ಯುಗಾದಿ ಹಬ್ಬಕ್ಕೆ ಊರಿಗೆ ಹೊರಟವರಿಗೆ ಶಾಕ್: ಖಾಸಗಿ ಬಸ್ ದರ ಬರೋಬ್ಬರಿ 5 ಪಟ್ಟು ಏರಿಕೆ

Untitled design 2026 03 18T215005.627

ಬೆಂಗಳೂರು: ಯುಗಾದಿ ಹಾಗೂ ರಂಜಾನ್ ಹಬ್ಬಗಳ ಸರಣಿ ರಜೆ ಹಿನ್ನೆಲೆಯಲ್ಲಿ ಸಿಲಿಕಾನ್ ಸಿಟಿ ಬೆಂಗಳೂರಿನಿಂದ ಲಕ್ಷಾಂತರ ಜನ ತಮ್ಮ ತಮ್ಮ ಊರುಗಳತ್ತ ಮುಖ ಮಾಡಿದ್ದಾರೆ. ಇದರಿಂದಾಗಿ ನಗರದ ಪ್ರಮುಖ ಬಸ್ ನಿಲ್ದಾಣಗಳು, ವಿಶೇಷವಾಗಿ ಮೆಜೆಸ್ಟಿಕ್ (KSRTC), ಸ್ಯಾಟಲೈಟ್ ಹಾಗೂ ಕೆಂಗೇರಿ ನಿಲ್ದಾಣಗಳಲ್ಲಿ ಜನಸಾಗರವೇ ಹರಿದುಬಂದಿದೆ. ಆದರೆ, ಇದೇ ಸಂದರ್ಭವನ್ನು ಬಂಡವಾಳ ಮಾಡಿಕೊಂಡಿರುವ ಖಾಸಗಿ ಬಸ್ ಮಾಲೀಕರು ಟಿಕೆಟ್ ದರವನ್ನು ಗಗನಕ್ಕೇರಿಸಿದ್ದು, ಪ್ರಯಾಣಿಕರು ಕಂಗೆಟ್ಟಿದ್ದಾರೆ.

ಹಬ್ಬದ ಸಂಭ್ರಮಕ್ಕಾಗಿ ಊರಿಗೆ ತೆರಳಲು ರೈಲು ಹಾಗೂ ಬಸ್ ನಿಲ್ದಾಣಗಳಲ್ಲಿ ಜನವೋ ಜನ. ಈ ಮಳೆಯಲ್ಲೂ ಬ್ಯಾಗ್ ಹಿಡಿದು ಕುಟುಂಬ ಸಮೇತ ಬಸ್ ಹತ್ತಲು ಜನರು ಮುಗಿಬಿದ್ದದ್ದಾರೆ. ಮಂಗಳೂರು, ಶಿವಮೊಗ್ಗ, ಹಾಸನ, ಬೆಳಗಾವಿ, ಕಲಬುರಗಿ ಹಾಗೂ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ತೆರಳುವ ಬಸ್‌ಗಳಲ್ಲಿ ಎಳ್ಳಷ್ಟೂ ಜಾಗವಿಲ್ಲದೆ ಜನರು ಕಿಕ್ಕಿರಿದು ತುಂಬಿದ್ದರು. ಸರ್ಕಾರಿ ಬಸ್‌ಗಳಲ್ಲಿ ಸೀಟ್ ಹಿಡಿಯಲು ಕಿಟಕಿಗಳ ಮೂಲಕ ಬ್ಯಾಗ್ ಹಾಕಿ ಕಸರತ್ತು ನಡೆಸುತ್ತಿರುವ ದೃಶ್ಯಗಳು ಕಂಡುಬಂದವು.

2,325 ಹೆಚ್ಚುವರಿ ಬಸ್‌ಗಳ ವ್ಯವಸ್ಥೆ

ಪ್ರಯಾಣಿಕರ ಭಾರಿ ಒತ್ತಡವನ್ನು ನಿಭಾಯಿಸಲು ಕೆಎಸ್‌ಆರ್‌ಟಿಸಿ (KSRTC) ಮಹತ್ವದ ಕ್ರಮ ಕೈಗೊಂಡಿದೆ. ಮಾರ್ಚ್ 18 ರಿಂದ 20 ರವರೆಗೆ ಒಟ್ಟು 2,325 ಹೆಚ್ಚುವರಿ ಬಸ್‌ಗಳನ್ನು ರಸ್ತೆಗಿಳಿಸಲಾಗಿದೆ. ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ ಮಾತ್ರವಲ್ಲದೆ ಮೈಸೂರು ರಸ್ತೆ, ಬಸವೇಶ್ವರ ಹಾಗೂ ಶಾಂತಿನಗರ ನಿಲ್ದಾಣಗಳಿಂದಲೂ ವಿವಿಧ ಜಿಲ್ಲೆಗಳಿಗೆ ವಿಶೇಷ ಬಸ್‌ಗಳ ಸಂಚಾರ ಆರಂಭವಾಗಿದೆ.

ಖಾಸಗಿ ಬಸ್‌ಗಳ ದರ ಏರಿಕೆ

ಹಬ್ಬದ ಸೀಸನ್‌ನಲ್ಲಿ ಖಾಸಗಿ ಬಸ್ ಮಾಲೀಕರು ಪ್ರಯಾಣಿಕರ ಸುಲಿಗೆಗೆ ಇಳಿದಿದ್ದಾರೆ. ಸಾಮಾನ್ಯ ದಿನಗಳಿಗಿಂತ 3 ರಿಂದ 5 ಪಟ್ಟು ಹೆಚ್ಚು ದರ ವಸೂಲಿ ಮಾಡುತ್ತಿರುವುದು ಆತಂಕಕಾರಿ.

ಆರ್‌ಟಿಒ (RTO) ಅಧಿಕಾರಿಗಳಿಂದ ಮಿಂಚಿನ ದಾಳಿ

ಹೆಚ್ಚುವರಿ ದರ ವಸೂಲಿ ಮಾಡುತ್ತಿರುವ ದೂರುಗಳು ಹೆಚ್ಚಾಗುತ್ತಿದ್ದಂತೆ ಸಾರಿಗೆ ಇಲಾಖೆ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಜಂಟಿ ಆಯುಕ್ತೆ ಶೋಭಾ ಅವರ ನೇತೃತ್ವದಲ್ಲಿ ಬೆಂಗಳೂರಿನ 10 ಆರ್‌ಟಿಒ ಕಚೇರಿ ವ್ಯಾಪ್ತಿಯಲ್ಲಿ ಖಾಸಗಿ ಬಸ್‌ಗಳ ಮೇಲೆ ಭಾರಿ ದಾಳಿ ನಡೆಸಲಾಗಿದೆ. ಪ್ರಯಾಣಿಕರ ಟಿಕೆಟ್‌ಗಳನ್ನು ಪರಿಶೀಲಿಸಿ, ನಿಯಮ ಉಲ್ಲಂಘಿಸಿದ ಬಸ್ ಮಾಲೀಕರಿಗೆ ಸ್ಥಳದಲ್ಲೇ ದಂಡ ವಿಧಿಸಲಾಗಿದೆ. ಹಬ್ಬದ ಪ್ರಯುಕ್ತ ಮುಂದಿನ ಮೂರು ದಿನಗಳ ಕಾಲ ಈ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Exit mobile version