ಹುಬ್ಬಳ್ಳಿ: ಕರ್ನಾಟಕದ ವಾಣಿಜ್ಯ ನಗರಿ ಹುಬ್ಬಳ್ಳಿಯ ನೆಹರೂ ಮೈದಾನದಲ್ಲಿ ಇಂದು ನಡೆದ ವೀರಶೈವ-ಲಿಂಗಾಯತ ಏಕತಾ ಸಮಾವೇಶ ಸಮುದಾಯದ ಇತಿಹಾಸದಲ್ಲಿ ಮೈಲಿಗಲ್ಲು ಮೂಡಿಸಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮತ್ತು ಮಠಾಧೀಶರ ಸಹಯೋಗದೊಂದಿಗೆ ನಡೆದ ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಸುಮಾರು ಮೂರು ಸಾವಿರ ಮಠಗಳಿಂದ ಸ್ವಾಮೀಜಿಗಳು, ಮುಖಂಡರು ಮತ್ತು ಭಕ್ತರು ಭಾಗವಹಿಸಿದ್ದಾರೆ. ಶಿರಹಟ್ಟಿ ಫಕೀರೇಶ್ವರ ಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿಗಳ ನೇತೃತ್ವದಲ್ಲಿ ಪಾದಯಾತ್ರೆಯ ಮೂಲಕ ಸಮಾವೇಶಕ್ಕೆ ಚಾಲನೆ ನೀಡಲಾಯಿತು. ಪಂಚಪೀಠದ ಸ್ವಾಮೀಜಿಗಳು, ರಂಭಾಪುರಿ ಶ್ರೀಗಳು ಸೇರಿದಂತೆ ಅನೇಕ ಮಠಾಧಿಪತಿಗಳು ಭಾಗವಹಿಸಿ, ಸಮುದಾಯದ ಐಕ್ಯಕ್ಕೆ ಧ್ವನಿ ಎತ್ತಿದರು.
ಸಮಾವೇಶದಲ್ಲಿ ಪಂಚಮಸಾಲಿ ಲಿಂಗಾಯತ ಮುಖಂಡರಾದ ಶಾಸಕ ವಿಜಯಾನಂದ ಕಾಶಪ್ಪನವರ ಆಗಮಿಸಿದ್ದು, ಅವರು ಮಾತನಾಡಿ, “ಇದು ಐತಿಹಾಸಿಕ ಕಾರ್ಯಕ್ರಮ. ಮಹಾಸಭಾ ಒಕ್ಕೂಟದಿಂದ ಹಾಗೂ ಮಠಾಧೀಶರಿಂದ ನಡೆದಿದೆ. ವೀರಶೈವರು ಬೇರೆ ಅಲ್ಲ, ಲಿಂಗಾಯತರು ಬೇರೆ ಅಲ್ಲ, ಎಲ್ಲರೂ ನಾವು ಒಂದೇ. ಬಸವಣ್ಣನವರು ಅನುಭವ ಮಂಟಪ ಮೂಲಕ ಜಗತ್ತಿಗೆ ಪ್ರಜಾಪ್ರಭುತ್ವವನ್ನು ತಂದುಕೊಟ್ಟಿದ್ದಾರೆ” ಎಂದು ಹೇಳಿದರು. ಸಮಾಜದ ಹಿತದೃಷ್ಟಿಯಿಂದ ಎಲ್ಲರೂ ಒಗ್ಗಟಾಗಿ ಮುಂದುವರಿಯುವ ಸಮಯ ಬಂದಿದೆ ಎಂದು ಹೇಳಿದ ಕಾಶಪ್ಪನವರು, ಸಮಾಜದ ಆರೋಗ್ಯ ಸರಿಯಾಗಿಲ್ಲ. ಒಡಕು ಕೆಟ್ಟದ್ದನ್ನು ಮಾಡುತ್ತದೆ. ನಮ್ಮ ತಂದೆ ಇದ್ದಾಗ ಎಲ್ಲರೂ ಕೂಡಿ ಸಾಗಲು ಒಪ್ಪಿಕೊಂಡಿದ್ದರು. ಇದೀಗ ಮತ್ತೆ ಒಂದಾಗಬೇಕು ಎಂದು ಕರೆ ನೀಡಿದರು.
ಸಮಾವೇಶದಲ್ಲಿ ಜಾತಿ ಸಮೀಕ್ಷೆಯ ಬಗ್ಗೆ ಮಹತ್ವದ ನಿರ್ಧಾರ ಆಗಿದೆ. ಜಾತಿ ಕಾಲಂನಲ್ಲಿ “ವೀರಶೈವ ಅಥವಾ ಲಿಂಗಾಯತ” ಎಂದು ಬರೆಯಬೇಕು ಎಂದು ತೀರ್ಮಾನ ಮಾಡಲಾಗಿದ್ದು, ಉಪಜಾತಿ ಕಾಲಂನಲ್ಲಿ ಹೆಸರನ್ನು ನಮೂದು ಮಾಡಬೇಕು ಎಂದು ವಿನಂತಿಸಲಾಗಿದೆ. ಈ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಯಿಂದ ಮೀಸಲಾತಿ ನಿಗದಿಯಾಗುವುದಿಲ್ಲ, ಆದರೆ ಜಾತಿ ಕಾಲಂನಲ್ಲಿ ಅವಶ್ಯಕವಾಗಿದೆ. ನಮ್ಮ ಸಂಖ್ಯೆ ಸೊರಗುತ್ತ ಕರಗುತ್ತಾ ಹೋಗುತ್ತಿದೆ. ಆದ್ದರಿಂದ ಎಲ್ಲರೂ ಒಗ್ಗಟಾಗಬೇಕು ಎಂದು ಒಗ್ಗಟ್ಟಿನ ಮಹತ್ವವನ್ನು ಒತ್ತಿ ಹೇಳಲಾಯಿತು.
ಸಿದ್ಧಗಂಗಾ ಮಠದ ಶ್ರೀಗಳು ಮಾತನಾಡಿ, “ಇವತ್ತು ಹಾನಗಲ್ ಕುಮಾರ ಶಿವಯೋಗಿಗಳ ಶ್ರೀಗಳ ಕನಸು ಇವತ್ತು ನನಸಾಗಿದೆ. ಐಕ್ಯತೆ ಮತ್ತು ಅಭಿವೃದ್ಧಿಯನ್ನೇ ಲಿಂಗೈಕ್ಯೆ ಸಮಯದಲ್ಲಿ ಶ್ರೀಗಳು ಬೇಡಿಕೆ ಇಟ್ಟಿದ್ದರು. ನಾವೆಲ್ಲರೂ ನಮ್ಮ ನಮ್ಮ ಏನೇ ಸಮಸ್ಯೆ ಇದ್ದರೂ ಅದನ್ನೆಲ್ಲಾ ಬದಿಗೊತ್ತಿ ನಾವು ಒಂದಾಗಿದ್ದೇವೆ ಎಂದು ಸಂದೇಶ ಕೊಡಬೇಕು. ಕಾರ್ಯಕ್ರಮದಲ್ಲಿ ಭಾಗವಹಿಸಿದಕ್ಕೆ ನನಗೆ ಸಂತೋಷವಾಗಿದೆ” ಎಂದು ಹೇಳಿದರು. ಪಂಚಪೀಠದ ಸ್ವಾಮೀಜಿಗಳು ಸಹ ಐಕ್ಯದ ಸಂದೇಶ ನೀಡಿ, ಬಸವಣ್ಣನವರ ತತ್ವಗಳನ್ನು ಉಲ್ಲೇಖಿಸಿ ಸಮುದಾಯದ ಶಕ್ತಿಯನ್ನು ಒತ್ತಿ ಹೇಳಿದರು.
ಲಿಂಗಾಯತ ಏಕತಾ ಸಮಾವೇಶದಲ್ಲಿ ಹೈಡ್ರಾಮಾ
ಆದರೆ, ಈ ಸಮಾವೇಶಕ್ಕೆ ಹೈಡ್ರಾಮಾ ಸೃಷ್ಟಿಸಿದ್ದು ಮಹಾರಾಷ್ಟ್ರದ ಶಿವ ಸಂಘಟನೆಯ ಕಾರ್ಯಕರ್ತರು. ಸಮಾವೇಶದಲ್ಲಿ ತಮ್ಮ ನಾಯಕ, ಶಿವ ಸಂಘಟನೆ ಅಧ್ಯಕ್ಷ ಮನೋಹರ್ ದೊಂಡೆಯವರನ್ನು ಹಿಂದಿನ ಸಾಲಿನಲ್ಲಿ ಕುರ್ಚಿಸಲಾಯಿತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. “ತಮ್ಮ ನಾಯಕನಿಗೆ ಅಪಮಾನ ಮಾಡಲಾಗಿದೆ” ಎಂದು ಕೂಗಿ, ವೇದಿಕೆ ಕೆಳಗೆ ನಿಂತು ಸಂಘಟಕರ ವಿರುದ್ಧ ಕಿಡಿಕಾರಿದರು. ಗಲಾಟೆ, ಗದ್ದಲದ ವಾತಾವರಣ ಸೃಷ್ಟಿಯಾಗಿ, ಕೆಂಡಾಮಂಡಲವೂ ಭಾಗವಹಿಸಿ ಆಕ್ರೋಶ ಹಂಚಿಕೊಂಡರು.