶತ್ರುಗಳ ಹೆಡೆಮುರಿ ಕಟ್ಟಿದ ಎರಡು ರಫೇಲ್ ಜೆಟ್‌ಗಳು, ಎರಡು ಸುಖೋಯ್-30, ಎರಡು ಮಿಗ್-29 ಮತ್ತು ಒಂದು ಜಾಗ್ವಾರ್ ಯುದ್ಧ ವಿಮಾನಗಳು ಆಕಾಶದಲ್ಲಿ ಅದ್ಭುತ ಲೋಹದ ಹಕ್ಕಿಗಳಂತೆ ಹಾರಾಡಿ ವಾಯುಪಡೆಯ ಸಾಮರ್ಥ್ಯವನ್ನು ತೋರಿಸಿದವು. ಸುಮಾರು 2,500 ಕಲಾವಿದರು ಸಾಂಸ್ಕೃತಿಕ ನೃತ್ಯಗಳ ಮೂಲಕ ಭಾರತದ ವೈವಿಧ್ಯತೆಯನ್ನು ಅನಾವರಣಗೊಳಿಸಿದರು.
ಈ ಬಾರಿ ಕೇವಲ ರಾಜತಾಂತ್ರಿಕರಷ್ಟೇ ಅಲ್ಲದೆ, ಗಗನಯಾನ ಮತ್ತು ಚಂದ್ರಯಾನ ಯೋಜನೆಯ ವಿಜ್ಞಾನಿಗಳು, ಕೃಷಿಕರು ಮತ್ತು ಪ್ಯಾರಾ ಅಥ್ಲೆಟಿಕ್ ಚಾಂಪಿಯನ್ ಸೇರಿದಂತೆ 10,000 ವಿಶೇಷ ಅತಿಥಿಗಳಿಗೆ ಮನ್ನಣೆ ನೀಡಲಾಗಿತ್ತು. ಕಾರ್ಯಕ್ರಮದ ಭದ್ರತೆಗಾಗಿ ಮೊದಲ ಬಾರಿಗೆ AI (ಕೃತಕ ಬುದ್ಧಿಮತ್ತೆ) ತಂತ್ರಜ್ಞಾನವನ್ನು ಬಳಸಲಾಗಿತ್ತು. ಮುಖಚಹರೆ ಗುರುತಿಸುವ 1,000ಕ್ಕೂ ಹೆಚ್ಚು ಹೈ-ಡೆಫಿನಿಷನ್ ಕ್ಯಾಮೆರಾಗಳು ಮತ್ತು ಪೊಲೀಸರಿಗೆ AI ತಂತ್ರಜ್ಞಾನದ ಗ್ಲಾಸ್‌ಗಳನ್ನು ನೀಡಿದ್ದಾರೆ





