ಬೆಂಗಳೂರು: ವರ್ಷದ ಕೊನೆಯ ಖಗ್ರಾಸ ಚಂದ್ರಗ್ರಹಣವನ್ನು ನೋಡಲು ಇಡೀ ವಿಶ್ವದ ಜನರು ರಾತ್ರಿ ಆಕಾಶದತ್ತ ನೋಟ ಹರಿಸಿದ್ದರು. ಸಿಲಿಕಾನ್ ಸಿಟಿಯ ಜನರು ಕೂಡ ಕಣ್ತುಂಬಿಕೊಂಡು ಈ ಅಪರೂಪದ ಖಗೋಳೀಯ ವಿಸ್ಮಯವನ್ನು ಸವಿದರು. ಖಗ್ರಾಸ ಚಂದ್ರಗ್ರಹಣ ಮದ್ಯರಾತ್ರಿ 1:27ಕ್ಕೆ ಮೋಕ್ಷ ಪಡೆಯಿತು. ಚಂದಿರನು ಅರ್ಧ ಹೊಳಪು ಮತ್ತು ಅರ್ಧ ಕಪ್ಪು ಬಣ್ಣದಲ್ಲಿ ಕಾಣಿಸಿ, ಕೆಲವೇ ನಿಮಿಷಗಳಲ್ಲಿ ಗ್ರಹಣದಿಂದ ಮುಕ್ತನಾದನು.
ಈ ಗ್ರಹಣದ ಹಿನ್ನೆಲೆಯಲ್ಲಿ ನಗರದ ದೇವಸ್ಥಾನಗಳು ನಿನ್ನೆ ಸಂಜೆಯಿಂದಲೇ ಮುಚ್ಚಲಾಗಿತ್ತು. ಬೆಳಿಗ್ಗೆ ಬಾಗಿಲುಗಳು ತೆರೆದು ಶುದ್ಧೀಕರಣ ಕಾರ್ಯ ನಡೆಯಿತು. ದೇವರಿಗೆ ಪೂಜೆ ಸಲ್ಲಿಕೆಯಾಯಿತು. ಮಲ್ಲೇಶ್ವರಂನ ಕಾಡುಮಲ್ಲೇಶ್ವರ ದೇವಸ್ಥಾನ ಮತ್ತು ಗಂಗಮ್ಮದೇವಿ ದೇವಸ್ಥಾನದಲ್ಲಿ ಶುಚಿ ಕಾರ್ಯ ನಡೆಯಿತು. ಸಿಬ್ಬಂದಿಗಳು ದೇವಸ್ಥಾನದ ಆವರಣವನ್ನು ಸಂಪೂರ್ಣವಾಗಿ ಶುದ್ಧಗೊಳಿಸಿದ ನಂತರ ಪೂಜಾ ಕಾರ್ಯಗಳೂ ಆರಂಭವಾದವು.
ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದಲೇ ಜಲಾಭಿಷೇಕ, ಕ್ಷೀರಾಭಿಷೇಕದಂತಹ ಪೂಜೆಗಳು ನಡೆದವು. 9 ಗಂಟೆಯಿಂದ ರುದ್ರಾಭಿಷೇಕ ಮತ್ತು ನವಗ್ರಹ ಹೋಮ ನಡೆಯಿತು. ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸಿ, ದೇವರ ದರ್ಶನ ಪಡೆದರು.
ನಿನ್ನೆಯ ಖಗ್ರಾಸ ಚಂದ್ರಗ್ರಹಣದ ಹಿನ್ನೆಲೆಯಲ್ಲಿ ಬೆಳಿಗ್ಗೆ 5 ಗಂಟೆಯಿಂದಲೇ ಶುದ್ಧಿಕಾರ್ಯ ನಡೆಸಲಾಯಿತು. ಜಲಾಭಿಷೇಕ, ರುದ್ರಾಭಿಷೇಕ ಮುಗಿಸಿದ್ದೇವೆ. ಶಿವಲಿಂಗಕ್ಕೆ ಅಲಂಕಾರ ಮಾಡಿ ಪೂಜೆ ನೆರವೇರಿಸಿದ್ದರು. ಭಕ್ತರು ರುದ್ರಾಭಿಷೇಕ ನೀಡಿದ್ದಾರೆ. 9:30ರ ನಂತರ ದೋಷ ಪರಿಹಾರಕ್ಕಾಗಿ ಶಾಂತಿಹೋಮ ನಡೆಸಲಾಗುವುದು.