ಕೋಲಾರ: ವಾಣಿಜ್ಯ ಗ್ಯಾಸ್ ಸಿಲೆಂಡರ್ ಬೆಲೆಯಲ್ಲಿ ದಿಢೀರ್ ಭಾರೀ ಏರಿಕೆಯಾಗಿದ್ದು, ಜಿಲ್ಲೆಯ ಹೋಟೆಲ್ ಉದ್ಯಮಿಗಳನ್ನು ತೀವ್ರ ಸಂಕಷ್ಟಕ್ಕೆ ದೂಡಿದೆ. ಒಂದು ವಾಣಿಜ್ಯ ಸಿಲೆಂಡರ್ ಬೆಲೆ 1800ರೂಪಾಯಿಯಿಂದ ಏಕಾಏಕಿ 3250ರೂಪಾಯಿಗೆ ಏರಿಕೆಯಾಗಿದೆ. ಈ ಅತೀಯಾದ ಬೆಲೆ ಏರಿಕೆಯಿಂದ ಸಣ್ಣ ಮತ್ತು ಹೋಟೆಲ್‌ಗಳು ಆರ್ಥಿಕವಾಗಿ ಹೈರಾಣಾಗಿವೆ.ಹೋಟೆಲ್ ಮಾಲೀಕರ ಪ್ರಕಾರ, ಗ್ಯಾಸ್ ಸಿಲೆಂಡರ್ ಸಿಕ್ಕರೂ ಬೆಲೆ ಏರಿಕೆಯಿಂದ ಅಡುಗೆ ವೆಚ್ಚ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ.
ಇದರ ಪರಿಣಾಮವಾಗಿ ಅನೇಕ ಸಣ್ಣ ಹೋಟೆಲ್‌ಗಳು ಲಾಭ ಕಳೆದುಕೊಳ್ಳುತ್ತಿವೆ. ಕೆಲವು ಹೋಟೆಲ್‌ಗಳು ಸೌದೆ ಒಲೆ ಅಥವಾ ಮರದ ಕಟ್ಟಿಗೆ ಬಳಸಿ ಅಡುಗೆ ಮುಂದುವರಿಸುತ್ತಿವೆ. ಆದರೆ ಇದು ಸಮಯ ಮತ್ತು ಶ್ರಮ ಹೆಚ್ಚಿಸುವುದರ ಜೊತೆಗೆ ಸ್ವಚ್ಛತೆ ಮತ್ತು ಗುಣಮಟ್ಟದ ಮೇಲೂ ಪರಿಣಾಮ ಬೀರುತ್ತಿದೆ.“ಹಿಂದೆ 1800 ರೂಪಾಯಿಗೆ ಸಿಗುತ್ತಿದ್ದ ಸಿಲೆಂಡರ್ ಈಗ 3250 ರೂಪಾಯಿ ಬೆಲೆಗೆ ಏರಿದೆ.
ಇದು ನಮ್ಮ ವ್ಯವಹಾರಕ್ಕೆ ದೊಡ್ಡ ಹೊಡೆತ” ಎಂದು ಕೋಲಾರದ ಹೋಟೆಲ್ ಮಾಲೀಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು. ಹೆಚ್ಚುತ್ತಿರುವ ಗ್ಯಾಸ್ ಬೆಲೆಯಿಂದಾಗಿ ಹೋಟೆಲ್‌ಗಳಲ್ಲಿ ತಿಂಡಿ ಮತ್ತು ಊಟದ ಬೆಲೆ ಹೆಚ್ಚಿಸುವಂತಾಗಿದೆ. ಇದರಿಂದ ಗ್ರಾಹಕರು ಕಡಿಮೆಯಾಗುವ ಸಾಧ್ಯತೆಯೂ ಇದೆ. ಸಣ್ಣ ಹೋಟೆಲ್‌ಗಳು ಇನ್ನಷ್ಟು ಸಂಕಷ್ಟದಲ್ಲಿವೆ. ಅವುಗಳಿಗೆ ಬೆಲೆ ಹೆಚ್ಚಿಸುವುದು ಕಷ್ಟವಾಗುತ್ತಿದ್ದು, ವ್ಯವಹಾರ ಮುಚ್ಚುವಂತೆ ಪರಿಸ್ಥಿತಿ ಬರುತ್ತಿದೆ ಎಂಬ ಆತಂಕ ವ್ಯಕ್ತವಾಗುತ್ತಿದೆ.
ಹೋಟೆಲ್ ಉದ್ಯಮಿಗಳ ಸಂಘಗಳು ಈ ಬೆಲೆ ಏರಿಕೆಯನ್ನು ಕೂಡಲೇ ಹಿಂಪಡೆಯುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಮನವಿ ಮಾಡಲು ಚಿಂತಿಸುತ್ತಿವೆ. ಗ್ಯಾಸ್ ಬೆಲೆ ಏರಿಕೆಯು ಕೇವಲ ಹೋಟೆಲ್ ಉದ್ಯಮಕ್ಕೆ ಮಾತ್ರವಲ್ಲದೆ ಸಾಮಾನ್ಯ ಜನರ ಜೀವನ ವೆಚ್ಚವನ್ನೂ ಹೆಚ್ಚಿಸುತ್ತಿದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಕೋಲಾರದಂತಹ ಜಿಲ್ಲೆಗಳಲ್ಲಿ ಸಣ್ಣ ವ್ಯಾಪಾರಿಗಳು ಈ ಏರಿಕೆಯ ಭಾರವನ್ನು ಹೊರುವುದು ಕಷ್ಟವಾಗುತ್ತಿದೆ. ಹೋಟೆಲ್ ಉದ್ಯಮಿಗಳು ಸರ್ಕಾರದಿಂದ ತ್ವರಿತ ಹಸ್ತಕ್ಷೇಪವನ್ನು ಬೇಡುತ್ತಿದ್ದಾರೆ.
ಇಲ್ಲದಿದ್ದರೆ ಅನೇಕ ಸಣ್ಣ ಹೋಟೆಲ್‌ಗಳು ಮುಚ್ಚುವ ಸ್ಥಿತಿ ಬರಬಹುದು ಎಂಬ ಎಚ್ಚರಿಕೆ ಸಹ ಹೆಚ್ಚಾಗಿದೆ. ಇಸ್ರೇಲ್ ಇರಾನ್ ಯುದ್ಧ ನಿಂತರೂ ಸಹ ಈ ಗ್ಯಾಸ್ ಸಮಸ್ಯೆ ಇನ್ನೂ ನಿಲ್ಲುವ ಪರಿಸ್ಥಿತಿಯತ್ತ ಕಾಣುತ್ತಿಲ್ಲ. ಈಗಾಗಲೇ ಬಹುತೇಕ ಹೋಟೆಲ್‌ಗಳು ಮುಚ್ಚಲ್ಪಟ್ಟಿರುವುದು ಸ್ಪಷ್ಟವಾಗಿದೆ.
