ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಶನಿವಾರ ಹಾಡಹಗಲೇ ಭೀಕರ ಕೊಲೆಯೊಂದು ನಡೆದಿದ್ದು, ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿದೆ. ಮದುವೆಯಾಗಲು ಒಪ್ಪದ ಕಾರಣಕ್ಕೆ ಪ್ರಿಯಕರನೇ ಮಹಿಳೆಯನ್ನು ನಡುರಸ್ತೆಯಲ್ಲೇ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ.
ಘಟನೆಯ ಹಿನ್ನೆಲೆ:
ಯಲ್ಲಾಪುರ ಪಟ್ಟಣದ ನಿವಾಸಿ, 30 ವರ್ಷದ ರಂಜಿತಾ ಹತ್ಯೆಯಾದ ದುರ್ದೈವಿ. ಸುಮಾರು 10 ವರ್ಷಗಳ ಹಿಂದೆ ವಿಚ್ಛೇದನ ಪಡೆದಿದ್ದ ರಂಜಿತಾ, ತನ್ನ ಪುಟ್ಟ ಮಗುವಿನೊಂದಿಗೆ ತಂದೆ-ತಾಯಿ ಜೊತೆ ಅಣ್ಣನ ಮನೆಯಲ್ಲಿ ವಾಸವಾಗಿದ್ದರು. ರಂಜಿತಾ ಸ್ಥಳೀಯ ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸಹಾಯಕಿಯಾಗಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದರು.
ಕೆಲವು ವರ್ಷಗಳ ಹಿಂದೆ ರಂಜಿತಾಗೆ ರಫೀಕ್ ಎಂಬ ಯುವಕನ ಪರಿಚಯವಾಗಿತ್ತು. ಆರಂಭದಲ್ಲಿ ಗೆಳೆತನವಾಗಿದ್ದ ಇವರ ಸಂಬಂಧ ನಂತರ ಪ್ರೀತಿಗೆ ತಿರುಗಿತ್ತು. ರಫೀಕ್ ಆಗಾಗ ರಂಜಿತಾ ಮನೆಗೆ ಬಂದು ಹೋಗುತ್ತಿದ್ದ ಮತ್ತು ಎರಡೂ ಕುಟುಂಬಗಳ ನಡುವೆ ಉತ್ತಮ ಬಾಂಧವ್ಯವಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.
ಮದುವೆ ಒತ್ತಡವೇ ಮುಳುವಾಯ್ತು:
ಕಳೆದ ಕೆಲವು ತಿಂಗಳಿಂದ ರಫೀಕ್ ಮದುವೆಯಾಗುವಂತೆ ರಂಜಿತಾ ಮೇಲೆ ನಿರಂತರ ಒತ್ತಡ ಹೇರುತ್ತಿದ್ದ. ಆದರೆ, ರಣಂಜಿತಾ ಇದಕ್ಕೆ ಒಪ್ಪದೇ ನಿರಾಕರಿಸಿದ್ದರು. ನಾನು ಈಗಾಗಲೇ ಮದುವೆಯಿಂದ ಸಾಕಷ್ಟು ತೊಂದರೆ ಅನುಭವಿಸಿದ್ದೇನೆ. ನನಗೆ ಮತ್ತೆ ಮದುವೆ ಇಷ್ಟವಿಲ್ಲ. ನಮ್ಮ ಗೆಳೆತನ ಹೀಗೆ ಇರಲಿ, ಆದರೆ ಮದುವೆ ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದರು. ಇದೇ ವಿಚಾರವಾಗಿ ಇಬ್ಬರ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ನಡುರಸ್ತೆಯಲ್ಲೇ ನಡೆದ ಕೃತ್ಯ:
ಶನಿವಾರ ಸಂಜೆ ರಂಜಿತಾ ಶಾಲೆಯ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ, ರಫೀಕ್ ಆಕೆಯನ್ನು ರಸ್ತೆ ಮಧ್ಯೆ ಅಡ್ಡಗಟ್ಟಿದ್ದಾನೆ. ಮತ್ತೊಮ್ಮೆ ಮದುವೆ ವಿಷಯ ಪ್ರಸ್ತಾಪಿಸಿ ಜಗಳ ತೆಗೆದಿದ್ದಾನೆ. ರಂಜಿತಾ ತನ್ನ ನಿರ್ಧಾರ ಬದಲಿಸದೇ ಮದುವೆ ನಿರಾಕರಿಸಿದಾಗ, ಕೋಪಗೊಂಡ ರಫೀಕ್ ತನ್ನ ಬಳಿಯಿದ್ದ ಚಾಕುವಿನಿಂದ ರಂಜಿತಾಳ ಹೊಟ್ಟೆ ಮತ್ತು ಎದೆಗೆ ಮನಸೋಇಚ್ಛೆ ಇರಿದು ಪರಾರಿಯಾಗಿದ್ದಾನೆ.
ರಕ್ತದ ಮಡುವಿನಲ್ಲಿ ಬಿದ್ದಿದ್ದ ರಂಜಿತಾಳನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅತಿಯಾದ ರಕ್ತಸ್ರಾವದಿಂದ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಇದರಿಂದ ಕುಟುಂವಸ್ಥರ ಆಕ್ರದಣ ಮುಗಿಲು ಮುಟ್ಟಿದೆ.
ಪೊಲೀಸ್ ಕಾರ್ಯಾಚರಣೆ:
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳಕ್ಕೆ ಯಲ್ಲಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ರಫೀಕ್ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕಾಗಿ ಪೊಲೀಸರು ವಿಶೇಷ ತಂಡ ರಚಿಸಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.





