ಕಾರವಾರ, (ಜೂನ್ 29): ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ ಕೊರತೆಯಿಂದ ಬರದ ಛಾಯೆ ಆವರಿಸಿದ್ದರೂ, ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾತ್ರ ಕಳೆದ 36 ಗಂಟೆಗಳಿಂದ ಸುರಿಯುತ್ತಿರುವ ಭಾರೀ ಮಳೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
- ಉತ್ತರ ಕನ್ನಡದಲ್ಲಿ ಭಾರೀ ಮಳೆ
- ಗೋಕರ್ಣ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಗೆ ನುಗ್ಗಿದ ನೀರು
- ಆತ್ಮಲಿಂಗ ಸ್ಪರ್ಶ ದರ್ಶನಕ್ಕೆ ತಾತ್ಕಾಲಿಕ ನಿರ್ಬಂಧ
- ಕುಮಟಾ–ಸಿದ್ದಾಪುರ ರಾಜ್ಯ ಹೆದ್ದಾರಿ ಜಲಾವೃತ
- ಜುಲೈ 2ರವರೆಗೆ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ
- ನದಿ, ಸಮುದ್ರ ತೀರಗಳಿಗೆ ತೆರಳದಂತೆ ಜಿಲ್ಲಾಡಳಿತ ಎಚ್ಚರಿಕೆ
ಧಾರಾಕಾರ ಮಳೆಯ ಪರಿಣಾಮ ಗೋಕರ್ಣ, ಕುಮಟಾ, ಸಿದ್ದಾಪುರ ಸೇರಿದಂತೆ ಕರಾವಳಿ ಭಾಗಗಳ ಹಲವು ಪ್ರದೇಶಗಳು ಜಲಾವೃತವಾಗಿದ್ದು, ರಸ್ತೆಗಳಲ್ಲಿ ನೀರು ಹರಿದು ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಜುಲೈ 2ರವರೆಗೆ ಆರೆಂಜ್ ಅಲರ್ಟ್ ಘೋಷಿಸಿದೆ.
ಪುರಾಣ ಪ್ರಸಿದ್ಧ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಗೂ ಮಳೆ ನೀರು ನುಗ್ಗಿದ್ದು, ಆತ್ಮಲಿಂಗ ಜಲಾವೃತಗೊಂಡಿದೆ. ಈ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಯ ನಂತರ ನಡೆಯುವ ಆತ್ಮಲಿಂಗ ಸ್ಪರ್ಶ ದರ್ಶನವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ನಿತ್ಯ ನಡೆಯುವ ಮಹಾಪೂಜೆಯಲ್ಲೂ ವ್ಯತ್ಯಯ ಉಂಟಾಗಿ, ಬಳಿಕ ಪಂಪ್‌ಸೆಟ್ ಮೂಲಕ ಗರ್ಭಗುಡಿಯಲ್ಲಿದ್ದ ನೀರನ್ನು ಹೊರತೆಗೆದು ಪರಿಸ್ಥಿತಿಯನ್ನು ನಿಯಂತ್ರಿಸಲಾಯಿತು.
ಗೋಕರ್ಣ ಪಟ್ಟಣದ ಪ್ರಮುಖ ರಸ್ತೆ ಹಾಗೂ ಬೀದಿಗಳು ಕೆರೆಯಂತಾಗಿದ್ದು, ಪ್ರವಾಸಿಗರು ಹಾಗೂ ಸ್ಥಳೀಯರು ಸಾಕಷ್ಟು ತೊಂದರೆ ಅನುಭವಿಸಿದರು. ನೀರು ನಿಂತ ಪರಿಣಾಮ ಅಂಗಡಿ-ಮುಂಗಟ್ಟುಗಳು ಹಾಗೂ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು. ದೇವಾಲಯಕ್ಕೆ ಆಗಮಿಸಿದ್ದ ಭಕ್ತರು ಸಹ ಕೆಲಕಾಲ ಸಂಕಷ್ಟಕ್ಕೆ ಸಿಲುಕಿದರು.
ಇನ್ನೊಂದೆಡೆ ಕುಮಟಾ–ಸಿದ್ದಾಪುರ ರಾಜ್ಯ ಹೆದ್ದಾರಿಯ ವಾಲಗಳಿ ಸಮೀಪ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು, ದ್ವಿಚಕ್ರ ವಾಹನ ಸವಾರರು ಹಾಗೂ ಭಾರೀ ವಾಹನಗಳ ಸಂಚಾರಕ್ಕೆ ಅಡಚಣೆ ಎದುರಾಯಿತು. ಕೆಲಕಾಲ ವಾಹನಗಳು ನೀರಿನಲ್ಲೇ ಸಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಮಳೆ ಮತ್ತಷ್ಟು ಮುಂದುವರಿದಿದ್ದರೆ ಸುತ್ತಮುತ್ತಲಿನ ಮನೆಗಳು ಹಾಗೂ ವ್ಯಾಪಾರ ಮಳಿಗೆಗಳಿಗೆ ನೀರು ನುಗ್ಗುವ ಆತಂಕವೂ ಎದುರಾಗಿತ್ತು. ಆದರೆ ಮಳೆಯ ತೀವ್ರತೆ ಸ್ವಲ್ಪ ಕಡಿಮೆಯಾಗಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ.
ಹವಾಮಾನ ಇಲಾಖೆ ಇನ್ನೂ ಕೆಲ ದಿನಗಳ ಕಾಲ ಉತ್ತರ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಭಾರೀ ಮಳೆಯ ಮುನ್ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ನದಿ, ಹಳ್ಳ, ಸಮುದ್ರ ತೀರ ಹಾಗೂ ತಗ್ಗು ಪ್ರದೇಶಗಳಿಗೆ ಸಾರ್ವಜನಿಕರು ತೆರಳದಂತೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಮನವಿ ಮಾಡಿದ್ದಾರೆ. ಮೀನುಗಾರರು ಹಾಗೂ ಪ್ರವಾಸಿಗರು ಎಚ್ಚರಿಕೆಯಿಂದ ಇರಬೇಕು ಎಂದು ಸೂಚಿಸಲಾಗಿದೆ.
ಒಟ್ಟಾರೆ, ಉತ್ತರ ಕನ್ನಡ ಜಿಲ್ಲೆಯಲ್ಲಿ ಕಳೆದ 36 ಗಂಟೆಗಳ ಮಳೆಯು ಜನಜೀವನದ ಮೇಲೆ ದೊಡ್ಡ ಪರಿಣಾಮ ಬೀರಿದ್ದು, ಮುಂದಿನ ಕೆಲವು ದಿನಗಳೂ ಮಳೆಯ ಸಾಧ್ಯತೆ ಇರುವುದರಿಂದ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಮತ್ತಷ್ಟು ಬಲಪಡಿಸಿದೆ.





