ಅಮರಾವತಿ: ಮಕರ ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಅಳಿಯಂದಿರನ್ನು ಪ್ರೀತಿಯಿಂದ ಬರಮಾಡಿಕೊಳ್ಳುವುದು ಮತ್ತು ಅವರಿಗೆ ಭರ್ಜರಿ ಆತಿಥ್ಯ ನೀಡುವುದು ಆಂಧ್ರಪ್ರದೇಶದ ಗೋದಾವರಿ ಜಿಲ್ಲೆಗಳ ಪ್ರಾಚೀನ ಸಂಪ್ರದಾಯ. ಈ ಬಾರಿ ತೆನಾಲಿಯ ಒಂದು ಕುಟುಂಬ ಈ ಸಂಪ್ರದಾಯದಂತೆ, ತನ್ನ ಅಳಿಯನಿಗಾಗಿ ಬರೋಬ್ಬರಿ 158 ಬಗೆಯ ಖಾದ್ಯಗಳನ್ನು ಸಿದ್ಧಪಡಿಸಿ ಅಳಿಯನ ಆತಿಥ್ಯ ಮಾಡಿದ್ದಾರೆ.
ತೆನಾಲಿಯ ಪ್ರಸಿದ್ಧ ಉದ್ಯಮಿ ವಂದನಪು ಮುರಳೀಕೃಷ್ಣ ಮತ್ತು ಮಾಧವಿಲತಾ ದಂಪತಿಯ ಪುತ್ರಿ ಮೌನಿಕಾ ಅವರು ಕಳೆದ ವರ್ಷ ರಾಜಮಹೇಂದ್ರವರಂ ಮೂಲದ ಶ್ರೀದತ್ತ ಅವರೊಂದಿಗೆ ವಿವಾಹವಾಗಿದ್ದರು. ಶ್ರೀದತ್ತ ಅವರಿಗೆ ಇದು ಮದುವೆಯ ನಂತರದ ಮೊದಲ ಸಂಕ್ರಾಂತಿ. ಈ ವಿಶೇಷ ಸಂದರ್ಭವನ್ನು ಸ್ಮರಣೀಯವಾಗಿಸಲು ಅತ್ತೆ-ಮಾವ ಅಳಿಯನಿಗಾಗಿ ರಾಜವೈಭೋಗದ ಔತಣಕೂಟ ಏರ್ಪಡಿಸಿದ್ದರು.
ಒಂದೆರಡಲ್ಲ, ಬರೋಬ್ಬರಿ 158 ಬಗೆಯ ವಿವಿಧ ಖಾದ್ಯಗಳನ್ನು ಅಳಿಯನ ಎಲೆಗೆ ಬಡಿಸಲಾಯಿತು. ಇದರಲ್ಲಿ ಆಂಧ್ರದ ಸಾಂಪ್ರದಾಯಿಕ ಸಿಹಿ ತಿಂಡಿಗಳು, ಖಾರ ಸೇರಿದಂತೆ ವಿವಿಧ ಬಗೆಯ ಅನ್ನದ ಪದಾರ್ಥಗಳು, ಪಲ್ಯಗಳು ಹಾಗೂ ಹಣ್ಣು-ಹಂಪಲುಗಳು ಸೇರಿದ್ದವು. ಗೋದಾವರಿ ಜಿಲ್ಲೆಗಳಲ್ಲಿ ಅಳಿಯಂದಿರನ್ನು ಪ್ರೀತಿಯಿಂದ ಸ್ವಾಗತಿಸುವುದು ನಮ್ಮ ಸಂಪ್ರದಾಯ. ಅಳಿಯನ ಮೊದಲ ಹಬ್ಬವಾಗಿರುವುದರಿಂದ ನಾವು ಈ ವಿಶೇಷ ಆತಿಥ್ಯ ನೀಡಿದ್ದೇವೆ ಎಂದು ಮುರಳೀಕೃಷ್ಣ ಹೆಮ್ಮೆಯಿಂದ ಹೇಳಿದ್ದಾರೆ.
Andhra #Sankranti vibes!
From homemade delicacies to luxury cars
In Andhra Alludu (Son-in-Law) = Absolute royalty!In Tenali, a son-in-law was welcomed like a king with a 158-dish feast In Amalapuram, another arrived in a Tesla #Sankranthi #Pongal #Sankranti #AndhraPradesh pic.twitter.com/4DQG3fQTbn
— Ashish (@KP_Aashish) January 15, 2026
ಇತ್ತ ಅಮಲಾಪುರಂನಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಅಳಿಯನೊಬ್ಬ ಟೆಸ್ಲಾ (Tesla) ಎಲೆಕ್ಟ್ರಿಕ್ ವಾಹನದಲ್ಲಿ ಹಬ್ಬಕ್ಕೆ ಆಗಮಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಹಬ್ಬದ ದಿನದಂದು ಅತ್ಯಾಧುನಿಕ ಟೆಸ್ಲಾ ಕಾರಿನಲ್ಲಿ ಅಳಿಯ ಮಾವನ ಮನೆಗೆ ಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು ಇದನ್ನ ನೋಡಿ ನೆಟ್ಟಿಗರು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಒಟ್ಟಾರೆಯಾಗಿ, ಸಾಂಪ್ರದಾಯಿಕ ಆಹಾರ ಮತ್ತು ಆಧುನಿಕ ಜೀವನಶೈಲಿಯ ಮಿಶ್ರಣದೊಂದಿಗೆ ಆಂಧ್ರದಾದ್ಯಂತ ಸಂಕ್ರಾಂತಿ ಹಬ್ಬವನ್ನು ಅಳಿಯಂದಿರ ಸಂಭ್ರಮವಾಗಿ ಆಚರಿಸಲಾಗಿದೆ. ಶ್ರೀದತ್ತ ಅವರು ಮಾತನಾಡಿ, ಅಳಿಯನಾಗಿ ಆಚರಿಸಿದ ಈ ಮೊದಲ ಹಬ್ಬ ಮತ್ತು ಈ ಮರೆಯಲಾಗದ ಆತಿಥ್ಯ ಸದಾ ಕಾಲ ನೆನಪಿನಲ್ಲಿ ಉಳಿಯಲಿದೆ ಎಂದು ಸಂತಸ ಹಂಚಿಕೊಂಡಿದ್ದಾರೆ.





