ವಿಜಯಪುರ: ಕಬ್ಬಿನ ಬೆಳೆಗೆ ನ್ಯಾಯಯುತ ದರ ನಿಗದಿಪಡಿಸುವಂತೆ ಆಗ್ರಹಿಸಿ ಸಾವಿರಾರು ಕಬ್ಬು ಬೆಳೆಗಾರರು ಮತ್ತು ರೈತ ಸಂಘಟನೆಗಳ ಮುಖಂಡರು ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ಹಮ್ಮಿಕೊಂಡರು. ರಾಜಕಾರಣಿಗಳು ನಡೆಸುತ್ತಿರುವ ಸಕ್ಕರೆ ಕಾರ್ಖಾನೆಗಳಿಗೆ ಮಾತ್ರ ದರ ನಿಗದಿ ಮಾಡುವ ಸರ್ಕಾರದ ನೀತಿಯನ್ನು ಖಂಡಿಸಿ, ಕೈಯಲ್ಲಿ ಕಬ್ಬಿನ ತುಂಡುಗಳನ್ನು ಹಿಡಿದು ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಕಬ್ಬಿಗೆ 3500 ರೂಪಾಯಿ ದರ ನೀಡಿ ಎಂಬ ಆಗ್ರಹಿಸಿ ಪ್ರತಿಭಟನೆ ಮಾಡಿದ್ದಾರೆ.
ಪ್ರತಿಭಟನೆಯಲ್ಲಿ ರೈತರು ತಮ್ಮ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸುವ ಮೂಲಕ ತಿಳಿಸಿದರು. ಆದರೆ, ದರ ನಿಗದಿ ಮಾಡುವವರೆಗೂ ಹೋರಾಟವನ್ನು ಮುಂದುವರಿಸುವುದಾಗಿ ರೈತ ಮುಖಂಡರು ಘೋಷಿಸಿದರು. ಧರಣಿ ಸತ್ಯಾಗ್ರಹವನ್ನು ಕೂಡಾ ನಡೆಸಲು ಸಿದ್ಧತೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ವಿವಿಧ ರೈತ ಸಂಘಟನೆಗಳು ಒಗ್ಗೂಡಿ ಭಾಗವಹಿಸಿದ್ದು, ಕಬ್ಬು ಬೆಳೆಗಾರರ ಸಮಸ್ಯೆಗಳನ್ನು ರಾಜ್ಯ ಸರ್ಕಾರದ ಗಮನಕ್ಕೆ ತರುವ ಉದ್ದೇಶವನ್ನು ಹೊಂದಿದ್ದವು. ಕಬ್ಬು ಬೆಳೆಯು ವಿಜಯಪುರ ಜಿಲ್ಲೆಯ ಮುಖ್ಯ ಆರ್ಥಿಕ ಬೆನ್ನೆಲುಬಾಗಿದ್ದು, ಕಳೆದ ಕೆಲವು ವರ್ಷಗಳಿಂದ ದರದ ಕುರಿತಾದ ಅನಿಶ್ಚಿತತೆಯಿಂದ ರೈತರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಸಕ್ಕರೆ ಕಾರ್ಖಾನೆಗಳು ರೈತರಿಗೆ ಕಡಿಮೆ ದರ ನೀಡುತ್ತಿರುವುದು ಮತ್ತು ಸರ್ಕಾರದ ನಿರ್ಲಕ್ಷ್ಯವೇ ಈ ಪ್ರತಿಭಟನೆಗೆ ಕಾರಣವೆಂದು ರೈತರು ಆರೋಪಿಸಿದ್ದಾರೆ.
ಪ್ರತಿಭಟನಾ ರ್ಯಾಲಿಯು ಗಾಂಧಿ ವೃತ್ತದಿಂದ ಆರಂಭವಾಗಿ ನಗರದ ಮುಖ್ಯ ರಸ್ತೆಗಳ ಮೂಲಕ ಸಾಗಿ ಜಿಲ್ಲಾಧಿಕಾರಿ ಕಚೇರಿಯನ್ನು ತಲುಪಿತು. ರ್ಯಾಲಿಯಲ್ಲಿ ರೈತರು ಕಪ್ಪು ಬಾವುಟಗಳನ್ನು ಹಿಡಿದುಕೊಂಡು, ಘೋಷಣೆಗಳನ್ನು ಕೂಗುತ್ತಾ ಮುನ್ನಡೆದರು. ರಾಜಕಾರಣಿಗಳ ಕಾರ್ಖಾನೆಗಳಿಗೆ ದರ ನಿಗದಿ, ರೈತರಿಗೆ ನ್ಯಾಯ ನೀಡಿ ಎಂಬ ಘೋಷಣೆಗಳನ್ನ ಕೂಗಿ ಸರ್ಕಾರದ ನೀತಿಗಳನ್ನು ಟೀಕಿಸಿದರು.
ಕಬ್ಬು ಬೆಳೆಗೆ ಕನಿಷ್ಠ ಬೆಂಬಲ ಬೆಲೆಯನ್ನು ಘೋಷಿಸದೇ ಇರುವುದು ರೈತರನ್ನು ಆರ್ಥಿಕವಾಗಿ ಹೊಡೆದಿದೆ ಎಂದು ರೈತರು ಹೇಳಿದರು. ವಿಜಯಪುರ ಜಿಲ್ಲೆಯಲ್ಲಿ ಸಾವಿರಾರು ಎಕರೆಗಳಲ್ಲಿ ಕಬ್ಬು ಬೆಳೆಯಲಾಗುತ್ತಿದ್ದು, ಈ ಬೆಳೆಯಿಂದ ರೈತರ ಕುಟುಂಬಗಳು ಜೀವನ ನಡೆಸುತ್ತಿವೆ. ಆದರೆ, ಕಾರ್ಖಾನೆಗಳು ತಮ್ಮ ಲಾಭಕ್ಕಾಗಿ ರೈತರನ್ನು ದೋಚುತ್ತಿರುವುದು ಅಪರಾಧವೆಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯ ರ್ಯಾಲಿ ಸಮಯದಲ್ಲಿ ಒಬ್ಬ ರೈತನೊಬ್ಬ ಅಸ್ವಸ್ಥಗೊಂಡು ಕುಸಿದು ಬಿದ್ದ ಘಟನೆ ನಡೆಯಿತು.ನಿಡಗುಂದಿ ತಾಲೂಕ ರೈತ ಸಂಘದ ಅಧ್ಯಕ್ಷರಾದ ಸಾಯಬಣ್ಣ ಅಂಗಡಿ ಗಾಂಧಿ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿ ಕಡೆಗೆ ನಡೆಯುತ್ತಿದ್ದಾಗ ರ್ಯಾಲಿಯಲ್ಲಿ ಭಾಗವಹಿಸಿದ್ದರು. ಅಂಬೇಡ್ಕರ್ ವೃತ್ತದ ಬಳಿ ಸಾಗುತ್ತಿದ್ದ ವೇಳೆ ಅವರು ಏಕಾಏಕಿ ಅಸ್ವಸ್ಥಗೊಂಡು ನೆಲಕ್ಕೆ ಕುಸಿದರು. ತಕ್ಷಣ ಸ್ಥಳಕ್ಕೆ ವೈದ್ಯರು ಬಂದು ತುರ್ತು ಚಿಕಿತ್ಸೆ ನೀಡಿ ಸಾಯಬಣ್ಣ ಅವರನ್ನು ಆಸ್ಪತ್ರೆಗೆ ಸ್ಥಳಾಂತರಿಸಿದರು.ಸ್ವಲ್ಪ ಹೊತ್ತಿನಲ್ಲೇ ಸಾಯಬಣ್ಣ ಅವರ ಆರೋಗ್ಯ ಸುಧಾರಿಸಿ ಪುನಃ ಪ್ರತಿಭಟನೆಗೆ ಭಾಗವಹಿಸಿದರು.
ನಂತರ ಸಾಯಬಣ್ಣ ಸುದ್ಧಿಗಾರರೊಂದಿಗೆ ಮಾತನಾಡಿ, ನಮ್ಮ ಬೇಡಿಕೆ ಈಡೇರಿಸುವವರೆಗೂ ಹೋರಾಟ ನಿಲ್ಲುವುದಿಲ್ಲ. ಆರೋಗ್ಯದ ಸಮಸ್ಯೆಯೂ ನಮ್ಮನ್ನು ತಡೆಯಲಾರದು ಎಂದು ಹೇಳಿದರು. ಈ ಪ್ರತಿಭಟನೆಯು ಕೇವಲ ವಿಜಯಪುರಕ್ಕೆ ಸೀಮಿತವಲ್ಲ. ರಾಜ್ಯದಾದ್ಯಂತ ಕಬ್ಬು ಬೆಳೆಗಾರರು ಇದೇ ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರವು ರೈತರ ಪರವಾಗಿ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಹೋರಾಟ ಉಗ್ರವಾಗಲಿದೆ ಎಂದು ಮುಖಂಡರು ಎಚ್ಚರಿಕೆ ನೀಡಿದ್ದಾರೆ.
ಜಿಲ್ಲಾಧಿಕಾರಿಗಳು ಮನವಿಯನ್ನು ಸ್ವೀಕರಿಸಿ, ರಾಜ್ಯ ಸರ್ಕಾರಕ್ಕೆ ರವಾನಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ, ರೈತರು ಇದಕ್ಕೆ ಒಪ್ಪದೆ ಧರಣಿ ಸತ್ಯಾಗ್ರಹ ನಡೆಸಲು ಸಿದ್ದರಾಗುತ್ತಿದ್ದಾರೆ. ಪ್ರತಿಭಟನೆಯಲ್ಲಿ ಮಹಿಳಾ ರೈತರು ಕೂಡಾ ಸಕ್ರಿಯವಾಗಿ ಭಾಗವಹಿಸಿದ್ದು, ಅವರು ಕಬ್ಬಿನ ದರದಿಂದ ಕುಟುಂಬದ ಆರ್ಥಿಕ ಸ್ಥಿತಿ ಹದಗೆಡುತ್ತಿರುವುದನ್ನು ತಿಳಿಸಿದ್ದಾರೆ.





