ಬೆಂಗಳೂರು, ಅಕ್ಟೋಬರ್ 16: ಕರ್ನಾಟಕ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸುವುದನ್ನು ಇನ್ಫೋಸಿಸ್ ಸಂಸ್ಥಾಪಕರಾದ ನಾರಾಯಣ ಮೂರ್ತಿ ಮತ್ತು ಸುಧಾ ಮೂರ್ತಿ ದಂಪತಿ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಈ ಸಮೀಕ್ಷೆಯಲ್ಲಿ ಭಾಗವಹಿಸುವುದು ಅವರಿಗೆ ಅನಗತ್ಯ ಎಂದು ದಂಪತಿ ಸ್ವಯಂ ದೃಢೀಕರಣ ಪತ್ರ ಬರೆದು ಸಹಿ ಮಾಡಿದ್ದಾರೆ. “ನಾವು ಯಾವುದೇ ಹಿಂದುಳಿದ ಜಾತಿಗೆ ಸೇರಿಲ್ಲ. ಆದ್ದರಿಂದ ಈ ಸಮೀಕ್ಷೆಯಿಂದ ಸರ್ಕಾರಕ್ಕೆ ಯಾವುದೇ ಉಪಯೋಗವಿಲ್ಲ” ಎಂದು ಅವರು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ನಡೆಯುತ್ತಿರುವ ಈ ಸಮೀಕ್ಷೆಯು ರಾಜ್ಯದ ಜನಸಂಖ್ಯೆಯ ಸಾಮಾಜಿಕ-ಶೈಕ್ಷಣಿಕ ಸ್ಥಿತಿಯನ್ನು ತಿಳಿಯಲು ಉದ್ದೇಶಿಸಿದೆ. ಇದರಲ್ಲಿ ಗಣತಿದಾರರು ಮನೆ-ಮನೆಗಳನ್ನು ಸಂಪರ್ಕಿಸಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಆದರೆ ಬೆಂಗಳೂರಿನ ಜಯನಗರ 4ನೇ ಟಿ ಬ್ಲಾಕ್‌ನಲ್ಲಿ ಇರುವ ಸುಧಾ ಮೂರ್ತಿ ಅವರ ನಿವಾಸಕ್ಕೆ ಬಂದ ಗಣತಿದಾರರಿಗೆ ದಂಪತಿ ನೇರವಾಗಿ “ಸಮೀಕ್ಷೆ ಬೇಡ” ಎಂದು ಹೇಳಿದ್ದಾರೆ. ಸಮೀಕ್ಷಾ ಪತ್ರಿಕೆಯಲ್ಲೇ ತಮ್ಮ ನಿರಾಕರಣೆಯನ್ನು ಬರೆದು ಸಹಿ ಮಾಡಿ, ಆಯೋಗಕ್ಕೆ ಕಳುಹಿಸಿದ್ದಾರೆ.
ಸ್ವಯಂ ದೃಢೀಕರಣ ಪತ್ರದಲ್ಲಿ ದಂಪತಿ ಹೇಳಿದ್ದು, “ನಾನು ಮತ್ತು ನನ್ನ ಕುಟುಂಬ ಈ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಭಾಗವಹಿಸುವುದಿಲ್ಲ. ವೈಯಕ್ತಿಕ ಕಾರಣಗಳಿಂದ ನಮ್ಮ ಮಾಹಿತಿಯನ್ನು ನೀಡಲು ನಿರಾಕರಿಸುತ್ತೇವೆ. ಈ ಮೂಲಕ ದೃಢೀಕರಿಸುತ್ತೇವೆ.” “ನಾವು ಹಿಂದುಳಿದ ವರ್ಗದ ಯಾವುದೇ ಜಾತಿಗೂ ಸೇರಿಲ್ಲ. ಆದ್ದರಿಂದ ಈ ಸಮೀಕ್ಷೆ ಸರ್ಕಾರಕ್ಕೆ ಯಾವುದೇ ಲಾಭವನ್ನು ನೀಡುವುದಿಲ್ಲ” ಎಂದು ಸ್ಪಷ್ಟಪಡಿಸಿದ್ದಾರೆ. ಈ ಪತ್ರವನ್ನು ಅಕ್ಟೋಬರ್ 10 ರಂದು ಆಯೋಗಕ್ಕೆ ಕಳುಹಿಸಲಾಗಿದೆ.
ಈ ನಿರ್ಧಾರಕ್ಕೆ ಕರ್ನಾಟಕ ಹೈಕೋರ್ಟ್ ಸ್ಪಷ್ಟಪಡಿಸಿದೆ: “ಸಮೀಕ್ಷೆಯಲ್ಲಿ ಭಾಗವಹಿಸುವುದು ಕಡ್ಡಾಯವಲ್ಲ. ಗಣತಿದಾರರು ಯಾರಿಗೂ ಒತ್ತಡ ಹಾಕಲಾರರು.” ಈ ತೀರ್ಪನ್ನು ಆಧರಿಸಿ ದಂಪತಿ ನಿರ್ಧಾರ ಕೈಗೊಂಡಿದ್ದಾರೆ. ಸುಧಾ ಮೂರ್ತಿ ಅವರು ತಮ್ಮ ನಿವಾಸದಲ್ಲೇ ಗಣತಿದಾರರಿಗೆ “ನಮ್ಮ ಮನೆ ಸಮೀಕ್ಷೆ ಬೇಡ” ಎಂದು ನೇರವಾಗಿ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.