ಗಂಡ ಬದುಕಿರುವಾಗಲೇ RIP ಸ್ಟೇಟಸ್ ಹಾಕಿದ ಪತ್ನಿ..ಕೇಳಲು ಹೋದ ಪತಿಗೆ ಬಿತ್ತು ಗೂಸಾ.!

Untitled design 2026 05 15T164715.637

ಚಿಕ್ಕಬಳ್ಳಾಪುರ (ಮೇ.15): ಗಂಡ-ಹೆಂಡತಿ “ಜಗಳ ಉಂಡು ಮಲಗೋ ತನಕ” ಎಂಬ ಮಾತಿದೆ. ಆದರೆ ಕೆಲವೊಮ್ಮೆ ಸಣ್ಣ ಗಲಾಟೆಯೇ ದೊಡ್ಡ ದುರಂತಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ನಡೆದ ಘಟನೆಯೇ ಸಾಕ್ಷಿಯಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಬದುಕಿದ್ದ ಗಂಡನಿಗೆ ಪತ್ನಿ RIP ಸ್ಟೇಟಸ್ ಹಾಕಿದ್ದು, ಕೇಳಲು ಹೋದ ಗಂಡನ ಮೇಲೆಯೇ ಆಕೆಯ ಕುಟುಂಬಸ್ಥರು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಈ ದಾಂಪತ್ಯ ಕಲಹ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ದೊಡ್ಡತೇಕಹಳ್ಳಿಯ ಕುಮಾರ್ ಹಾಗೂ ಗೌರಿಬಿದನೂರು ತಾಲೂಕಿನ ಸಾಗಾನಹಳ್ಳಿಯ ಅನುಜಾ ದಂಪತಿಯ ಜಗಳ ಈಗ ಬೀದಿಗೆ ಬಂದಿದೆ. ಮದುವೆಯಾದ ಬಳಿಕ ಪತ್ನಿಯ ಆಸೆಯಂತೆ ದೇವನಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ಇಬ್ಬರೂ ವಾಸವಿದ್ದರು ಎನ್ನಲಾಗಿದೆ. ಆದರೆ ಕೆಲ ದಿನಗಳಿಂದ ದಂಪತಿ ನಡುವೆ ಕುಟುಂಬ ಕಲಹ ಹೆಚ್ಚಾಗಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಗಲಾಟೆ ಹಿನ್ನೆಲೆ ಪತ್ನಿ ಅನುಜಾ ತವರು ಮನೆಗೆ ತೆರಳಿದ್ದಳು ಎನ್ನಲಾಗಿದೆ. ಇದಾದ ಬಳಿಕ ಇಬ್ಬರ ಮಧ್ಯೆ ಫೋನ್ ಮೂಲಕವೇ ಆಗಾಗ ಜಗಳ ನಡೆಯುತ್ತಿತ್ತೆಂದು ಹೇಳಲಾಗುತ್ತಿದೆ. ಇದೇ ವೇಳೆ ನಡೆದ ಮಾತಿನ ಚಕಮಕಿಯ ಬಳಿಕ ಸಿಟ್ಟಿಗೆದ್ದ ಅನುಜಾ, ಗಂಡ ಕುಮಾರ್‌ನ ಫೋಟೋವನ್ನು ತನ್ನ ಸೋಶಿಯಲ್ ಮೀಡಿಯಾ ಸ್ಟೇಟಸ್‌ನಲ್ಲಿ “RIP” ಎಂದು ಬರೆದುಕೊಂಡಿದ್ದಾಳೆ ಎನ್ನಲಾಗಿದೆ.

ಈ ಸ್ಟೇಟಸ್ ನೋಡಿದ ಕುಮಾರ್ ಬೆಚ್ಚಿಬಿದ್ದಿದ್ದಾನೆ. ಬದುಕಿದ್ದಾಗಲೇ ತನ್ನನ್ನು ಸತ್ತವನಂತೆ ತೋರಿಸಿರುವುದರಿಂದ ಬೇಸರಗೊಂಡ ಆತ, ಪತ್ನಿಯನ್ನು ಕರೆದುಕೊಂಡು ಬರಲು ಗೌರಿಬಿದನೂರು ತಾಲೂಕಿನ ಸಾಗಾನಹಳ್ಳಿಯಲ್ಲಿರುವ ಅತ್ತೆ ಮನೆಗೆ ತೆರಳಿದ್ದಾನೆ.

ಕುಮಾರ್ ಮನೆಗೆ ಬಂದ ತಕ್ಷಣ ಪತ್ನಿಯ ಕುಟುಂಬಸ್ಥರು ಆತನೊಂದಿಗೆ ಜಗಳ ಆರಂಭಿಸಿದ್ದಾರೆ ಎನ್ನಲಾಗಿದೆ. ಮಾತಿನ ಚಕಮಕಿ ತೀವ್ರಗೊಂಡಿದ್ದು, ಬಳಿಕ ಕುಮಾರ್ ಹಾಗೂ ಆತನ ಸ್ನೇಹಿತರ ಮೇಲೆ ಹಲ್ಲೆ ನಡೆಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಕೆಲವರು ಸೇರಿಕೊಂಡು ಕಾರದ ಪುಡಿ ಎರಚಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದ್ದು, ಕುಮಾರ್ ಬಂದಿದ್ದ ಕಾರನ್ನೂ ಜಖಂಗೊಳಿಸಲಾಗಿದೆ ಎಂದು ಆರೋಪಿಸಲಾಗಿದೆ.

ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಕುಮಾರ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ಸಾಗಿಸಲಾಗಿದೆ. ವೈದ್ಯರು ಚಿಕಿತ್ಸೆ ಮುಂದುವರಿಸಿದ್ದು, ಕುಮಾರ್ ಆರೋಗ್ಯದ ಬಗ್ಗೆ ನಿಗಾ ವಹಿಸಿದ್ದಾರೆ.

ಇನ್ನೊಂದೆಡೆ ಘಟನೆ ಸಂಬಂಧ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡೂ ಕುಟುಂಬಗಳವರ ಹೇಳಿಕೆಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

Exit mobile version