ಬೆಂಗಳೂರು: ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲಿ ಬೆಂಗಳೂರು ನಗರವು ವಿಶಿಷ್ಟ ಗಣಪತಿಯ ವೈವಿಧ್ಯಮಯ ರೂಪಗಳೊಂದಿಗೆ ಕಳೆಗಟ್ಟಿದೆ. ಈ ಬಾರಿಯ ಗಣೇಶೋತ್ಸವದಲ್ಲಿ ಆರ್‌ಸಿಬಿ ಕಪ್ ಗೆದ್ದ ಗಣೇಶ, ಕರಗದ ದೌಪದಿಯ ರೂಪದ ಗಣೇಶ, ಆಪರೇಷನ್ ಸಿಂಧೂರದ ಗಣಪತಿ ಸೇರಿದಂತೆ ಹಲವು ಆಕರ್ಷಕ ರೂಪಗಳಲ್ಲಿ ವಿಘ್ನನಿವಾರಕನಾದ ಗಣೇಶನು ಭಕ್ತರ ಮನಗೆದ್ದಿದ್ದಾನೆ.
ಐಪಿಎಲ್ ಕ್ರಿಕೆಟ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಕಪ್ ಗೆಲುವಿನ ಸಂಭ್ರಮವನ್ನು ಗಣೇಶನ ರೂಪದಲ್ಲಿ ಚಿತ್ರಿಸಲಾಗಿದೆ. ಎತ್ತರದ ಗಣೇಶನ ಮೂರ್ತಿಯೊಂದು ಆರ್‌ಸಿಬಿ ಹೆಸರಿನ ಬ್ಯಾಟ್ ಹಿಡಿದು ನಿಂತಿದ್ದರೆ, ಅದರ ಮುಂಭಾಗದಲ್ಲಿ ಗಣೇಶನ ವಾಹನವಾದ ಇಲಿಯು ತಲೆಯ ಮೇಲೆ ಆರ್‌ಸಿಬಿ ಕಪ್‌ನ್ನು ಹೊತ್ತಿದೆ. ಈ ಇಲಿಯು ತಿರುಗುವಂತೆ ಮೋಟರ್ ಅಳವಡಿಸಲಾಗಿದೆ. ಇನ್ನೊಂದು ಮೂರ್ತಿಯಲ್ಲಿ ಆರ್‌ಸಿಬಿ ಕಪ್ ಎತ್ತಿಹಿಡಿದ ಗಣೇಶನ ರೂಪವೂ ಗಮನ ಸೆಳೆಯುತ್ತಿದೆ.
ಕರಗದ ಗಣೇಶನ ವೈಭವ
ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಗಣಪತಿಯನ್ನು ವಿವಿಧ ರೂಪಗಳಲ್ಲಿ ತಯಾರಿಸಲಾಗಿದೆ. ಸಾಮಾನ್ಯವಾಗಿ ಬಲಮುರಿ, ಎಡಮುರಿ ಗಣಪತಿಯಂತಹ ಸಾಂಪ್ರದಾಯಿಕ ಮೂರ್ತಿಗಳನ್ನು ಮನೆಗಳಲ್ಲಿ ಪೂಜಿಸಲಾಗುತ್ತದೆ. ಆದರೆ, ಸಾರ್ವಜನಿಕ ಗಣೇಶೋತ್ಸವ ಸಮಿತಿಗಳು ವಿಶಿಷ್ಟ ರೂಪದ ಮೂರ್ತಿಗಳನ್ನು ಖರೀದಿಸಿ ಕೊಂಡೊಯ್ಯುತ್ತವೆ. ಉದಾಹರಣೆಗೆ, ಆಪರೇಷನ್ ಸಿಂಧೂರದ ಗಣಪತಿಯು ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯನ್ನು ಸಂಕೇತಿಸುತ್ತದೆ. ಇದೇ ರೀತಿ, ಬೆಂಗಳೂರಿನ ಪ್ರಸಿದ್ಧ ಕರಗದ ದೌಪದಿಯ ವೇಷದಲ್ಲಿ ಹಳದಿ ಸೀರೆಯುಟ್ಟ ಗಣೇಶನ ಮೂರ್ತಿಯು ಭಕ್ತರ ಗಮನ ಸೆಳೆಯುತ್ತಿದೆ.
ಯಶವಂತಪುರದ ಶ್ರೀ ಈಶಪುತ್ರ ಎಂಟರ್‌ಪ್ರೈಸಸ್ (ಎನ್‌ಆರ್ ಆರ್ಟ್ಸ್) ಯುವಕರ ತಂಡವು ವಿನೂತನ ವಿನ್ಯಾಸದ ಗಣೇಶ ಮೂರ್ತಿಗಳನ್ನು ತಯಾರಿಸುತ್ತಿದೆ. ಈ ತಂಡದ ಆಪರೇಷನ್ ಸಿಂಧೂರ ಗಣಪತಿಯನ್ನು ತಮಿಳುನಾಡಿನ ಆರ್ಮಿ ಖರೀದಿಸಿದರೆ, ಆರ್‌ಸಿಬಿ ಕಪ್ ಗಣೇಶನನ್ನು ಅತ್ತಿಬೆಲೆಯ ನಿವಾಸಿಗಳು ಕೊಂಡಿದ್ದಾರೆ. ಈ ಮೂರ್ತಿಗಳಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಬೇಡಿಕೆಯಿದೆ.