ವಿಜಯಪುರ: ಹಾಡಹಗಲೆ ಪತ್ನಿ ಮೇಲೆ ಪತಿಯಿಂದ ಮಾರಣಾಂತಿಕ ಹಲ್ಲೆ ಮಾಡಲಾದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಹರಿತವಾದ ಮಚ್ಚಿನಿಂದ ಪತ್ನಿ ಅನುಸುಯಾ ಮೇಲೆ ಪತಿ ಯಮನಪ್ಪಾ ಮಾದರ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದ ಸಂಗಮ ಬಾರ್ ಹತ್ತಿರ ಈ ಘಟನೆ ನಡೆದಿದ್ದು ಪತ್ನಿಯ ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಆಕೆಯ ಮೆಲೆ ಹಲ್ಲೆ ನಡೆದಿದೆ ಎನ್ನಲಾಗಿದೆ.
ಪತ್ನಿಯನ್ನ ನಡುರಸ್ತೆಯಲ್ಲೇ ಅಟ್ಟಾಡಿಸಿ ಕಬ್ಬಿಣದ ಆಯುಧದಿಂದ ಪತಿ ಯಮನಪ್ಪ ಹೊಡೆದಿದ್ದಾನೆ. ನಂತರ ಬಿಡಿಸಲು ಬಂದ ಜನರನ್ನು ಯಮನಪ್ಪ ಮಚ್ಚು ಹಿಡಿದು ಹೆದರಿಸಿದ್ದು, ಆಗ ಯಮನಪ್ಪಗೆ ಡೊಣ್ಣೆಯಿಂದ ತಲೆಗೆ ಹೊಡೆದು ಸಾರ್ವಜನಿಕರು ನೆಲಕ್ಕೆ ಉರುಳಿಸಿದ್ದಾರೆ. ಸದ್ಯ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಜಿಲ್ಲಾಸ್ಪತ್ರೆಗೆ ಇಬ್ಬರನ್ನೂ ರವಾನೆ ಮಾಡಲಾಗಿದೆ.
ಇನ್ನು ಯಮನಪ್ಪ ಮತ್ತು ಅನುಸೂಯಾ ಮೂಲತಃ ದೇವರಹಿಪ್ಪರಗಿ ತಾಲೂಕಿನ ಕೆರೋಟಗಿ ಗ್ರಾಮದವರಾಗಿದ್ದು, ಕಲಕೇರಿ ಪೋಲಿಸ್ ಠಾಣೆಯಲ್ಲಿ ಈ ಹಿಂದೆ ಕೂಡ ಇದೆ ರೀತಿ ಅನುಸುಯಾ ಮೇಲೆ ಪತಿ ಯಮನಪ್ಪ ಹಲ್ಲೆ ಮಾಡಿ ದೂರು ದಾಖಲಾಗಿತ್ತು.
ಇದೀಗ ಮತ್ತೆ ಮಾರಣಾಂತಿಕ ಹಲ್ಲೆ ಮಾಡಿದ್ದು, ಸಾರ್ವಜನಿಕರು ಮಹಿಳೆಯನ್ನು ರಕ್ಷಿಸಿದ್ದಾರೆ. ಇಬ್ಬರನ್ನೂ ಸಿಂದಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಪತಿ ಯಮನಪ್ಪ ಹಾಗೂ ಅನುಸೂಯಾ ನಡುವೆ ಕೌಟುಂಬಿಕ ಕಲಹ ಇದ್ದು, ಪತಿಗೆ ವಿಷ ಹಾಕಿ ಪತ್ನಿ ಅನಸೂಯಾ ಕೊಲೆ ಯತ್ನ ಮಾಡಿದ್ದಾರೆ. ಈ ಸಂಬಂಧ ಜಾಮೀನಿನ ಮೇಲೆ ಆಕೆ ಬಿಡುಗಡೆ ಆಗಿದ್ದಳು ಎನ್ನಲಾಗಿದೆ.





