ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಶಾಲೆಯೊಂದರಲ್ಲಿ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ಶಾಲೆಯ ಅಡುಗೆಮನೆಯಲ್ಲಿ ಬಿಸಿಯಾದ ಹಾಲಿನ ಪಾತ್ರೆಗೆ ಬಿದ್ದು 17 ತಿಂಗಳ ಪುಟ್ಟ ಬಾಲಕಿಯೊಬ್ಬಳು ಪ್ರಾಣ ಕಳೆದುಕೊಂಡಿದ್ದಾಳೆ. ಈ ದಾರುಣ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಣ್ಣೀರು ತರಿಸಿದೆ.
ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣವೇಣಿ ಎಂಬ ಮಹಿಳೆಯ ಮಗಳು ಅಕ್ಷಿತಾ ಮತ್ತು ಮೃತ ಬಾಲಕಿ. ಮನೆಯಲ್ಲಿ ಯಾರೂ ಇಲ್ಲದ ಕಾರಣ, ಕೃಷ್ಣವೇಣಿ ತನ್ನ 17 ತಿಂಗಳ ಮಗಳನ್ನು ಕೆಲಸಕ್ಕೆ ಕರೆದುಕೊಂಡು ಬಂದಿದ್ದರು. ಆದರೆ, ಆ ದಿನ ಆ ಪುಟ್ಟ ಬಾಲಕಿಯ ಕೊನೆಯ ದಿನವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ.
ಘಟನೆ ನಡೆದಿದ್ದು ಹೇಗೆ?
ಕೃಷ್ಣವೇಣಿ ತಮ್ಮ ಕೆಲಸದಲ್ಲಿ ನಿರತರಾಗಿದ್ದಾಗ, ಪುಟ್ಟ ಮಗು ಅಕ್ಷಿತಾ ಅಡುಗೆಮನೆಯ ಸುತ್ತ ಆಟವಾಡುತ್ತಿದ್ದಳು. ಈ ಸಂದರ್ಭದಲ್ಲಿ ಒಂದು ಬೆಕ್ಕು ಅಡುಗೆಮನೆಯೊಳಗೆ ಪ್ರವೇಶಿಸಿದೆ. ಆ ಬೆಕ್ಕನ್ನು ಹಿಡಿಯುವ ಹುರುಪಿನಲ್ಲಿ ಅಕ್ಷಿತಾ ಅದರ ಹಿಂದೆ ಓಡಿದ್ದಾಳೆ.
ಬೆಕ್ಕು ಬಿಸಿಯಾದ ಹಾಲು ತಣ್ಣಗಾಗಲು ಇಡಲಾಗಿದ್ದ ದೊಡ್ಡ ಪಾತ್ರೆಯ ಬಳಿಯಿಂದ ಓಡಿಹೋಗಿದೆ. ಬೆಕ್ಕನ್ನು ಹಿಂಬಾಲಿಸಿಕೊಂಡು ಬಂದ ಅಕ್ಷಿತಾಳ ಕಾಲಿಗೆ ಆ ಪಾತ್ರೆ ತಾಗಿ ಬಿಸಿ ಹಾಲು ತುಂಬಿದ್ದ ಪಾತ್ರೆಯೊಳಗೆ ಬಿದ್ದಿದ್ದಾಳೆ.
ದೊಡ್ಡ ಪಾತ್ರೆಯೊಳಗೆ ಬಿದ್ದ ಮಗು ಹೊರಬರಲು ಸಾಧ್ಯವಾಗದೆ ನೋವಿನಿಂದ ಜೋರಾಗಿ ಕಿರುಚಾಡಿದೆ. ಮಗಳ ಕೂಗು ಕೇಳಿದ ತಕ್ಷಣ ಕೃಷ್ಣವೇಣಿ ಓಡಿಬಂದು ಆಕೆಯನ್ನು ಪಾತ್ರೆಯಿಂದ ಹೊರ ಎತ್ತಿದ್ದಾಳೆ.
ಚಿಕಿತ್ಸೆ ಫಲಕಾರಿಯಾಗದೆ ಸಾವು
ಬಿಸಿಯಾದ ಹಾಲು ತಾಗಿ ಪುಟ್ಟ ಅಕ್ಷಿತಾಳ ದೇಹದ ಬಹುಭಾಗ ಸುಟ್ಟು ಹೋಗಿತ್ತು. ಕೂಡಲೇ ಆಕೆಯನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು, ಬಾಲಕಿಯ ಮೈ ಸುಟ್ಟುಹೋಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಆಕೆ ಮೃತಪಟ್ಟಿದ್ದಾಳೆ. ಈ ಘಟನೆ ಶಾಲೆಯ ಸುರಕ್ಷತೆ ಮತ್ತು ಅಡುಗೆಮನೆ ನಿರ್ವಹಣೆಯ ಬಗ್ಗೆ ಗಂಭೀರ ಪ್ರಶ್ನೆಗಳು ಹುಟ್ಟುಹಾಕಿವೆ.