ರಾಯಚೂರು: ಮನೆ ಮುಂದೆ ಆಟವಾಡುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿಗಳು ಕಚ್ಚಿ ದಾಳಿ ನಡೆಸಿರುವ ಘಟನೆ ರಾಯಚೂರು ತಾಲೂಕಿನ ದೇವಸುಗೂರು ಗ್ರಾಮದಲ್ಲಿ ನಡೆದಿದೆ. ಬಾಲಕನ ರಕ್ಷಣೆಗೆ ಮುಂದಾಗಿದ್ದ ವೃದ್ಧೆಯೊಬ್ಬರ ಮೇಲೂ ನಾಯಿಗಳು ದಾಳಿ ಮಾಡಿದ್ದು, ಇಬ್ಬರೂ ಗಾಯಗೊಂಡಿದ್ದಾರೆ. ಗಾಯಗೊಂಡ ಬಾಲಕ ಮತ್ತು ವೃದ್ಧೆಯನ್ನು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರಿಗೆ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ. ಈ ಘಟನೆ ಮಂಗಳವಾರ ನಡೆದಿದ್ದರೂ, ತಡವಾಗಿ ಬೆಳಕಿಗೆ ಬಂದಿದೆ.
ಘಟನೆಯ ವಿವರ
ದೇವಸುಗೂರು ಗ್ರಾಮದ ಮೂರನೇ ವಾರ್ಡಿನಲ್ಲಿ ವಾಸಿಸುವ ನಿಖಿಲ್ ಎಂಬ ಬಾಲಕ ತನ್ನ ಮನೆಯ ಮುಂಭಾಗದಲ್ಲಿ ಆಟವಾಡುತ್ತಿದ್ದ. ಈ ವೇಳೆ ದಿಡೀರನೆ ಬಂದ ಬೀದಿ ನಾಯಿಗಳ ಗುಂಪೊಂದು ಅವನ ಮೇಲೆ ದಾಳಿ ನಡೆಸಿತ್ತು. ನಾಯಿಗಳು ಬಾಲಕನ ಕೈಯನ್ನು ಕಚ್ಚಿ ಎಳೆದಾಡಿದ್ದರಿಂದ ಅವನಿಗೆ ತೀವ್ರವಾದ ಗಾಯಗಳಾಗಿವೆ. ಈ ದೃಶ್ಯವನ್ನು ಕಂಡು ಆತಂಕಗೊಂಡ ಸ್ಥಳೀಯ ವೃದ್ಧೆಯೊಬ್ಬರು ಬಾಲಕನನ್ನು ರಕ್ಷಿಸಲು ಮುಂದಾದರು. ಆದರೆ, ಆಕೆಯ ಮೇಲೂ ನಾಯಿಗಳು ದಾಳಿ ಮಾಡಿದೆ.
ಆಸ್ಪತ್ರೆಗೆ ದಾಖಲು
ಗಾಯಗೊಂಡ ಬಾಲಕ ನಿಖಿಲ್ ಮತ್ತು ವೃದ್ಧೆಯನ್ನು ತಕ್ಷಣವೇ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ರೇಬೀಸ್ ಚಿಕಿತ್ಸೆ ಸೇರಿದಂತೆ ತುರ್ತು ವೈದ್ಯಕೀಯ ಸೇವೆಯನ್ನು ಒದಗಿಸಲಾಗಿದೆ. ಇಬ್ಬರ ಗಾಯಗಳು ಗಂಭೀರವಾಗಿದ್ದರೂ, ಸೂಕ್ತ ಚಿಕಿತ್ಸೆಯಿಂದ ಅವರು ಚೇತರಿಸಿಕೊಳ್ಳುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸಿದ್ದಾರೆ.