ಮಂಗಳೂರು: ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ರಹಸ್ಯವಾಗಿ ಹೂತುಹಾಕಿದ ಆರೋಪದ ಪ್ರಕರಣ ಈಗ ಹೊಸ ತಿರುವು ಪಡೆದುಕೊಂಡಿದೆ. ಈ ವಿವಾದಾಸ್ಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಟ್ಯೂಬರ್ ಎಂ.ಡಿ. ಸಮೀರ್ ಅವರು ತಯಾರಿಸಿದ AI-ರಚಿತ ವಿಡಿಯೋದಿಂದಾಗಿ ದೊಡ್ಡ ಗಲಭೆ ಉಂಟಾಗಿದೆ. ಸಮೀರ್ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನಲ್ಲಿ ಸುಳ್ಳು ಮಾಹಿತಿ ಪ್ರಸಾರ ಮತ್ತು ಸಾರ್ವಜನಿಕ ಅಶಾಂತಿ ಉಂಟುಮಾಡಿದ ಆರೋಪಗಳಿವೆ. ಹಲವು ಬಾರಿ ನೋಟಿಸ್ ನೀಡಿದರೂ ವಿಚಾರಣೆಗೆ ಹಾಜರಾಗದ ಕಾರಣದಿಂದಾಗಿ ಪೊಲೀಸರು ಇದೀಗ ಬಂಧನಕ್ಕೆ ಮುಂದಾಗಿದ್ದಾರೆ.
ಆಗಸ್ಟ್ 16 ರಂದು ಧರ್ಮಸ್ಥಳ ಪೊಲೀಸ್ ಠಾಣೆಯ ಸಬ್‌ಇನ್ಸ್‌ಪೆಕ್ಟರ್ ಆನಂದ್ ಎನ್ ನೇತೃತ್ವದ ವಿಶೇಷ ತಂಡ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವ ಸಮೀರ್ ಅವರ ಬಾಡಿಗೆ ಮನೆಯನ್ನು ಸುತ್ತುವರೆದಿದೆ. ಸಮೀರ್ ಅವರನ್ನು ಬಂಧಿಸಿ ಧರ್ಮಸ್ಥಳಕ್ಕೆ ಕರೆತರಲು ಪೊಲೀಸರು ಸಜ್ಜಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪ್ರಕರಣದ ಹಿನ್ನೆಲೆ
ಧರ್ಮಸ್ಥಳದಲ್ಲಿ ಸುಮಾರು ನೂರಾರು ಶವಗಳನ್ನು ರಹಸ್ಯವಾಗಿ ಹೂತುಹಾಕಿ ಅಪರಾಧಗಳನ್ನು ಮುಚ್ಚಿಹಾಕಲಾಗಿದೆ ಎಂಬ ಆರೋಪವು ಜುಲೈ ತಿಂಗಳಲ್ಲಿ ಬೆಳಕಿಗೆ ಬಂದಿತ್ತು. ಒಬ್ಬ ಸ್ವಚ್ಛತಾ ಕಾರ್ಯಕರ್ತನು ನ್ಯಾಯಾಲಯದಲ್ಲಿ ದೂರು ಸಲ್ಲಿಸಿ, ತಾನು ಹಲವು ಶವಗಳನ್ನು ಹೂತುಹಾಕಿದ್ದೇನೆ ಎಂದು ಹೇಳಿದ್ದನು. ಇದರಿಂದಾಗಿ ವಿಶೇಷ ತನಿಖಾ ತಂಡ (SIT) ರಚನೆಯಾಗಿ, ಶೋಧ ಕಾರ್ಯಾಚರಣೆ ಆರಂಭವಾಯಿತು. ಆದರೆ, ಹಲವು ಸ್ಥಳಗಳಲ್ಲಿ ಅಗೆಯುವ ಕೆಲಸ ನಡೆದರೂ ಇದುವರೆಗೆ ಯಾವುದೇ ಮಾನವ ಅವಶೇಷಗಳು ಪತ್ತೆಯಾಗಿಲ್ಲ. ಗೃಹ ಸಚಿವರು ಫಾರೆನ್ಸಿಕ್ ವರದಿ ಬರುವವರೆಗೂ ಶೋಧಕ್ಕೆ ಬ್ರೇಕ್ ಹಾಕಿದ್ದಾರೆ..
ಈ ಮಧ್ಯೆ, ಯೂಟ್ಯೂಬರ್ ಸಮೀರ್ ಅವರು ಈ ಪ್ರಕರಣದ ಬಗ್ಗೆ AI ತಂತ್ರಜ್ಞಾನ ಬಳಸಿ ವಿಡಿಯೋ ಸೃಷ್ಟಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಿಡಿಯೋದಲ್ಲಿ ದೂರುದಾರನ ಹೇಳಿಕೆ ಮತ್ತು ನ್ಯಾಯಾಲಯದ ಮಾಹಿತಿಗಳನ್ನು ಮೀರಿ, ಕಾಲ್ಪನಿಕ ಮತ್ತು ತಪ್ಪು ವಿವರಗಳನ್ನು ಸೇರಿಸಲಾಗಿದೆ. ಉದಾಹರಣೆಗೆ, ಶವಗಳ ಸಂಖ್ಯೆ, ಸ್ಥಳಗಳು ಮತ್ತು ಸಂಬಂಧಿತ ವ್ಯಕ್ತಿಗಳ ಬಗ್ಗೆ ಅತಿಯಾದ ಆರೋಪಗಳು ಇದರಲ್ಲಿ ಇವೆ. ಇದರಿಂದಾಗಿ ಸಾರ್ವಜನಿಕರಲ್ಲಿ ಆಕ್ರೋಶ ಮತ್ತು ಅಶಾಂತಿ ಉಂಟಾಗಿದೆ ಎಂದು ಪೊಲೀಸರು ಹೇಳಿದ್ದಾರೆ.





